
ದಾವಣಗೆರೆ: ‘ಬೆಣ್ಣೆನಗರಿ ದಾವಣಗೆರೆಯನ್ನು ವಿದ್ಯಾನಗರಿಯನ್ನಾಗಿ ರೂಪಿಸುವಲ್ಲಿ ಮಾಜಿ ಶಾಸಕ, ದಿವಂಗತ ಶಾಮನೂರು ಶಿವಶಂಕರಪ್ಪ ಅವರ ಕೊಡುಗೆ ಅಪಾರವಾದುದು’ ಎಂದು ನಗರಸಭೆ ಮಾಜಿ ಅಧ್ಯಕ್ಷ ಆರ್.ಎಚ್.ನಾಗಭೂಷಣ ಹೇಳಿದರು.
ಇಲ್ಲಿನ ಚನ್ನಗಿರಿ ಕೇಶವಮೂರ್ತಿ ರೋಟರಿ ಸಭಾಂಗಣದಲ್ಲಿ ನಾಗೇಂದ್ರ ಬಂಡೀಕರ್ ನೇತೃತ್ವದ ಜನಮನ ವೇದಿಕೆಯಿಂದ ಶನಿವಾರ ನಡೆದ ನುಡಿನಮನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಎಣ್ಣೆ ಮಿಲ್‌ಗಳು, ಕೈಗಾರಿಕೆಗಳು ಒಂದೊಂದಾಗಿ ಬಾಗಿಲು ಮುಚ್ಚುತ್ತಿದ್ದಾಗ ದಾವಣಗೆರೆಗೆ ಹೊಸ ಭವಿಷ್ಯ ಬರೆಯುವ ಮೂಲಕ ತಾವೂ ಬೆಳೆದು, ಸಾವಿರಾರು ಕುಟುಂಬಗಳು ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಲು ಆಸರೆಯಾದ ಶಾಮನೂರು ಶಿವಶಂಕರಪ್ಪ ಅವರು ಸದಾ ಸ್ಮರಣೀಯರು’ ಎಂದರು.
‘ಬಾಪೂಜಿ ವಿದ್ಯಾಸಂಸ್ಥೆಯು 65ಕ್ಕೂ ಹೆಚ್ಚು ಅಂಗ ಸಂಸ್ಥೆಗಳನ್ನು ಹೊಂದಿದ್ದು, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಿದೆ. ಲಕ್ಷಾಂತರ ಜನರು ನೆಮ್ಮದಿಯ ಬದುಕು ನಡೆಸುವಲ್ಲಿ ಶಾಮನೂರರ ಕೊಡುಗೆ ದೊಡ್ಡದು. ಯಾವುದೇ ವ್ಯಕ್ತಿಯನ್ನು ಮಾತು, ವರ್ತನೆಯಿಂದಲೇ ಅಳೆಯುವಂತಹ ಅಪರೂಪದ ಗುಣ ಶಿವಶಂಕರಪ್ಪ ಅವರಿಗೆ ಒಲಿದಿತ್ತು’ ಎಂದು ಸ್ಮರಿಸಿದರು.
‘ವ್ಯಕ್ತಿಗಿಂತ ವ್ಯಕ್ತಿತ್ವವನ್ನು ಗುರುತಿಸುತ್ತಿದ್ದಂತಹ ಗುಣವು ಶಾಮನೂರು ಶಿವಶಂಕರಪ್ಪ ಅವರಲ್ಲಿತ್ತು. ಒಳ್ಳೆಯದನ್ನು ಚಿಕ್ಕವರು ಹೇಳಿದರೂ ಆಲಿಸುತ್ತಿದ್ದರು. ನಗರಸಭೆ ಸದಸ್ಯರಾಗಿ, ಅಧ್ಯಕ್ಷರಾಗಿ, ಸಂಸದರಾಗಿ, ಶಾಸಕರಾಗಿ, ಸಚಿವರಾಗಿ, ಬಾಪೂಜಿ ವಿದ್ಯಾಸಂಸ್ಥೆಯ ಮುಖ್ಯಸ್ಥರಾಗಿ ಸಾಕಷ್ಟು ಸಂಖ್ಯೆಯ ಜನರಿಗೆ ನೆರವಿನ ಹಸ್ತ ಚಾಚಿದ್ದಾರೆ’ ಎಂದು ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಎಸ್.ಬಡದಾಳ್ ಅಭಿಪ್ರಾಯಪಟ್ಟರು.
‘ಜನರ ಸಮಸ್ಯೆ, ನೋವು, ನಲಿವುಗಳಿಗೆ ಧ್ವನಿಯಾಗುವ ಪತ್ರಕರ್ತರ ಕಷ್ಟ, ನಷ್ಟ, ದುಃಖಗಳಿಗೆ ಸ್ಪಂದಿಸುವ ಗುಣವು ಶಾಮನೂರು ಶಿವಶಂಕರಪ್ಪ ಅವರಲ್ಲಿತ್ತು. ಯಾರೇ ಹೋಗಿ
ನೆರವು ಕೇಳಿದರೂ ಸ್ಪಂದಿಸುತ್ತಿದ್ದರು. ಅವರ ಅಗಲಿಕೆಯಿಂದ ಇಡೀ ರಾಜ್ಯಕ್ಕೆ ನಷ್ಟವಾಗಿದೆ’ ಎಂದು ಹೇಳಿದರು.
ಪೊಲೀಸ್ ಇನ್‌ಸ್ಪೆಕ್ಟರ್ ಉಮೇಶ್ ಮಾತನಾಡಿದರು.
ಕಾಂಗ್ರೆಸ್ ಮುಖಂಡರಾದ ಎಸ್.ಮಲ್ಲಿಕಾರ್ಜುನ್, ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಕೆ.ಎಸ್.ಗೋವಿಂದರಾಜು, ರಾಯ್ಕರ್ ಜ್ಯುವೆಲರ್ಸ್ ಮಾಲೀಕ ವಾಸುದೇವ ರಾಯ್ಕರ್, ಸೀತಮ್ಮ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಕುಬೇರಪ್ಪ, ನಾಟ್ಯ ಗಣಪತಿ ಸೇವಾ ಸಮಿತಿಯ ಬಿ.ವಿ.ರಾಜಶೇಖರ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಟಿ.ಶಿವಶಂಕರ, ಎಸ್.ರಂಗಸ್ವಾಮಿ, ಪ್ರವೀಣ ಬಿ.ಎಸ್.ಪಲ್ಲೇದ್, ಬಿ.ಎಲ್.ಗಂಗಾಧರ ನಿಟ್ಟೂರು ಹಾಗೂ ಇತರರು ಇದ್ದರು.
ಶ್ರೀಮತಿ ರಾಜನಹಳ್ಳಿ ಸೀತಮ್ಮ ಬಾಲಕಿಯರ ಶಾಲೆಗೆ ನೀಡಿದ ‘ಶಾಮನೂರು ಶಿವಶಂಕರಪ್ಪ ಶಿಕ್ಷಣ ಸಿರಿ’ ಪ್ರಶಸ್ತಿಯನ್ನು ಕಾಲೇಜಿನ ಪ್ರಾಚಾರ್ಯ ಟಿ.ಎಸ್.ಕುಸುಗಟ್ಟಿ ಸ್ವೀಕರಿಸಿದರು.
‘ಜನರ ಜೀವ ಉಳಿಸಿದ್ದರು’
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ವರದಿಗಾರರ ಕೂಟದ ಗೌರವಾಧ್ಯಕ್ಷ ಬಿ.ಎನ್.ಮಲ್ಲೇಶ್ ‘ಕೊಡುಗೈ ದಾನಿಯಾಗಿದ್ದ ಶಾಮನೂರು ಶಿವಶಂಕರಪ್ಪ ಅವರು ಆರೇಳು ಕೋಟಿ ವೆಚ್ಚದಲ್ಲಿ ಕೋವಿಡ್ ಲಸಿಕೆ ತರಿಸಿ ಜನರಿಗೆ ನೀಡಿದ್ದರು. ಆ ಮೂಲಕ ಸಾವಿರಾರು ಜನರ ಜೀವ ಉಳಿಸಿದ್ದರು’ ಎಂದು ಹೇಳಿದರು. ‘ಅಪರೂಪದ ವ್ಯಕ್ತಿತ್ವದ ಶಾಮನೂರು ಶಿವಶಂಕರಪ್ಪ ಬಡವ- ಬಲ್ಲಿದ ಎಂಬ ವ್ಯತ್ಯಾಸವಿಲ್ಲದೇ ಎಲ್ಲರನ್ನೂ ಸಮಾನವಾಗಿ ಕಂಡು ಗೌರವಿಸುತ್ತಿದ್ದರು. ಜನರಿಗೆ ಒಳ್ಳೆಯದನ್ನು ಮಾಡಲು ಯಾರಿಗೂ ಕಾಯದೇ ತಮಗೆ ಅನಿಸಿದ್ದನ್ನು ಮಾಡುತ್ತಿದ್ದ ವಿಶಿಷ್ಟ ಗುಣ ಹೊಂದಿದ್ದರು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.