
ದಾವಣಗೆರೆಯ ದುರ್ಗಾಂಬಿಕಾ ದೇವಸ್ಥಾನದ ಮುಂಭಾಗದಲ್ಲಿ ಸೋಮವಾರ ಸಾಗಿದ ಶಾಮನೂರು ಶಿವಶಂಕರಪ್ಪ ಅವರ ಅಂತಿಮ ಯಾತ್ರೆಯಲ್ಲಿ ಸೇರಿದ್ದ ಜನಸ್ತೋಮ –
ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ
ದಾವಣಗೆರೆ: ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆ ಇಲ್ಲಿನ ಆನೆಕೊಂಡದ ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿ ಸೋಮವಾರ ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಇದರೊಂದಿಗೆ ದಾವಣಗೆರೆಯ ಅನ್ವರ್ಥ ನಾಮದಂತೆ ಇದ್ದು, ರಾಜ್ಯ ರಾಜಕಾರಣದಲ್ಲಿ ಛಾಪು ಮೂಡಿಸಿದ್ದ ಅಧ್ಯಾಯವೊಂದು ಕೊನೆಗೊಂಡಂತಾಯಿತು.
ಪತ್ನಿ ಪಾರ್ವತಮ್ಮ ಅವರ ಸಮಾಧಿಯ ಪಕ್ಕದಲ್ಲೇ ಶಿವಶಂಕರಪ್ಪ ಅವರ ಅಂತ್ಯಕ್ರಿಯೆಯನ್ನು ವೀರಶೈವ ಲಿಂಗಾಯತ ಸಂಪ್ರದಾಯದ ಪ್ರಕಾರ ನೆರವೇರಿಸಲಾಯಿತು. ರಾಜ್ಯದ ವಿವಿಧ ಮಠಾಧೀಶರ ಸಮ್ಮುಖದಲ್ಲಿ ಅಂತ್ಯೇಷ್ಟಿ ಕೈಂಕರ್ಯಗಳು ಸಂಜೆ 6ಕ್ಕೆ ಪೂರ್ಣಗೊಂಡವು. ಬಂಧುಬಳಗ, ಅಭಿಮಾನಿಗಳು ಹಾಗೂ ಜಿಲ್ಲೆಯ ಅಪಾರ ಸಂಖ್ಯೆಯ ಬೆಂಬಲಿಗರ ಅಶ್ರುತರ್ಪಣದ ನಡುವೆ ಶಿವಶಂಕರಪ್ಪ ಭೂಮಿಯ ಒಡಲು ಸೇರಿದರು.
ಭಾನುವಾರ ಸಂಜೆ ಬೆಂಗಳೂರಿನಲ್ಲಿ ನಿಧನರಾಗಿದ್ದ ಶಾಮನೂರು ಶಿವಶಂಕರಪ್ಪ ಅವರ ಪಾರ್ಥಿವ ಶರೀರವನ್ನು ಸೋಮವಾರ ನಸುಕಿನಲ್ಲಿ ದಾವಣಗೆರೆಗೆ ತರಲಾಯಿತು. ಎಂಸಿಸಿ ಬಡಾವಣೆಯ ನಿವಾಸದಲ್ಲಿ ಮಧ್ಯಾಹ್ನ 12.20ರವರೆಗೆ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು. ಪಾರ್ಥಿವ ಶರೀರದ ಪೂಜಾ ಕೈಂಕರ್ಯ ಮುಗಿಸಿ ಮಧ್ಯಾಹ್ನ ಅಂತಿಮಯಾತ್ರೆ ಹೊರಟಿತು. ಶಿವಶಂಕರಪ್ಪ ಅವರಿದ್ದ ಕೈವಲ್ಯಕ್ಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸೇರಿದಂತೆ ಮೂವರು ಪುತ್ರರು ಹಾಗೂ ಕುಟುಂಬದದ ಸದಸ್ಯರು ಹೆಗಲು ಕೊಟ್ಟರು.
ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದ ಇಲ್ಲಿನ ಹೈಸ್ಕೂಲ್ ಮೈದಾನಕ್ಕೆ ಪಾರ್ಥಿವ ಶರೀರ ತರುವ ವೇಳೆಗೆ ಅಸಂಖ್ಯ ಜನರು ಜಮಾಯಿಸಿದ್ದರು. ಸಾಲಿನಲ್ಲಿ ಬಂದು ಅಂತಿಮದರ್ಶನ ಪಡೆದರು. ಬಳಿಕ ಅಲ್ಲಿಂದ ಆರಂಭವಾದ ಅಂತಿಮಯಾತ್ರೆ ವೇಳೆಯಲ್ಲೂ ರಸ್ತೆಯ ಇಕ್ಕೆಲಗಳಲ್ಲಿ ಸಾಲುಗಟ್ಟಿ ನಿಂತಿದ್ದ ಜನರು ಪುಷ್ಪನಮನ ಸಲ್ಲಿಸಿದರು. ಕಣ್ಣಾಲಿಗಳನ್ನು ಒದ್ದೆ ಮಾಡಿಕೊಂಡು ಶಿವಶಂಕರಪ್ಪ ಅವರನ್ನು ಬೀಳ್ಕೊಟ್ಟರು.
ಅಂತಿಮಯಾತ್ರೆ ಕಲ್ಲೇಶ್ವರ ಮಿಲ್ ಮೈದಾನ ತಲುಪಿದಾಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪಾರ್ಥಿವ ಶರೀರಕ್ಕೆ ಪುಷ್ಪನಮನ ಸಲ್ಲಿಸಿದರು. ಪೊಲೀಸ್ ಬ್ಯಾಂಡ್ ರಾಷ್ಟ್ರಗೀತೆ ನುಡಿಸಿದಾಗ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು. ಪಾರ್ಥಿವ ಶರೀರಕ್ಕೆ ಹೊದಿಸಿದ್ದ ರಾಷ್ಟ್ರಧ್ವಜವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಯಿತು.
ಕೈವಲ್ಯದಿಂದ ಪಾರ್ಥಿವ ಶರೀರವನ್ನು ಕೆಳಗಿಳಿಸಿದ ಬಳಿಕ ಮಠಾಧೀಶರು ಧಾರ್ಮಿಕ ವಿಧಿವಿಧಾನ ಆರಂಭಿಸಿದರು. ಪುಷ್ಪ, ಬಿಲ್ವಪತ್ರೆಗಳನ್ನು ಅರ್ಪಿಸಿ ಅಂತಿಮ ನಮನ ಸಲ್ಲಿಸಿದರು. ವಿಭೂತಿಯನ್ನು ಕೈಯಲ್ಲಿ ಹಿಡಿದಿದ್ದ ಕುಟುಂಬದ ಸದಸ್ಯರ ಕಣ್ಣಾಲಿಗಳಲ್ಲಿ ನೀರು ಜಿನುಗುತ್ತಿತ್ತು.
ಪುತ್ರರಾದ ಎಸ್.ಎಸ್. ಬಕ್ಕೇಶ್, ಎಸ್.ಎಸ್. ಗಣೇಶ್ ಹಾಗೂ ಎಸ್.ಎಸ್. ಮಲ್ಲಿಕಾರ್ಜುನ್ ವಿಧಿವಿಧಾನ ಪೂರೈಸಿದರು. ಆಗ ಶಿವಶಂಕರಪ್ಪ ಅವರಿಗೆ ಜೈಕಾರಗಳು ಮೊಳಗಿದವು. ತುಮಕೂರಿನ ಸಿದ್ಧಗಂಗಾ ಮಠ ಸೇರಿ ವಿವಿಧ ಧಾರ್ಮಿಕ ಸ್ಥಳಗಳಿಂದ 500ಕ್ಕೂ ಅಧಿಕ ವಿಭೂತಿಗಳನ್ನು ಅಂತ್ಯಕ್ರಿಯೆಗೆ ಬಳಸಲಾಯಿತು.
ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ, ಸಿರಿಗೆರೆ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಉಜ್ಜಿನಿ ಸಿದ್ಧಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ, ಕೇದಾರ ಪೀಠದ ಭೀಮಾಶಂಕರ ಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀಶೈಲ ಮಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ, ಕಾಶಿ ಪೀಠದ ಮಲ್ಲಿಕಾರ್ಜುನ ವಿಶ್ವಾರಾಧ್ಯ ಸ್ವಾಮೀಜಿ, ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಸೇರಿ ಹರಗುರು ಚರಮೂರ್ತಿಗಳು ಭಾಗಿಯಾಗಿದ್ದರು.
ಸಚಿವರಾದ ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ, ಎಚ್.ಸಿ. ಮಹದೇವಪ್ಪ, ಕೆ.ಜೆ. ಜಾರ್ಜ್, ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಕೆ.ಎಚ್. ಮುನಿಯಪ್ಪ, ಶಿವಾನಂದ ಪಾಟೀಲ, ಡಿ. ಸುಧಾಕರ್, ಜಮೀರ್ ಅಹಮ್ಮದ್, ಈಶ್ವರ್ ಖಂಡ್ರೆ, ವಿಧಾನಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನ ಪರಿಷತ್ ಮುಖ್ಯಸಚೇತಕ ಸಲೀಂ ಮಹಮ್ಮದ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.