ADVERTISEMENT

ದಾವಣಗೆರೆ| ಮರಳು ಬ್ಲಾಕ್ ಹರಾಜು ಪ್ರಕ್ರಿಯೆ ವಿಳಂಬ: ಕಟ್ಟಡ ನಿರ್ಮಾಣಕ್ಕೆ ಗ್ರಹಣ

ಜಿ.ಬಿ.ನಾಗರಾಜ್
Published 10 ನವೆಂಬರ್ 2025, 5:51 IST
Last Updated 10 ನವೆಂಬರ್ 2025, 5:51 IST
<div class="paragraphs"><p>ದಾವಣಗೆರೆಯ ಎಸ್.ಎಸ್. ಬಡಾವಣೆಯಲ್ಲಿ ನಿರ್ಮಾಣ ಹಂತದ ಕಟ್ಟಡ</p></div>

ದಾವಣಗೆರೆಯ ಎಸ್.ಎಸ್. ಬಡಾವಣೆಯಲ್ಲಿ ನಿರ್ಮಾಣ ಹಂತದ ಕಟ್ಟಡ

   

–ಪ್ರಜಾವಾಣಿ ಚಿತ್ರ

ದಾವಣಗೆರೆ: ಜಿಲ್ಲೆಯ ತುಂಗಭದ್ರಾ ನದಿಪಾತ್ರದಲ್ಲಿ ಗುರುತಿಸಿದ ಮರಳು ಬ್ಲಾಕ್‌ಗಳ ಹರಾಜು ಪ್ರಕ್ರಿಯೆಯಲ್ಲಿ ಆಗಿರುವ ವಿಳಂಬ ಹಾಗೂ ಕಟ್ಟಡ ಪ್ರಾರಂಭ ಪ್ರಮಾಣಪತ್ರ (ಒ.ಸಿ), ಸ್ವಾಧೀನಾನುಭವ ಪ್ರಮಾಣಪತ್ರ (ಸಿ.ಸಿ) ವಿತರಣೆಯಲ್ಲಿ ಎದುರಾದ ತೊಡಕುಗಳಿಂದಾಗಿ ನಿರ್ಮಾಣ ಉದ್ಯಮಕ್ಕೆ ಗ್ರಹಣ ಹಿಡಿದಿದೆ.

ADVERTISEMENT

ಚಿಕ್ಕ ನಿವೇಶನಗಳಲ್ಲಿ ನಿರ್ಮಾಣವಾಗುವ ಕಟ್ಟಡಗಳಿಗೆ ಒ.ಸಿ, ಸಿ.ಸಿಯಿಂದ ರಾಜ್ಯ ಸರ್ಕಾರ ಇತ್ತೀಚೆಗೆ ವಿನಾಯಿತಿ ಕಲ್ಪಿಸಿದೆ. ಇದರ ಪರಿಣಾಮವಾಗಿ ಉದ್ಯಮದಲ್ಲಿ ಚೇತರಿಕೆ ಕಾಣುವ ಲಕ್ಷಣಗಳು ಗೋಚರಿಸಿವೆ. ಮರಳು ಬ್ಲಾಕ್‌ಗಳ ಹರಾಜು ಪ್ರಕ್ರಿಯೆ ಡಿಸೆಂಬರ್‌ಗೆ ಪೂರ್ಣಗೊಳ್ಳುವ ಸಾಧ್ಯತೆ ಇದ್ದು, ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಮರಳನ್ನು ಸುಲಭವಾಗಿ ಪಡೆಯಲು ಇನ್ನೂ ಒಂದೂವರೆ ತಿಂಗಳು ಕಾಯಬೇಕಿದೆ.

ಮರಳು ಕೊರತೆ:

ಜಿಲ್ಲೆಯಲ್ಲಿ ಹರಿಯುತ್ತಿರುವ ತುಂಗಭದ್ರಾ ನದಿಯು ಮರಳನ್ನು ಹೇರಳವಾಗಿ ಹೊಂದಿದೆ. ನೂತನ ಮರಳು ನೀತಿಯ ಅನ್ವಯ ಜಿಲ್ಲೆಯಲ್ಲಿ 24 ಮರಳು ಬ್ಲಾಕ್‌ಗಳನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆ ಗುರುತಿಸಿದೆ. ಈ ಬ್ಲಾಕ್‌ಗಳ ಹರಾಜು ಪ್ರಕ್ರಿಯೆ ಜನವರಿಯಿಂದ ಆರಂಭವಾಗಿದ್ದರೂ ಈವರೆಗೆ ಪೂರ್ಣಗೊಂಡಿಲ್ಲ. ಇದರಿಂದ ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ಮರಳಿಗೆ ಹಾವೇರಿ, ಶಿವಮೊಗ್ಗ ಸೇರಿ ಹೊರಗಿನ ಜಿಲ್ಲೆಗಳನ್ನು ಅವಲಂಬಿಸಬೇಕಾಗಿದೆ.

ಜಿಲ್ಲೆಯಲ್ಲಿ 2017–18ರಲ್ಲಿ ಮರಳು ಬ್ಲಾಕ್‌ಗಳ ಹರಾಜು ಪ್ರಕ್ರಿಯೆ ನಡೆದಿತ್ತು. ಐದು ವರ್ಷಗಳ ಅವಧಿ 2022–23ರಲ್ಲಿ ಪೂರ್ಣಗೊಂಡಿತ್ತು. ಪರಿಸರ ನಿರಾಕ್ಷೇಪಣಾ ಪತ್ರ (ಇಸಿ) ಸಿಗುವುದು ವಿಳಂಬವಾಗಿದ್ದರಿಂದ ಐದು ಮರಳು ಬ್ಲಾಕ್‌ಗಳ ಅವಧಿ 2024ರವರೆಗೆ ಮುಂದುವರಿದಿತ್ತು. ಪರಿಷ್ಕೃತ ಮರಳು ಬ್ಲಾಕ್‌ಗಳ ಪಟ್ಟಿಯನ್ನು ಸಿದ್ಧಪಡಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ 4 ಬ್ಲಾಕ್‌ಗಳನ್ನು ಸರ್ಕಾರಿ ಕಾಮಗಾರಿಗಳಿಗೆ ಮೀಸಲಿಟ್ಟಿತ್ತು. ಉಳಿದ 20 ಬ್ಲಾಕ್‌ಗಳನ್ನು ಹರಾಜು ಪ್ರಕ್ರಿಯೆಗೆ ಒಳಪಡಿಸಿತ್ತು. ಇದರಿಲ್ಲಿ 19 ಬ್ಲಾಕ್‌ಗಳನ್ನು ಗುತ್ತಿಗೆದಾರರು ಪಡೆದಿದ್ದಾರೆ.

ಜಿಲ್ಲೆಯಲ್ಲಿ ಜೂನ್‌ 15ರಿಂದ ಅಕ್ಟೋಬರ್‌ 15ರವರೆಗೆ ಮರಳು ಗಣಿಗಾರಿಕೆಗೆ ನಿರ್ಬಂಧವಿದೆ. ಉಳಿದ ಎಲ್ಲ ದಿನಗಳಲ್ಲಿ ಮರಳು ತೆಗೆಯಲು ಅವಕಾಶವಿದೆ. ತುಂಗಭದ್ರಾ ನದಿ ನೀರಿನ ಮಟ್ಟ ಇನ್ನೂ ಇಳಿಯದೇ ಇರುವುದರಿಂದ ಗಣಿ ಮತ್ತು ಭೂವಿಜ್ಞಾನ ಹಾಗೂ ಭೂದಾಖಲೆಗಳ ಇಲಾಖೆಯ ಜಂಟಿ ಸಮೀಕ್ಷೆಗೆ ತೊಡಕಾಗಿದೆ.

ಮರಳಿಗೆ ಬೇಡಿಕೆ ಸೃಷ್ಟಿಯಾಗುತ್ತಿದ್ದಂತೆ ಮರಳು ಅಕ್ರಮ ಗಣಿಗಾರಿಕೆ ಕೂಡ ಹೆಚ್ಚಾಗಿದೆ. ಹೊನ್ನಾಳಿ ಪಟ್ಟಣಕ್ಕೆ ಹೊಂದಿಕೊಂಡ ತುಂಗಭದ್ರಾ ನದಿಯಲ್ಲಿ ಮರಳು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದ ಇಬ್ಬರು ನೀರುಪಾಲಾಗಿದ್ದಾರೆ. ನದಿಯಿಂದ ಮರಳು ಹೊರತೆಗೆದು ಎತ್ತಿನ ಗಾಡಿಯಲ್ಲಿ ಸಾಗಣೆ ಮಾಡುವುದಕ್ಕೆ ಇನ್ನೂ ಕಡಿವಾಣ ಬಿದ್ದಿಲ್ಲ.

ನಿರೀಕ್ಷೆಯಂತೆ ಮರಳು ಸಿಗದಿರುವುದರಿಂದ ಕಟ್ಟಡ ನಿರ್ಮಾಣಕ್ಕೆ ‘ಎಂ–ಸ್ಯಾಂಡ್‌’ ಬಳಕೆ ಹೆಚ್ಚಾಗಿದೆ. ನಿರ್ಮಾಣ ಹಂತದ ಕಟ್ಟಡಗಳ ಎದುರು ಮರಳಿಗಿಂತ ‘ಎಂ–ಸ್ಯಾಂಡ್‌’ ಹೆಚ್ಚಿನ ಪ್ರಮಾಣದಲ್ಲಿ ಕಾಣುತ್ತದೆ. ದುಬಾರಿ ಬೆಲೆಯ ಮರಳಿಗಿಂತ ‘ಎಂ–ಸ್ಯಾಂಡ್‌’ ಸೂಕ್ತ ಎಂಬ ನಿರ್ಧಾರಕ್ಕೆ ಜನರು ಬಂದಂತಿದೆ.

ಒ.ಸಿ, ಸಿ.ಸಿ ಗೊಂದಲ:

ಸ್ಥಳೀಯ ಸಂಸ್ಥೆಗಳು ನೀಡುವ ಕಟ್ಟಡ ಪ್ರಾರಂಭ ಪ್ರಮಾಣಪತ್ರ (ಒ.ಸಿ) ಹಾಗೂ ಸ್ವಾಧೀನಾನುಭವ ಪ್ರಮಾಣಪತ್ರ (ಸಿ.ಸಿ) ವಿತರಣೆಯಲ್ಲಿ ಎದುರಾದ ತೊಡಕುಗಳು ಕೂಡ ಕಟ್ಟಡ ನಿರ್ಮಾಣ ಉದ್ಯಮಕ್ಕೆ ಬಲವಾದ ಪೆಟ್ಟುಕೊಟ್ಟಿವೆ. ಇದರಿಂದ ಹೊಸ ಮನೆ, ಕಟ್ಟಡ ನಿರ್ಮಾಣದಿಂದ ಬಹುತೇಕರು ಹಿಂದೆ ಸರಿದಿದ್ದಾರೆ.

ಸುಪ್ರೀಂ ಕೋರ್ಟ್‌ ಮಾರ್ಗಸೂಚಿಯ ಪ್ರಕಾರ ಕಟ್ಟಡ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡರೆ ಮಾತ್ರ ಒ.ಸಿ ಪಡೆಯಲು ಅವಕಾಶವಿದೆ. ನಕ್ಷೆ ಅನುಮೋದನೆಯಂತೆ ನಿರ್ಮಾಣವಾಗದ ಕಟ್ಟಡಗಳಿಗೆ ಸ್ಥಳೀಯ ಸಂಸ್ಥೆಗಳು ಸಿ.ಸಿ. ನೀಡುವುದಿಲ್ಲ. 1,200 ಚದರ ಅಡಿಯ ಕಟ್ಟಡಗಳಿಗೆ ರಾಜ್ಯ ಸರ್ಕಾರ ವಿನಾಯಿತಿ ಕಲ್ಪಿಸಿದೆ. ಆದರೂ ಕಟ್ಟಡ ನಿರ್ಮಾಣ ಉದ್ಯಮ ಚೇತರಿಕೆ ಕಂಡಿಲ್ಲ ಎಂದು ಗುತ್ತಿಗೆದಾರರ ಅಳಲು.

19 ಮರಳು ಬ್ಲಾಕ್‌ಗಳ ಹರಾಜು ಪ್ರಕ್ರಿಯೆ ಅಂತಿಮ ಹಂತ ತಲುಪಿದೆ. ಪ್ರತಿ ಟನ್‌ ಮರಳಿಗೆ ₹ 850 ದರ ನಿಗದಿ ಮಾಡಲಾಗಿದೆ. ಪರಿಸರ ನಿರಾಕ್ಷೇಪಣಾ ಪತ್ರ ಸಿಕ್ಕ ತಕ್ಷಣ ಮರಳು ಪೂರೈಕೆ ಆಗಲಿದೆ
ಸಿ.ಆರ್‌.ರಶ್ಮಿ ಹಿರಿಯ ಭೂವಿಜ್ಞಾನಿ ಗಣಿ ಮತ್ತು ಭೂವಿಜ್ಞಾನ ಇಲಾಖೆ
ಒ.ಸಿ ಮತ್ತು ಸಿ.ಸಿ.ಯಿಂದಾಗಿ ಕಟ್ಟಡ ನಿರ್ಮಾಣ ಉದ್ಯಮ ಸೊರಗಿದೆ. ಮನೆ ಕಟ್ಟಲು ನಿರ್ಧರಿಸಿದವರು ಕೂಡ ಕಾದು ನೋಡುತ್ತಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಪೂರಕವಾಗಿರುವ ಉದ್ಯಮಗಳನ್ನೂ ಬಾಧಿಸಿದೆ
ಪ್ರವೀಣ್‌ ಕುಮಾರ್‌ ಸಿವಿಲ್‌ ಎಂಜಿನಿಯರ್‌
ಒ.ಸಿ. ಮತ್ತು ಸಿ.ಸಿ ಗೊಂದಲದಿಂದಾಗಿ ಕಟ್ಟಡ ನಿರ್ಮಾಣ ಚಟುವಟಿಕೆ ಸ್ಥಗಿತವಾಗಿದೆ. ಚಿಕ್ಕ ನಿವೇಶನದ ಕಟ್ಟಡಗಳಿಗೆ ಪರಿಹಾರ ಸಿಕ್ಕಿದ್ದರೂ ವಾಣಿಜ್ಯ ಉದ್ದೇಶ ದೊಡ್ಡ ನಿವೇಶನದ ಕಟ್ಟಡದ ಗೊಂದಲ ಮುಂದುವರಿದಿದೆ
ಗಿರೀಶ್‌ ದೇವರಮನೆ ಗುತ್ತಿಗೆದಾರ

ರಾಂಪುರ ಬ್ಲಾಕ್‌ಗೆ ಹಿಂದೇಟು

ಹೊನ್ನಾಳಿ ತಾಲ್ಲೂಕಿನ ತುಂಗಭದ್ರಾ ನದಿಯ ರಾಂಪುರ ಮರಳು ಬ್ಲಾಕ್‌ ಗುತ್ತಿಗೆ ಪಡೆಯಲು ಯಾರೊಬ್ಬರೂ ಉತ್ಸುಕತೆ ತೋರಿಲ್ಲ. ಹೀಗಾಗಿ ಈ ಮರಳು ಬ್ಲಾಕ್‌ ಹರಾಜು ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಮರಳು ಬ್ಲಾಕ್‌ ಸಮೀಪದಲ್ಲಿರುವ ದೇಗುಲದ ಪ್ರಭಾವದಿಂದ ಗುತ್ತಿಗೆದಾರರು ಹಿಂದೇಟು ಹಾಕಿದ್ದಾರೆ. ‘ರಾಂಪುರ ಬ್ಲಾಕ್‌ ಹಲವು ವರ್ಷಗಳಿಂದ ಇದೆ. ಈ ಬ್ಲಾಕ್‌ ಗುತ್ತಿಗೆ ಪಡೆದವರಲ್ಲಿ ನಷ್ಟ ಅನುಭವಿಸಿದವರೇ ಹೆಚ್ಚು. ದೇಗುಲದ ಪ್ರಭಾವದಿಂದ ಈ ನಷ್ಟ ಉಂಟಾಗಿದೆ ಎಂಬ ಭಾವನೆ ಅನೇಕರಲ್ಲಿದೆ. ಹೀಗಾಗಿ ಹರಾಜು ಪ್ರಕ್ರಿಯೆಯಲ್ಲಿ ಯಾರೊಬ್ಬರೂ ಪಾಲ್ಗೊಂಡಿಲ್ಲ’ ಎಂದು ಮೂಲಗಳು ಮಾಹಿತಿ ನೀಡಿವೆ.

‘ಮರಳು ನೀತಿ ಅನುಷ್ಠಾನದಲ್ಲಿ ಮುಂದೆ’

ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿದ ನೂತನ ಮರಳು ನೀತಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿರುವ ಪರಿಣಾಮ ಕೊಂಚ ತಡವಾಗಿರಬಹುದು. ಆದರೆ ಮರಳು ಬ್ಲಾಕ್‌ ಹರಾಜು ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ರಾಜ್ಯದ ಮೊದಲ ಜಿಲ್ಲೆ ದಾವಣಗೆರೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಸಿ.ಆರ್‌. ರಶ್ಮಿ ತಿಳಿಸಿದ್ದಾರೆ. ‘ನೂತನ ಮರಳು ನೀತಿ’ಯನ್ನು ರಾಜ್ಯ ಸರ್ಕಾರ ರೂಪಿಸಿದೆ. ಇದರ ಅನ್ವಯ ಮರಳು ಬ್ಲಾಕ್‌ ಹರಾಜು ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಪರಿಸರ ನಿರಾಕ್ಷೇಪಣಾ ಪತ್ರ (ಇಸಿ) ಪಡೆಯುವಲ್ಲಿ ವಿಳಂಬವಾಗುವ ಸಾಧ್ಯತೆ ಇದೆ. ಜನವರಿಯಿಂದ ಸಾರ್ವಜನಿಕರಿಗೆ ಮರಳು ಲಭ್ಯವಾಗಲಿದೆ’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.