ಚನ್ನಗಿರಿ: ‘ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆಯನ್ನು ಜಾರಿಗೆ ತಂದ ನಂತರ ರಾಜ್ಯದಲ್ಲಿ 568 ಕೋಟಿ ಬಾರಿ ಮಹಿಳೆಯರು ಉಚಿತವಾಗಿ ರಸ್ತೆ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸಿದ್ದು, ₹ 14.50 ಸಾವಿರ ಕೋಟಿಯನ್ನು ಸರ್ಕಾರ ಪಾವತಿಸಿದೆ’ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಪಟ್ಟಣದ ಹೊರ ವಲಯದ ಅಜ್ಜಿಹಳ್ಳಿ ಗ್ರಾಮದಲ್ಲಿ ರಸ್ತೆ ಸಾರಿಗೆ ನಿಗಮದಿಂದ ನಿರ್ಮಿಸಿದ ನೂತನ ಬಸ್ ಘಟಕ ಲೋಕಾರ್ಪಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
‘ಶಕ್ತಿ ಯೋಜನೆ ಅಡಿ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣಿಸುತ್ತಿದ್ದು, ರಾಜ್ಯದ ಶೇ 21ರಷ್ಟು ಮಹಿಳೆಯರು ಪ್ರಸ್ತುತ ನಗರ ಪ್ರದೇಶಗಳಿಗೆ ಹೋಗಿ ಉದ್ಯೋಗದಲ್ಲಿ ತೊಡಗಿದ್ದಾರೆ. ಜಿಲ್ಲಾ ವ್ಯಾಪ್ತಿಯಲ್ಲಿ ಇದುವರೆಗೆ 10.83 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿರುತ್ತಾರೆ. ಅಜ್ಜಿಹಳ್ಳಿ ಗ್ರಾಮದ 3.32 ಎಕರೆ ಪ್ರದೇಶದಲ್ಲಿ ₹ 8 ಕೋಟಿ ವೆಚ್ಚದಲ್ಲಿ ನೂತನ ಬಸ್ ಘಟಕ ಆರಂಭವಾಗಿದ್ದು, ಬಸ್ ನಿಲ್ದಾಣಕ್ಕೆ ಅಗತ್ಯ ಜಾಗವನ್ನು ನೀಡಿದ ಕೂಡಲೇ ನೂತನ ಬಸ್ ನಿಲ್ದಾಣವನ್ನು ನಿರ್ಮಿಸಲಾಗುವುದು. ನೂತನ ಈ ಘಟಕಕ್ಕೆ 43 ಬಸ್‌ಗಳನ್ನು ನೀಡುತ್ತಿದ್ದು, ಮೊದಲ ಹಂತದಲ್ಲಿ 27 ಬಸ್‌ಗಳನ್ನು ನೀಡಲಾಗಿದೆ. ಹಾಗೆಯೇ ಈ ಘಟಕಕ್ಕೆ ಈಗಾಗಲೇ 116 ಸಿಬ್ಬಂದಿ ನೇಮಕ ಮಾಡಲಾಗಿದೆ’ ಎಂದು ತಿಳಿಸಿದರು.
‘ಈ ಘಟಕದಿಂದ ಚಿಕ್ಕಮಗಳೂರು, ವಿಜಯನಗರ, ಮಂಗಳೂರು, ಹುಬ್ಬಳ್ಳಿ, ಈಚಲಕರಂಜಿ, ಕುಕ್ಕೆಸುಬ್ರಹ್ಮಣ್ಯ ಮುಂತಾದ ಪ್ರದೇಶಗಳಿಗೆ ಸಾಮಾನ್ಯ ಹಾಗೂ ವೇಗದೂತ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗುವುದು. ಹಾಗೆಯೇ ದಾವಣಗೆರೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಕಾಮ್ರೇಡ್ ಪಂಪಾಪತಿ ಅವರ ಹೆಸರನ್ನು ನಾಮಕರಣ ಮಾಡಲು ಜಿಲ್ಲಾ ಉಸ್ತುವಾರಿ ಸಚಿವರು ಮನವಿ ಮಾಡಿದ್ದು, ಇದರ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಬಿಜೆಪಿಯವರು ಹಿಂದೆ ಮುಂದೆ ಗೊತ್ತಿಲ್ಲದೇ ಕಾಂಗ್ರೆಸ್ ಸರ್ಕಾರದ ಬಗ್ಗೆ ಅಪಪ್ರಚಾರವನ್ನು ಮಾಡುತ್ತಿದ್ದಾರೆ. ಈ ಟೀಕೆ ಟಿಪ್ಪಣಿಗಳಿಗೆ ತಲೆಕೆಡಿಸಿಕೊಳ್ಳದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಸರ್ಕಾರದ ಸಾಧನೆಯನ್ನು ತೋರಿಸುತ್ತೇವೆ. ಅದೇ ರೀತಿ ಚನ್ನಗಿರಿಗೆ ಹೊಂದಿಕೊಂಡಂತೆ ಇರುವ ಮೌದ್ಗಲ್ ಆಂಜನೇಯ ಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ಅಗತ್ಯ ಅನುದಾನವನ್ನು ಮುಜರಾಯಿ ಇಲಾಖೆಯಿಂದ ನೀಡಲಾಗುವುದು’ ಎಂದು ಹೇಳಿದರು.
‘ಈ ತಾಲ್ಲೂಕಿಗೆ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಹಾಗೂ ಸಚಿವರಾಗಿದ್ದ ಎನ್.ಜಿ. ಹಾಲಪ್ಪ ಅವರು ತಮ್ಮದೇ ಆದ ಕೊಡುಗೆಯನ್ನು ನೀಡಿ ಜನರ ಕಷ್ಟಗಳಿಗೆ ಸ್ಪಂದಿಸುವ ಕಾರ್ಯವನ್ನು ಮಾಡಿದ್ದಾರೆ. ಈಗ ಈ ತಾಲ್ಲೂಕಿನ ಬಹುದಿನದ ಕನಸಾಗಿದ್ದ ಬಸ್ ಘಟಕವನ್ನು ಆರಂಭಿಸುವ ಮೂಲಕ ಇಂದು ನನಸು ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬಡವರಿಗೆ ಅನುಕೂಲವಾಗಿದೆ. ಹಾಗೆಯೇ ಉಚಿತವಾಗಿ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ಪ್ರಯಾಣಿಸಿರುವುದರಿಂದ ಸರ್ಕಾರಕ್ಕೆ ಹೆಚ್ಚಿನ ಆದಾಯವೂ ಕೂಡಾ ಬೇರೆ ಬೇರೆ ಮೂಲಗಳಿಂದ ಬಂದಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದರು.
ಮಾಯಕೊಂಡ ಕ್ಷೇತ್ರದ ಶಾಸಕ ಕೆ.ಎಸ್. ಬಸವಂತಪ್ಪ, ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್, ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ವಡ್ನಾಳ್ ಜಗದೀಶ್, ಅಜ್ಜಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್. ಗೋವಿಂದರಾಜ್, ಉಪಾಧ್ಯಕ್ಷೆ ಟಿ.ಆರ್. ಸವಿತಾ, ಪುರಸಭೆ ಅಧ್ಯಕ್ಷೆ ಲಕ್ಷ್ಮೀದೇವಿ, ದಾವಣಗೆರೆ ವಿಭಾಗ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಎಸ್. ಶಿವಕುಮಾರಯ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಶಾಮನೂರು ಬಸವರಾಜ್ ಉಪಸ್ಥಿತರಿದ್ದರು.
ಬಸ್ ನಿಲ್ದಾಣಕ್ಕೆ ಅಗತ್ಯವಾದ 2 ಎಕರೆಯನ್ನು ಈಗಾಗಲೇ ಗುರುತಿಸಿದ್ದು ಇನ್ನು ಆರು ತಿಂಗಳೊಳಗೆ ನೂತನ ಬಸ್ ನಿಲ್ದಾಣ ಕಾಮಗಾರಿಗೆ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅಗತ್ಯವಾದ ಅನುದಾನವನ್ನು ಬಿಡುಗಡೆ ಮಾಡಬೇಕು.–ಎಸ್.ಎಸ್.ಮಲ್ಲಿಕಾರ್ಜುನ್ ಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.