ADVERTISEMENT

ಯಶಸ್ಸಿನ ಉತ್ತುಂಗಕ್ಕೆ ಏರಿದ್ದ ಶಿವಶಂಕರಪ್ಪ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಉಪಾಧ್ಯಕ್ಷ ಅಣಬೇರು ರಾಜಣ್ಣ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2025, 6:45 IST
Last Updated 20 ಡಿಸೆಂಬರ್ 2025, 6:45 IST
ದಾವಣಗೆರೆಯ ಅಪೂರ್ವ ಹೋಟೆಲ್ ಸಭಾಂಗಣದಲ್ಲಿ ಚಿಗಟೇರಿ ನಾರದ ಮುನಿ ಸೇವಾ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ಶಾಮನೂರು ಶಿವಶಂಕರಪ್ಪ ಅವರಿಗೆ ಪುಷ್ಪನಮನ ಸಲ್ಲಿಸಲಾಯಿತು
ದಾವಣಗೆರೆಯ ಅಪೂರ್ವ ಹೋಟೆಲ್ ಸಭಾಂಗಣದಲ್ಲಿ ಚಿಗಟೇರಿ ನಾರದ ಮುನಿ ಸೇವಾ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ಶಾಮನೂರು ಶಿವಶಂಕರಪ್ಪ ಅವರಿಗೆ ಪುಷ್ಪನಮನ ಸಲ್ಲಿಸಲಾಯಿತು   

ದಾವಣಗೆರೆ: ಸಣ್ಣ ವ್ಯಾಪಾರದಿಂದ ಬೆಳೆದ ಶಾಮನೂರು ಶಿವಶಂಕರಪ್ಪ ಅವರು ಉದ್ಯಮದಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರಿದರು. ಉದ್ಯೋಗ ನೀಡಿ ಸಾವಿರಾರು ಕುಟುಂಬಗಳಿಗೆ ನೆರವಾದರು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಉಪಾಧ್ಯಕ್ಷ ಅಣಬೇರು ರಾಜಣ್ಣ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಅಪೂರ್ವ ಹೋಟೆಲ್ ಸಭಾಂಗಣದಲ್ಲಿ ಚಿಗಟೇರಿ ನಾರದ ಮುನಿ ಸೇವಾ ಟ್ರಸ್ಟ್ ವತಿಯಿಂದ ಶಾಮನೂರು ಶಿವಶಂಕರಪ್ಪ ಅವರಿಗೆ ಈಚೆಗೆ ಏರ್ಪಡಿಸಿದ್ದ ನುಡಿನಮನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಶಿವಶಂಕರಪ್ಪ ಅವರಲ್ಲಿ ಹೇರಳವಾದ ಸಾಮಾನ್ಯ ಜ್ಞಾನವಿತ್ತು. ಕಿಂಚಿತ್ತೂ ಅಹಂಕಾರ ಇಲ್ಲದ ಸರಳ, ಸಜ್ಜನಿಕೆಯ ವ್ಯಕ್ತಿತ್ವ ಅವರಾಗಿತ್ತು. ಕೋಟ್ಯಾಧಿಪತಿಯಾಗಿ ಬೆಳೆದರೂ ಅವರಲ್ಲಿದ್ದ ತಾಳ್ಮೆ, ತಂದೆ–ತಾಯಿಗಳನ್ನು ಕಾಣುತ್ತಿದ್ದ ರೀತಿ ಹಾಗೂ ದೇವರ ಬಗೆಗಿನ ಪೂಜ್ಯನೀಯ ಭಾವನೆ ಅನುಕರಣೀಯ’ ಎಂದು ಹೇಳಿದರು.

ADVERTISEMENT

‘ಶಿವಶಂಕರಪ್ಪ ಅವರು ಅನೇಕ ದೇಗುಲ, ಮಠಗಳಿಗೆ ಸಾಕಷ್ಟು ಕೊಡುಗೆ ನೀಡಿದರು. ಅವರ ನಡೆ, ನುಡಿ ನಮಗೆ ದಾರಿದೀಪವಾಗಿವೆ’ ಎಂದರು.

‘ಶಿವಶಂಕರಪ್ಪ ಅವರದು ಸಾರ್ಥಕ ಬದುಕು. ಶಿಕ್ಷಣ, ಆರೋಗ್ಯ, ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡುವ ಮೂಲಕ ದಾವಣಗೆರೆಯ ಸಮಗ್ರ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡಿದ್ದಾರೆ. ಅವರು ಮಧ್ಯ ಕರ್ನಾಟಕದ ನಾಲ್ವಡಿ ಕೃಷ್ಣರಾಜ ಒಡೆಯರ್‌’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಸ್‌. ಮಂಜುನಾಥ ಕುರ್ಕಿ ಬಣ್ಣಿಸಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಐಗೂರು ಚಂದ್ರಶೇಖರಪ್ಪ, ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕಕ್ಕರಗೊಳ್ಳ ಕೆ.ಬಿ. ಪರಮೇಶ್ವರಪ್ಪ, ನಗರ ಘಟಕದ ಅಧ್ಯಕ್ಷ ಸಿರಿಗೆರೆ ಪರಮೇಶ್ವರಪ್ಪ, ಪತ್ರಕರ್ತ ಎಂ.ಎಸ್. ಶಿವಶರಣಪ್ಪ, ಮೆಳ್ಳೇಕಟ್ಟೆ ನಾಗರಾಜಪ್ಪ, ಬುಳ್ಳಾಪುರದ ಮಲ್ಲಿಕಾರ್ಜುನಸ್ವಾಮಿ, ವೀಣಾ ಮಂಜುನಾಥ್, ಶಾಮನೂರು ಬಸಣ್ಣ , ನಾಗರಾಜ ಸಿರಿಗೆರೆ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.