
ದಾವಣಗೆರೆ: ಶಾಮನೂರು ಶಿವಶಂಕರಪ್ಪ, ಜನರಿಂದ ಜನರಿಗಾಗಿ ಜನರಿಗೋಸ್ಕರ ಬದುಕಿದ ಜೀವನೋತ್ಸಾಹಿ. ಬಡವರು, ಜನಸಾಮಾನ್ಯರ ಕಷ್ಟಗಳಿಗೆ ಸದಾ ಸ್ಪಂದಿಸುತ್ತಿದ್ದ ಕರುಣಾಮಯಿ. ರಾಜಕೀಯ ವಲಯದ ಅಜಾತ ಶತ್ರು. ಸರ್ವರನ್ನೂ ಸೆಳೆಯುತ್ತಿದ್ದ ಚುಂಬಕ ಶಕ್ತಿ. ಕ್ಷೀರ ಸಾಗರದಂತಿದ್ದ ಅವರು ನಂಬಿದವರಿಗೆ ನಿರಂತರ ಅಮೃತವನ್ನೇ ಉಣಬಡಿಸುತ್ತಿದ್ದ ತ್ಯಾಗಮಯಿ. ಶಿಸ್ತಿನ ಸಿಪಾಯಿ..ಸಹನಾಮೂರ್ತಿ...
ಶಿವಶಂಕರಪ್ಪನವರ ಒಡನಾಡಿಗಳ ಈ ನುಡಿಗಳು ಅವರ ಇಡೀ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ.
ತಮ್ಮನ್ನು ಪ್ರೀತಿಸುವವರ ಪಾಲಿಗೆ ‘ಅಪ್ಪಾಜಿ’..‘ಅಜ್ಜ’..‘ಅಣ್ಣ’... ಹೀಗೆ ಎಲ್ಲವೂ ಆಗಿದ್ದರು. ಯಾರು ಏನೇ ಕೇಳಿದರೂ ಇಲ್ಲ ಅಂದವರಲ್ಲ. ಎಲ್ಲದಕ್ಕೂ ‘ಎಸ್..ಎಸ್’ ಎನ್ನುತ್ತಿದ್ದರು. ಈ ಕಾರಣಕ್ಕೆ ಜನಮಾನಸದಲ್ಲಿ ‘ಎಸ್‌ಎಸ್’ ಎಂದೇ ಚಿರಸ್ಥಾಯಿಯಾಗಿದ್ದರು.
90 ದಾಟಿದ ನಂತರವೂ ನವ ತರುಣರನ್ನೇ ನಾಚಿಸುವಂತೆ ಸದಾ ಲವಲವಿಕೆಯಿಂದ ಇರುತ್ತಿದ್ದರು. ದಸರಾ ಸಂದರ್ಭದಲ್ಲಿ ದಾವಣಗೆರೆಯಲ್ಲಿ ನಡೆಯುವ ದಾಂಡಿಯಾ ನೃತ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು. ಮಹಿಳೆಯರೊಂದಿಗೆ ದಾಂಡಿಯಾ ಆಡಿ ಎಲ್ಲರನ್ನೂ ರಂಜಿಸುತ್ತಿದ್ದರು. ಪತ್ನಿ ಪಾರ್ವತಮ್ಮನವರ ಸವಿನೆನಪಿಗಾಗಿ ಪ್ರತಿ ವರ್ಷ ಆಯೋಜಿಸುವ ಶಾಮನೂರು ಡೈಮಂಡ್ ಶಿವಗಂಗಾ ಕಪ್ ಕ್ರಿಕೆಟ್ ಟೂರ್ನಿಯ ವೇಳೆ ಬಿಳಿ ಅಂಗಿ, ಪ್ಯಾಂಟ್ ಹಾಗೂ ಚಪ್ಪಲಿ ಧರಿಸಿ ಮೈದಾನಕ್ಕಿಳಿಯುತ್ತಿದ್ದ ಅವರು ಬ್ಯಾಟ್ ಬೀಸಿ ಎಲ್ಲರ ಚಪ್ಪಾಳೆ ಗಿಟ್ಟಿಸುತ್ತಿದ್ದರು.
‘ಹಣ ಇದೆ ಎಂದು ಸೊಕ್ಕಿನಿಂದ ಮೆರೆಯಬೇಡಿ. ಅಹಂಕಾರವನ್ನು ನೆತ್ತಿಗೇರಿಸಿಕೊಂಡು ಹಾಳಾಗಬೇಡಿ. ಬದಲಿಗೆ ನಿಮ್ಮ ಬಳಿ ಇರುವ ಹಣದ ಒಂದು ಭಾಗವನ್ನು ದಾನವಾಗಿ ಕೊಡಿ’ ಎಂದು ಶಿವಶಂಕರಪ್ಪನವರು ಹಿಂದೊಮ್ಮೆ ಹೇಳಿದ್ದರು. ಬದುಕಿನ ಕೊನೆ ಉಸಿರಿರುವವರೆಗೂ ಅವರು ತಾವಾಡಿದ್ದ ಆ ಮಾತಿಗೆ ತಕ್ಕಂತೆಯೇ ಜೀವಿಸಿದ್ದರು.
ನಡೆ–ನುಡಿಯಲ್ಲಿ ಶುದ್ಧರಾಗಿದ್ದ ಅವರು ಅನಿಸಿದ್ದನ್ನು ಯಾವ ಮುಲಾಜು ಇಲ್ಲದೆಯೇ ಹೇಳುವ ಜಾಯಮಾನದವರಾಗಿದ್ದರು. ಯಾವತ್ತೂ ಒಳಗೊಂದು ಹೊರಗೊಂದು ಮಾಡಿದವರಲ್ಲ. ಅಧಿಕಾರದ ಬೆನ್ನತ್ತಿ ಹೋದವರೂ ಅಲ್ಲ. ಬೆವರಿನ ಬೆಲೆ ಅರಿತಿದ್ದ ಅವರು ಎಲ್ಲರ ಕಷ್ಟಕ್ಕೂ ಮರುಗುತ್ತಿದ್ದರು. ಕೊನೆಯವರೆಗೂ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿಯೇ ಇದ್ದವರು. ತಮ್ಮ ಸುದೀರ್ಘ ರಾಜಕೀಯ ಪಯಣದಲ್ಲಿ ಒಂದೂ ಕಪ್ಪುಚುಕ್ಕೆ ಇಲ್ಲದ ಆದರ್ಶಪ್ರಾಯರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅವರು ಸಮಾಜದ ಅಖಂಡತೆ ಕಾಪಾಡಲು ಕಟಿಬದ್ಧರಾಗಿ ಕಾರ್ಯ ನಿರ್ವಹಿಸಿದ್ದರು. ಸಮಾಜ ಒಡೆಯುವ ಪ್ರಯತ್ನಗಳು ನಡೆದಾಗಲೆಲ್ಲಾ ‘ಭದ್ರಕೋಟೆ’ಯಂತೆ ನಿಂತು ಅದನ್ನು ವಿಫಲಗೊಳಿಸುತ್ತಿದ್ದರು.
ಬಾಬ್ರಿ ಮಸೀದಿ ಧ್ವಂಸ ಘಟನೆ ನಡೆದ ನಂತರ ದೇಶದಾದ್ಯಂತ ಕರ್ಫ್ಯೂ ವಿಧಿಸಲಾಗಿತ್ತು. ಆ ಹೊತ್ತಿನಲ್ಲೇ ಎಂಜಿನಿಯರಿಂಗ್ ಪರೀಕ್ಷೆ ಕೂಡ ನಿಗದಿಯಾಗಿತ್ತು. ಜನರು ಮನೆಯಿಂದ ಹೊರಗೆ ಕಾಲಿಡಲೂ ಭಯಪಡುತ್ತಿದ್ದ ಆ ಸನ್ನಿವೇಶದಲ್ಲಿ ಪರೀಕ್ಷಾ ಕೇಂದ್ರಕ್ಕೆ ಹೋಗಿ ಪರೀಕ್ಷೆ ಬರೆಯುವುದು ದೂರದ ಮಾತಾಗಿತ್ತು. ಕಾಲೇಜಿನ ಪ್ರಾಂಶುಪಾಲರು, ಸಂಬಂಧಪಟ್ಟ ಆಡಳಿತ ತಮ್ಮ ಅಳಲು ಕೇಳದಿದ್ದಾಗ ಬಿಐಇಟಿ ಕಾಲೇಜಿನ ವಿದ್ಯಾರ್ಥಿಗಳು ಸೀದಾ ಹೋಗಿದ್ದು ಶಿವಶಂಕರಪ್ಪನವರ ಮನೆಗೆ. ಅವರ ಅಹವಾಲು ಆಲಿಸಿದ್ದ ‘ಎಸ್‌ಎಸ್’, ಸಂಬಂಧಪಟ್ಟವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಪರೀಕ್ಷೆಯನ್ನು ಒಂದು ವಾರ ಮುಂದಕ್ಕೆ ಹಾಕಿಸಿದ್ದರು. ಆ ಮೂಲಕ, ಪರೀಕ್ಷೆ ಕೈತಪ್ಪಿ ಭವಿಷ್ಯವೇ ಮಸುಕಾಗುವ ಭೀತಿಯಲ್ಲಿದ್ದ ನೂರಾರು ವಿದ್ಯಾರ್ಥಿಗಳ ಬಾಳಲ್ಲಿ ಬೆಳಕು ಮೂಡುವಂತೆ ಮಾಡಿದ್ದರು.
ಹೀಗೆ ಜೀವಿತಾವಧಿಯಲ್ಲಿ ಜನಾನುರಾಗಿ ಆಗಿಯೇ ಬಾಳಿದ ಶಿವಶಂಕರಪ್ಪ, ಧರ್ಮೋದ್ಧಾರಕ ಮತ್ತು ದೈವಭಕ್ತರೂ ಕೂಡ. ಮನೆಯಲ್ಲಿ ನಿತ್ಯ ಪೂಜೆ ಮಾಡುತ್ತಿದ್ದರು. ಗುಡಿ–ಗೋಪುರಗಳಿಗೆ ಭೇಟಿ ನೀಡುತ್ತಿದ್ದರು. ಎಳವೆಯಿಂದಲೇ ಧಾರ್ಮಿಕ ನಂಟು ಬೆಳೆಸಿಕೊಂಡಿದ್ದ ಅವರು ಒಪ್ಪತ್ತು ಊಟ ಮಾಡುವ, ಅಮಾವಾಸ್ಯೆ, ಹುಣ್ಣಿಮೆಯಂದು ಕಡ್ಡಾಯವಾಗಿ ದೇವರ ದರ್ಶನ ಪಡೆಯುವ ಪದ್ಧತಿ ರೂಢಿಸಿಕೊಂಡಿದ್ದರು. ಈ ಗುಣ ತಂದೆ, ತಾಯಿಯಿಂದ ಅವರಿಗೆ ಬಳುವಳಿಯಾಗಿ ಬಂದಿತ್ತು ಎಂದು ಅವರ ಒಡನಾಡಿಗಳು ಸ್ಮರಿಸುತ್ತಾರೆ. ಪೂಜೆ–ಪುನಸ್ಕಾರ ಅವರ ನಿತ್ಯದ ದಿನಚರಿಯ ಭಾಗವಾಗಿರುತ್ತಿದ್ದವು.
‘ವೇದವನ್ನು ಓದಿದವರು ದೊಡ್ಡವರಾಗುವುದಿಲ್ಲ, ಜನರ ವೇದನೆ ಅರಿತವರು ಮಾತ್ರ ದೊಡ್ಡವರಾಗುತ್ತಾರೆ’ ಎಂಬುದಕ್ಕೆ ಶಿವಶಂಕರಪ್ಪ ನಿದರ್ಶನ. ‘ಜನರ ಕಷ್ಟ ಸುಖಕ್ಕೆ, ನೋವು ನಲಿವುಗಳಿಗೆ ನಾನು ನಿರಂತರ ಸ್ಪಂದಿಸುತ್ತಾ ಬಂದಿದ್ದೇನೆ. ಅದಕ್ಕಾಗಿಯೇ ಜನರು ನನ್ನನ್ನು ನಿರಂತರವಾಗಿ ಆಯ್ಕೆ ಮಾಡಿಕೊಂಡು ಬಂದಿದ್ದಾರೆ’ ಎಂದು ಅವರು ಹಿಂದೊಮ್ಮೆ ಹೇಳಿದ್ದು ಸ್ಮರಣಾರ್ಹ.
ಶಿವಶಂಕರಪ್ಪ ಅವರು ಮಿತ ಭಾಷಿ, ನುಡಿದಂತೆ ನಡೆದವರು. ಎಲ್ಲರನ್ನೂ ಸ್ನೇಹಿತರು, ಬಂಧುಗಳೆಂದೇ ಭಾವಿಸಿದ್ದವರು. ಯಾರ ಜತೆಗೂ ದ್ವೇಷ ಕಟ್ಟಿಕೊಂಡವರಲ್ಲ. ಎಲ್ಲ ಪಕ್ಷಗಳಲ್ಲೂ ಅವರು ಸ್ನೇಹಿತರು, ಹಿತೈಷಿಗಳು, ಬಂಧುಗಳನ್ನು ಸಂಪಾದಿಸಿದ್ದರು. ಎಲ್ಲ ಜಾತಿಯ ಜನರು, ನಾಯಕರು, ಮಠಾಧೀಶರು ಇಷ್ಟಪಡುವ, ಗೌರವ–ಆದರದಿಂದ ಕಾಣುವ ವ್ಯಕ್ತಿತ್ವ ಅವರದ್ದಾಗಿತ್ತು. ಅವರು ‘ಶತಮಾನದ ವ್ಯಕ್ತಿ’, ‘ಯುಗಪುರುಷ’ ಎಂದು ಅವರನ್ನು ಹತ್ತಿರದಿಂದ ಬಲ್ಲವರು ಬಣ್ಣಿಸುವುದು ಇದೇ ಕಾರಣಕ್ಕೆ.
ಬಸವ ತತ್ವಕ್ಕೆ ನಿಷ್ಠರಾಗಿದ್ದ ‘ಎಸ್‌ಎಸ್’, ‘ಇವನಾರವ.. ಇವನಾರವ, ಇವನಾರವ ಎಂದೆನಿಸಿದಿರಯ್ಯ. ಇವ ನಮ್ಮವ, ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯ’ ಎಂಬ ವಚನವನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದರು. ತಾವು ಬೆಳೆಯುವ ಜೊತೆಗೆ ಕತ್ತಲೆಯಲ್ಲಿದ್ದವರನ್ನು ಕೈಹಿಡಿದು ಬೆಳಕಿನೆಡೆಗೆ ಮುನ್ನಡೆಸಿದ್ದರು. ಬೇರು ಮಟ್ಟದಿಂದ ಮೇರು ಪರ್ವತವಾಗಿ ಬೆಳೆದ ಅವರ ಯಶೋಗಾಥೆ ಎಲ್ಲರಿಗೂ ಮಾದರಿ. ಪಂಚಪೀಠಗಳ ಜೊತೆಗೆ ವಿರಕ್ತ ಮಠಗಳನ್ನೂ ಪ್ರೀತಿಸಿದ ಅಪರೂಪದ ವ್ಯಕ್ತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.