ADVERTISEMENT

ಪಟೇಲರ ಕನಸು ನನಸಾಗಿಸುವ ಜವಾಬ್ದಾರಿ: ಬಿಜೆಪಿ ಸಂಸದ ಗೋವಿಂದ ಕಾರಜೋಳ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 7:10 IST
Last Updated 17 ನವೆಂಬರ್ 2025, 7:10 IST
ದಾವಣಗೆರೆಯ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಬಿಜೆಪಿ ಸಂಸದ ಗೋವಿಂದ ಕಾರಜೋಳ ಏಕತಾ ಪಾದಯಾತ್ರೆಗೆ ಚಾಲನೆ ನೀಡಿದರು ಪ್ರಜಾವಾಣಿ ಚಿತ್ರ
ದಾವಣಗೆರೆಯ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಬಿಜೆಪಿ ಸಂಸದ ಗೋವಿಂದ ಕಾರಜೋಳ ಏಕತಾ ಪಾದಯಾತ್ರೆಗೆ ಚಾಲನೆ ನೀಡಿದರು ಪ್ರಜಾವಾಣಿ ಚಿತ್ರ   

ದಾವಣಗೆರೆ: ‘ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಬಾಯ್‌ ಪಟೇಲರು ಭಾರತವನ್ನು ಒಂದುಗೂಡಿಸಿದ್ದಾರೆ. ಇದೀಗ ಅವರ ಕನಸುಗಳನ್ನು ಒಂದು ನನಸಾಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ’ ಎಂದು ಬಿಜೆಪಿ ಸಂಸದ ಗೋವಿಂದ ಕಾರಜೋಳ ಹೇಳಿದರು. 

ಇಲ್ಲಿನ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಸರ್ದಾರ್ ವಲ್ಲಭಭಾಯ್‌ ಪಟೇಲ್ ಅವರ 150ನೇ ಜನ್ಮ ದಿನಾಚರಣೆ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಏಕತಾ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. 

‘ಭಾರತದ ಏಕೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದ್ದ ವಲ್ಲಭಬಾಯ್‌ ಪಟೇಲರ ಜನ್ಮದಿನದ ಸ್ಮರಣಾರ್ಥವಾಗಿ ದೇಶಾದ್ಯಂತ ಕಾರ್ಯಕ್ರಮ ನಡೆಸಲಾಗುತ್ತಿದೆ’ ಎಂದು ಹೇಳಿದರು.

ADVERTISEMENT

‘ಯುವ ಜನರು ದೇಶದ ಏಕತೆ, ಐಕ್ಯತೆ ಮತ್ತು ಘನತೆಯನ್ನು ಎತ್ತಿ ಹಿಡಿಯುವ ಮೂಲಕ ಭಾರತ ವಿಶ್ವದ ಹಿರಿಯಣ್ಣ ನಾಗಬೇಕು ಎಂಬ ಕನಸನ್ನು ಹೊತ್ತು ಕೆಲಸ ಮಾಡಬೇಕಿದೆ’ ಎಂದರು. 

‘ಪಟೇಲರು ಸ್ವಾತಂತ್ರ್ಯ ನಂತರ ಹರಿದು ಹಂಚಿ ಹೋಗಿದ್ದ 565 ಸಂಸ್ಥಾನಗಳ ರಾಜ, ಮಹಾ ರಾಜರನ್ನು ಒಪ್ಪಿಸಿ ಭಾರತದೊಂದಿಗೆ ವಿಲೀನಗೊಳಿಸಿದರು. ವಿಲೀನಕ್ಕೆ ಒಪ್ಪದವರನ್ನು ಬಗ್ಗು ಬಡಿದು ದೇಶಕ್ಕೆ ಅರ್ಥಪೂರ್ಣವಾದ ಸ್ವಾತಂತ್ರ್ಯವನ್ನು ತಂದುಕೊಟ್ಟರು’ ಎಂದರು. 

‘ಎಲ್ಲರೂ ಒಗ್ಗೂಡಿ ದೇಶವನ್ನು ಕಟ್ಟುವುದೇ ಏಕತಾ ಪಾದಯಾತ್ರೆಯ ಮೂಲ ಉದ್ದೇಶವಾಗಿದೆ. ವಿಶೇಷವಾಗಿ ಯುವಜನರು ಈ ಬಗ್ಗೆ ಹೆಚ್ಚು ತಿಳಿದುಕೊಂಡು ದೇಶದ ಅಭಿವೃದ್ಧಿಗೆ ಕಟಿ ಬದ್ಧರಾಗಬೇಕು. ದೂರ ದೃಷ್ಟಿಯೊಂದಿಗೆ ಕೇಂದ್ರ ಸರ್ಕಾರ ಈ ಕಾರ್ಯಕ್ರಮ ಆಯೋಜಿಸಿರುವುದು ಅರ್ಥಪೂರ್ಣವಾಗಿದೆ’ ಎಂದು ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಿ.ಪಿ.ನಾಗರಾಜಪ್ಪ ಹೇಳಿದರು. 

ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ್, ಎಂ.ಪಿ.ರೇಣುಕಾಚಾರ್ಯ, ವಿಧಾನ ಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ರಾಜಶೇಖರ್, ಮಾಜಿ ಶಾಸಕ ಎನ್.ಬಸವರಾಜ್ ನಾಯ್ಕ ಇತರರು ಉಪಸ್ಥಿತರಿದ್ದರು. 

ಯುಬಿಡಿಟಿ ಕಾಲೇಜಿನ 300ಕ್ಕೂ ಅಧಿಕ ವಿದ್ಯಾರ್ಥಿಗಳು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.