ADVERTISEMENT

ಹರಿಹರ | ವೃತ್ತದಲ್ಲೇ ಹೂವು ಮಾರಾಟ; ಸಂಚಾರಕ್ಕೆ ಅಡ್ಡಿ

ಹರಿಹರಕ್ಕೆ ಬೇಕು ಹೂವಿನ ಮಾರುಕಟ್ಟೆ

ಇನಾಯತ್ ಉಲ್ಲಾ ಟಿ.
Published 19 ಮಾರ್ಚ್ 2023, 6:24 IST
Last Updated 19 ಮಾರ್ಚ್ 2023, 6:24 IST
ಹರಿಹರದ ವಾಹನ ದಟ್ಟಣೆಯ ಗಾಂಧಿ ವೃತ್ತದಲ್ಲಿ ಜನ, ವಾಹನ ಸಂಚಾರಕ್ಕೆ ಅಡ್ಡಿಯಾಗುವಂತೆ ಹೂವಿನ ವ್ಯಾಪಾರ ನಡೆಯುತ್ತಿರುವುದು.
ಹರಿಹರದ ವಾಹನ ದಟ್ಟಣೆಯ ಗಾಂಧಿ ವೃತ್ತದಲ್ಲಿ ಜನ, ವಾಹನ ಸಂಚಾರಕ್ಕೆ ಅಡ್ಡಿಯಾಗುವಂತೆ ಹೂವಿನ ವ್ಯಾಪಾರ ನಡೆಯುತ್ತಿರುವುದು.   

ಹರಿಹರ: ರಾಜ್ಯದ ನಾಲ್ಕು ದಿಕ್ಕುಗಳಿಗೆ ಸಂಪರ್ಕ ಕಲ್ಪಿಸುವ ಹಾಗೂ ಎರಡು ಪ್ರಮುಖ ಹೆದ್ದಾರಿಗಳು ಹಾದುಹೋಗಿರುವ ಹರಿಹರದ ಗಾಂಧಿ ವೃತ್ತದ ಬಳಿ ಆರು ತಿಂಗಳಿಂದ ಹೋಲ್‌ಸೇಲ್ ಮತ್ತು ಸಗಟು ಹೂವಿನ ಮಾರುಕಟ್ಟೆ ನಡೆಯುತ್ತಿದೆ.

ಸರ್ಕಲ್‌ನಿಂದ ಹರಪನಹಳ್ಳಿ ಕಡೆಯ ತಿರುವಿನಲ್ಲಿ 100 ಅಡಿ ಉದ್ದದ ಪ್ರದೇಶದಲ್ಲಿ ಹತ್ತಾರು ಹೂವಿನ ವ್ಯಾಪಾರಿಗಳು ವ್ಯಾಪಾರ ಮಾಡುತ್ತಿದ್ದಾರೆ. ಹೂವು ಖರೀದಿಗೆ ಬರುವವರು ತಮ್ಮ ಬೈಕ್, ಕಾರು, ಜೀಪುಗಳನ್ನು ಸರ್ಕಲ್‌ನಲ್ಲೇ ನಿಲ್ಲಿಸುತ್ತಾರೆ.


ಬೆಳಿಗ್ಗೆ ಒಂದೆರಡು ಗಂಟೆ ವ್ಯಾಪಾರ ನಡೆಯುತ್ತದೆ ಎಂದರೆ ಸರಿ ಎನ್ನಬಹುದು. ಆದರೆ, ಈ ಅಂಗಡಿಗಳು ಬೆಳಿಗ್ಗೆ 6ರಿಂದ ರಾತ್ರಿ 9ರವರೆಗೂ ಇರುತ್ತವೆ. ಪರಿಣಾಮವಾಗಿ ರಸ್ತೆ ಬದಿ ಸಂಚರಿಸುವ ಪಾದಚಾರಿಗಳು, ವಿದ್ಯಾರ್ಥಿಗಳು, ಸೈಕಲ್, ಬೈಕ್ ಸವಾರರು ಜನದಟ್ಟಣೆಯ ಈ ರಸ್ತೆ ಮಧ್ಯೆಯೇ ಸಾಗಬೇಕಿದೆ.

ADVERTISEMENT

ಇದರಿಂದ ನಿತ್ಯ ಹಲವಾರು ಸಣ್ಣ, ಪುಟ್ಟ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಅಪಘಾತಕ್ಕೆ ಒಳಗಾದವರು ಎದ್ದು– ಬಿದ್ದು, ಕೊಳಕಾದ ಬಟ್ಟೆ ಒರೆಸಿಕೊಂಡು, ಕುಂಟುತ್ತ, ವ್ಯವಸ್ಥೆಯನ್ನು ಬೈಯ್ದುಕೊಳ್ಳುತ್ತಾ ಮುಂದೆ ಸಾಗುತ್ತಿದ್ದಾರೆ. ಈ ರಸ್ತೆಯಲ್ಲಿ ನಿತ್ಯ 600 ಕೆಎಸ್‌ಆರ್‌ಟಿಸಿ ಬಸ್‌ಗಳು ಹಾಗೂ 800ಕ್ಕೂ ಹೆಚ್ಚು ಭಾರಿ ವಾಹನಗಳು ಸಂಚರಿಸುತ್ತವೆ.

‘ಇದೆ ವೃತ್ತದ ಸಮೀಪ ಪೊಲೀಸ್ ಠಾಣೆ ಇದೆ. ಈ ರಸ್ತೆ ಮೂಲಕವೇ ನಿತ್ಯ ಪೌರಾಯುಕ್ತರು ಸಂಚರಿಸುತ್ತಾರೆ. ಸಮಸ್ಯೆಯನ್ನು ಕಣ್ಣಾರೆ ಕಂಡೂ ಕಾಣದಂತೆ ಸಾಗುತ್ತಾರೆ. ನಾವಂತೂ ಕಾರು, ಜೀಪುಗಳಲ್ಲಿ ಸಂಚರಿಸುವವರು, ಪಾದಚಾರಿ, ಸೈಕಲ್, ಬೈಕ್‌ನವರಿಗೆ ತೊಂದರೆಯಾದರೆ ನಮಗೇನು ಎಂಬ ಧೋರಣೆ ಇವರಲ್ಲಿರುವಂತೆ ಭಾಸವಾಗುತ್ತಿದೆ’ ಎಂದು ಪಾದಚಾರಿಯೊಬ್ಬರು ದೂರಿದರು.

ಬೇಕು ಹೂವಿನ ಮಾರುಕಟ್ಟೆ: 1.25 ಲಕ್ಷ ಜನಸಂಖ್ಯೆ ಇರುವ ನಗರದಲ್ಲಿ ಈವರೆಗೂ ಹೂವಿನ ಮಾರುಕಟ್ಟೆ ಇಲ್ಲವೆಂಬುದೇ ಸೂಜಿಗದ ವಿಷಯ. ಹೂವಿನ ವ್ಯಾಪಾರಕ್ಕೆ ನಗರಸಭೆಯವರೇ ಸೂಕ್ತ ಸ್ಥಳ ನಿಗದಿ ಮಾಡಬೇಕು. ಅಲ್ಲಿ ಹೋಲ್‌ಸೇಲ್ ಮತ್ತು ರಿಟೇಲ್ ವ್ಯಾಪಾರಕ್ಕೆ ವ್ಯವಸ್ಥೆ ಕಲ್ಪಿಸಬೇಕಿದೆ. ಅದರಿಂದ ಜನಸಾಮಾನ್ಯರಿಗೆ ಆಗುತ್ತಿರುವ ಕಿರಿ, ಕಿರಿ ತಪ್ಪುವ ಜೊತೆಗೆ ಬಾಡಿಗೆ ರೂಪದಲ್ಲಿ ನಗರಸಭೆಗೆ ಆದಾಯವೂ ಬರುತ್ತದೆ ಎನ್ನುತ್ತಾರೆ ವ್ಯಾಪಾರಿಗಳು.

ಹೂವಿನ ಮಾರುಕಟ್ಟೆ ಸ್ಥಳಾಂತರಿಸಿ

ದಿನದ 24 ಗಂಟೆಯೂ ಬಸ್‌, ಲಾರಿ, ಲಘು ವಾಹನಗಳು ಸಂಚರಿಸುವ ಈ ವೃತ್ತ ಅಪಾಯಕಾರಿಯಾಗಿದೆ. ಈ ವೃತ್ತ ದಾಟಿ ಮುಂದೆ ಹೋದರೆ ಬದುಕಿದೆಾ ಬಡ ಜೀವವೇ ಎಂದು ಮನಸ್ಸು ಹೇಳುತ್ತದೆ. ನಗರಸಭೆಯವರು ಕೂಡಲೇ ಸೂಕ್ತ ಸ್ಥಳಕ್ಕೆ ಹೂವಿನ ಮಾರುಕಟ್ಟೆ ಸ್ಥಳಾಂತರಿಸಿ ವಾಹನ ಸಂಚಾರಕ್ಕೆ ಮುಕ್ತಗೊಳಿಸಬೇಕು.

–ಪಿ.ಜೆ.ಮಹಾಂತೇಶ್, ದಸಂಸ, ಹರಿಹರ ತಾಲ್ಲೂಕು ಸಂಚಾಲಕ

ಹಳೆ ಕೋರ್ಟ್ ಹಿಂಭಾಗದಲ್ಲಿ ವ್ಯಾಪಾರಕ್ಕೆ ಸಣ್ಣ ಮಳಿಗೆಗಳ ಕಾಮಗಾರಿ ಅಂತಿಮ ಹಂತದಲ್ಲಿದೆ. ಶೀಘ್ರವೇ ಅಲ್ಲಿಗೆ ಹೂವಿನ ವ್ಯಾಪಾರಿಗಳನ್ನು ಸ್ಥಳಾಂತರಿಸಲಾಗುವುದು.

–ಐಗೂರು ಬಸವರಾಜ್, ಪೌರಾಯುಕ್ತ, ನಗರಸಭೆ, ಹರಿಹರ

ವ್ಯಾಪಾರಕ್ಕೆ ಒಂದೆಡೆ ಜಾಗ ಮತ್ತು ಮಳಿಗೆಗಳು ನಿಗದಿ ಆದರೆ ಹೂವಿನ ವ್ಯಾಪಾರಕ್ಕೆ ಅನುಕೂಲವಾಗುತ್ತದೆ.
–ಕೇಶವ ಮೂರ್ತಿ, ಹೂವಿನ ವ್ಯಾಪಾರಿ, ಹರಿಹರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.