ADVERTISEMENT

ದಾವಣಗೆರೆ | ತೂಕದಲ್ಲಿ ವ್ಯತ್ಯಾಸ: ಏಳು ಅಧಿಕಾರಿಗಳಿಗೆ ನೋಟಿಸ್‌

ರಾಜ್ಯ ಆಹಾರ ಭದ್ರತೆ ಆಯೋಗದ ಅಧ್ಯಕ್ಷ ಡಾ.ಎಚ್. ಕೃಷ್ಣ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 4:07 IST
Last Updated 21 ಫೆಬ್ರುವರಿ 2026, 4:07 IST
ದಾವಣಗೆರೆಯ ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಕರ್ನಾಟಕ ರಾಜ್ಯ ಆಹಾರ ಆಯೋಗದ ಸಭೆಯಲ್ಲಿ ಅಧ್ಯಕ್ಷ ಎಚ್. ಕೃಷ್ಣ ಮಾತನಾಡಿದರು –ಪ್ರಜಾವಾಣಿ ಚಿತ್ರ
ದಾವಣಗೆರೆಯ ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಕರ್ನಾಟಕ ರಾಜ್ಯ ಆಹಾರ ಆಯೋಗದ ಸಭೆಯಲ್ಲಿ ಅಧ್ಯಕ್ಷ ಎಚ್. ಕೃಷ್ಣ ಮಾತನಾಡಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಜಿಲ್ಲೆಯಲ್ಲಿನ ಆಹಾರ ಭದ್ರತೆ ಮತ್ತು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಮೂರು ದಿನ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಪೌಷ್ಟಿಕ ಆಹಾರ ನೀಡದ, ತೂಕದಲ್ಲಿ ವ್ಯತ್ಯಾಸ ಮಾಡಿದ ಏಳು ಅಧಿಕಾರಿಗಳಿಗೆ ನೋಟಿಸ್‌ ನೀಡಲಾಗಿದೆ ಎಂದು ರಾಜ್ಯ ಆಹಾರ ಭದ್ರತೆ ಆಯೋಗದ ಅಧ್ಯಕ್ಷ ಡಾ.ಎಚ್. ಕೃಷ್ಣ ತಿಳಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಆಯೋಗದ ತಂಡವು ಜಿಲ್ಲೆಯ ಅಕ್ಕಿ ಗೋದಾಮು, ನ್ಯಾಯಬೆಲೆ ಅಂಗಡಿ, ಸರ್ಕಾರಿ ಹಾಸ್ಟೆಲ್‍, ಸರ್ಕಾರಿ ಶಾಲೆಯಲ್ಲಿನ ಬಿಸಿಯೂಟ, ಅಂಗನವಾಡಿ, ನಿರಾಶ್ರಿತರ ಪರಿಹಾರ ಕೇಂದ್ರ, ಸರ್ಕಾರಿ ಆಸ್ಪತ್ರೆ ಮತ್ತು ವೃದ್ಧಾಶ್ರಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ವೇಳೆ ಕಂಡುಬಂದ ನ್ಯೂನತೆಗಳಿಗೆ ಸಂಬಂಧಿಸಿದಂತೆ ಗೋದಾಮು ವ್ಯವಸ್ಥಾಪಕರು ಸೇರಿದಂತೆ ಹಲವರಿಗೆ ನೋಟಿಸ್‌ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ನಗರ ಮತ್ತು ಗ್ರಾಮೀಣ ಭಾಗದ ಗೋದಾಮುಗಳಲ್ಲಿ ಭೌತಿಕ ದಾಸ್ತಾನು ಮತ್ತು ಕಂಪ್ಯೂಟರ್ ದಾಖಲೆಗಳ ನಡುವೆ ವ್ಯತ್ಯಾಸ ಕಂಡುಬಂದಿದೆ. ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ. ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳಿಗೆ ನೀಡಬೇಕಾದ ಪೌಷ್ಟಿಕ ಆಹಾರವಾದ ಮೊಟ್ಟೆ, ಅಕ್ಕಿ ವಿತರಣೆಯಲ್ಲಿ ವ್ಯತ್ಯಾಸಗಳು ಕಂಡುಬಂದಿವೆ. ತಿಂಗಳಿಗೆ 24 ಮೊಟ್ಟೆ ನೀಡುವ ನಿಯಮವಿದ್ದರೂ, ಕೆಲವು ಕಡೆ ಕಡಿಮೆ ವಿತರಣೆಯಾಗುತ್ತಿರುವುದು ಆಯೋಗದ ಗಮನಕ್ಕೆ ಬಂದಿದೆ’ ಎಂದು ವಿವರಿಸಿದರು.

‘ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಗುಣಮಟ್ಟದ ಮತ್ತು ಪೌಷ್ಟಿಕ ಆಹಾರ ನೀಡಬೇಕು ಎಂಬ ನಿಯಮವಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಸಾಮಾನ್ಯವಾಗಿ ಬಡವರು ಚಿಕಿತ್ಸೆಗೆ ದಾಖಲಾಗುತ್ತಾರೆ. ಆದರೆ ಅನೇಕ ಆಸ್ಪತ್ರೆಗಳಲ್ಲಿ ಚಪಾತಿ ನೀಡುತ್ತಿಲ್ಲ. ಈ ಕುರಿತು ವೈದ್ಯಾಧಿಕಾರಿಯನ್ನು ಪ್ರಶ್ನಿಸಿದರೆ ಸಮರ್ಪಕ ಉತ್ತರ ಸಿಕ್ಕಿಲ್ಲ. ಸಂಬಂಧಪಟ್ಟ ಗುತ್ತಿಗೆದಾರರ ಟೆಂಡರ್‌ ರದ್ದುಪಡಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ’ ಎಂದರು.

ಆಹಾರ ಭದ್ರತಾ ಆಯೋಗದ ಸದಸ್ಯರಾದ ಲಿಂಗರಾಜ್ ಕೋಟೆ, ಸುಮಂತ್ ರಾವ್, ಮಾರುತಿ ದೊಡ್ಡಲಿಂಗಣ್ಣ, ಕೆ.ಎಸ್. ವಿಜಯಲಕ್ಷ್ಮಿ, ರೋಹಿಣಿ ಪ್ರಿಯಾ, ಸದಸ್ಯ ಕಾರ್ಯದರ್ಶಿ ಸುಜಾತಾ ಹೊಸಮನಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಧುಸೂದನ್ ಹಾಜರಿದ್ದರು.

23 ಎಫ್‌ಐಆರ್‌ ದಾಖಲು

ನ್ಯಾಯಬೆಲೆ ಅಂಗಡಿಯಲ್ಲಿನ ತೂಕದಲ್ಲಿನ ವ್ಯತ್ಯಾಸ ಸೇರಿದಂತೆ ಇತರ ಅಕ್ರಮಗಳ ವಿರುದ್ಧ 23 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾಹಿತಿ ನೀಡಿದರು. ‘ನ್ಯಾಯಬೆಲೆ ಅಂಗಡಿಗಳನ್ನು ಅಧಿಕಾರಿಗಳ ತಂಡದೊಂದಿಗೆ ಖುದ್ದಾಗಿ ಪರಿಶೀಲಿಸಲಾಗುತ್ತಿದೆ. ನ್ಯಾಯಬೆಲೆ ಅಂಗಡಿಗಳಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವುದು ಮತ್ತು ಬಡ ಜನರಿಗೆ ಸರಿಯಾದ ಪಡಿತರ ಸಿಗುವಂತೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ’ ಎಂದರು.

‘ತೂಕದಲ್ಲಿನ ಮೋಸವನ್ನು ತಡೆಯಲು ಮತ್ತು ಪಾರದರ್ಶಕತೆಯನ್ನು ತರಲು ಅಂಗಡಿಗಳಲ್ಲಿ ‘ಜಿಯೋ ಫೆನ್ಸಿಂಗ್’ ತಂತ್ರಜ್ಞಾನ ಅಳವಡಿಸುವುದು ಅವಶ್ಯಕ. ಇದು ಅಂಗಡಿಯ 10 ಮೀಟರ್ ಒಳಗೆ ಮಾತ್ರ ವ್ಯವಹಾರ ನಡೆಯುವಂತೆ ಮಾಡುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.