
ದಾವಣಗೆರೆ: ಕೃಷಿಯಲ್ಲಿ ನಿರಂತರವಾಗಿ ಅನುಭವಿಸಿದ ಸೋಲು, ಹತಾಶೆ ಹಾಗೂ ಸಾಲದಿಂದ ಭೀತರಾಗಿ ಬದುಕು ಅಂತ್ಯಗೊಳಿಸಿಕೊಳ್ಳುತ್ತಿದ್ದ ರೈತರ ಸಂಖ್ಯೆ ಇತ್ತೀಚೆಗೆ ಗಣನೀಯವಾಗಿ ಕಡಿಮೆಯಾಗಿದೆ. 2025ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಜಿಲ್ಲೆಯಲ್ಲಿ 7 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ಆತ್ಮಹತ್ಯೆಗೆ ಶರಣಾಗುತ್ತಿರುವ ರೈತರ ಸಂಖ್ಯೆ ಇಳಿಮುಖವಾಗಿದೆ. 2023–24ರಲ್ಲಿ 56, 2024–25ರಲ್ಲಿ 47 ರೈತರು ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. 2025–26ರ ಹಣಕಾಸು ವರ್ಷದಲ್ಲಿ ಈ ಸಂಖ್ಯೆ ಎರಡಂಕಿ ದಾಟದೇ ಇರುವುದು ಕೃಷಿ ಕ್ಷೇತ್ರದಲ್ಲಿ ಉಂಟಾದ ಪ್ರಗತಿಯ ಸಂಕೇತ ಎಂದೇ ವಿಶ್ಲೇಷಿಸಲಾಗುತ್ತಿದೆ.
ಜಿಲ್ಲೆಯಲ್ಲಿ 3.29 ಲಕ್ಷ ಹೆಕ್ಟೇರ್ ಸಾಗುವಳಿ ಭೂಮಿ ಇದೆ. ಇದರಲ್ಲಿ 2.09 ಲಕ್ಷ ಹೆಕ್ಟೇರ್‌ನಲ್ಲಿ ಕೃಷಿ ಹಾಗೂ 1.20 ಲಕ್ಷ ಹೆಕ್ಟೇರ್‌ನಲ್ಲಿ ತೋಟಗಾರಿಕೆ ಬೆಳೆಗಳಿವೆ. 1.20 ಲಕ್ಷ ಭೂಮಿ ನೀರಾವರಿ ಸೌಲಭ್ಯ ಹೊಂದಿದ್ದು, ಮಳೆಯಾಶ್ರಿತ ಭೂಮಿ ಅಧಿಕ. 1.20 ಲಕ್ಷ ಅತಿ ಸಣ್ಣ, 65,000 ಸಣ್ಣ ರೈತರು ಹಾಗೂ 73,000 ದೊಡ್ಡ ಹಿಡುವಳಿದಾರರು ಸೇರಿದಂತೆ 3.25 ಲಕ್ಷ ರೈತರು ಜಿಲ್ಲೆಯಲ್ಲಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದವರಲ್ಲಿ ಸಣ್ಣ ಹಾಗೂ ಅತಿ ಸಣ್ಣ ಹಿಡುವಳಿದಾರರ ಸಂಖ್ಯೆ ಹೆಚ್ಚಾಗಿತ್ತು.
ಮೆಕ್ಕೆಜೋಳ, ಭತ್ತ ಹಾಗೂ ಅಡಿಕೆ ಜಿಲ್ಲೆಯ ಪ್ರಮುಖ ಬೆಳೆಗಳು. ಭತ್ತ ಮತ್ತು ಅಡಿಕೆಗೆ ಉತ್ತಮ ಬೆಲೆ ಸಿಕ್ಕಿದೆ. ಮೆಕ್ಕೆಜೋಳ ಬೆಲೆ ಕುಸಿತದ ಸುಳಿಗೆ ಸಿಲುಕಿದೆ. ಅತಿವೃಷ್ಟಿಯಿಂದ ಬೆಳೆ ಹಾನಿ ಉಂಟಾಗಿದ್ದರೂ ರೈತರು ಆತ್ಮಹತ್ಯೆಯಂಥ ಹೇಯ ಕೃತ್ಯದ ಆಲೋಚನೆ ಮಾಡಿಲ್ಲ.
‘ಸಾಮಾನ್ಯವಾಗಿ ರೈತರು ಒಂದೇ ವರ್ಷದ ಬೆಳೆ ನಷ್ಟಕ್ಕೆ ಜೀವನ ಅಂತ್ಯಗೊಳಿಸಿಕೊಳ್ಳುವುದಿಲ್ಲ. ಸತತವಾಗಿ ಹಲವು ವರ್ಷ ಪೆಟ್ಟು ತಿಂದಾಗ ಮಾತ್ರ ಇಂತಹ ಆಲೋಚನೆ ಮಾಡುತ್ತಾರೆ. 2024–25ರಲ್ಲಿ ಮೆಕ್ಕೆಜೋಳ ಹಾಗೂ ಭತ್ತಕ್ಕೆ ಉತ್ತಮ ಬೆಲೆ ಸಿಕ್ಕಿತ್ತು. ಇದರಿಂದ ರೈತರಿಗೆ ಕೊಂಚ ಅನುಕೂಲವಾಗಿದೆ. ಪ್ರಸಕ್ತ ವರ್ಷ ಆತ್ಮಹತ್ಯೆ ಕಡಿಮೆಯಾಗಲು ಇದು ಪ್ರಮುಖ ಕಾರಣ’ ಎಂದು ವಿಶ್ಲೇಷಣೆ ಮಾಡುತ್ತಾರೆ ರೈತ ಮುಖಂಡ ತೇಜಸ್ವಿ ಪಟೇಲ್.
ಸಾಲದ ಶೂಲಕ್ಕೆ ಸಿಲುಕಿದ ರೈತರು ಆತ್ಮಹತ್ಯೆಯತ್ತ ವಾಲುತ್ತಾರೆ. ಸಹಕಾರಿ ವ್ಯವಸ್ಥೆ, ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಪಡೆದ ಆರ್ಥಿಕ ನೆರವಿಗಿಂತ ಖಾಸಗಿ ಹಣಕಾಸು ಸಂಸ್ಥೆ ಹಾಗೂ ಲೇವಾದೇವಿದಾರರಿಂದ ಪಡೆದ ಸಾಲಕ್ಕೆ ರೈತರು ಹೆಚ್ಚು ಹೆದರುತ್ತಾರೆ. ಖಾಸಗಿ ಫೈನಾನ್ಸ್, ಲೇವಾದೇವಿದಾರರಿಗೆ ಹಾಕಿದ ಕಡಿವಾಣ ಕೂಡ ಈ ಸುಧಾರಣೆ ತಂದಿರಬಹುದು ಎಂಬ ವಾದವನ್ನು ಇನ್ನೂ ಕೆಲವರು ಮುಂದಿಡುತ್ತಿದ್ದಾರೆ.
ಜಿಲ್ಲೆಯಲ್ಲಿ ವಾಡಿಕೆಯಂತೆ ಮಳೆಯಾಗುತ್ತಿದೆ. ವಾಣಿಜ್ಯ ಬೆಳೆಗಳಲ್ಲಿ ನಷ್ಟದ ಪ್ರಮಾಣ ಕಡಿಮೆಯಾಗಿದೆ. ತೋಟಗಾರಿಕೆ ಬೆಳೆಗಳು ರೈತರ ಕೈಹಿಡಿಯುತ್ತಿವೆಜಿಯಾವುಲ್ಲಾ, ಕೆ ಜಂಟಿ ನಿರ್ದೇಶಕ ಕೃಷಿ ಇಲಾಖೆ
ಹೇರಳ ಮಳೆ ಸುರಿದರೆ ಬೆಳೆ ನಷ್ಟ ಹೇರಳ ಬೆಳೆ ಸಿಕ್ಕರೆ ಬೆಲೆ ನಷ್ಟ ಅನುಭವಿಸುವುದು ರೈತರು. ಪ್ರಸಕ್ತ ವರ್ಷದ ಅತಿವೃಷ್ಟಿಯು ರೈತರನ್ನು ತೊಂದರೆಗೆ ಸಿಲುಕಿಸಿದೆತೇಜಸ್ವಿ ಪಟೇಲ್ ರೈತ ಮುಖಂಡ
ಜಿಲ್ಲೆಯಲ್ಲಿ 2024–25ರಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರಲ್ಲಿ ನಾಲ್ವರ ಕುಟುಂಬಗಳಿಗೆ ಇನ್ನೂ ಪರಿಹಾರ ತಲುಪಿಲ್ಲ. ತಾಂತ್ರಿಕ ತೊಡಕಿನಿಂದಾಗಿ ಪರಿಹಾರ ವಿತರಣೆಯಲ್ಲಿ ವಿಳಂಬವಾಗಿದೆ ಎಂಬುದಾಗಿ ಕೃಷಿ ಇಲಾಖೆ ಮಾಹಿತಿ ನೀಡಿದೆ. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಸರ್ಕಾರ ₹ 5 ಲಕ್ಷ ಪರಿಹಾರ ನೀಡುತ್ತದೆ. ಕೃಷಿ ಇಲಾಖೆಯ ಮಾಹಿತಿ ಆಧರಿಸಿ ಉಪವಿಭಾಗಾಧಿಕಾರಿ ಅಧ್ಯಕ್ಷತೆಯ ಸಮಿತಿ ತೀರ್ಮಾನ ಕೈಗೊಳ್ಳುತ್ತದೆ. ಬಳಿಕ ಜಿಲ್ಲಾಧಿಕಾರಿ ಮೂಲಕ ನೇರ ನಗದು ಪಾವತಿ (ಡಿಬಿಟಿ) ವ್ಯವಸ್ಥೆಯಲ್ಲಿ ರೈತ ಕುಟುಂಬವನ್ನು ಪರಿಹಾರ ತಲುಪಲಿದೆ. ರೈತ ಆತ್ಮಹತ್ಯೆಗೆ ಸಂಬಂಧಿಸಿದ ಪರಿಹಾರ ವಿತರಣೆಗೆ ಸರ್ಕಾರ 9 ತಿಂಗಳ ಗಡುವು ವಿಧಿಸಿದೆ. ಹಾವು ಕಚ್ಚಿ ಸಂಭವಿಸಿದ ಆಕಸ್ಮಿಕ ಸಾವಿಗೆ ₹ 2 ಲಕ್ಷ ಹಾಗೂ ಬಣವೆ ಸುಟ್ಟ ಪ್ರಕರಣಗಳಲ್ಲಿ ₹ 20000 ಪರಿಹಾರವಿದೆ. ಇದಕ್ಕೆ 6 ತಿಂಗಳ ಗಡುವು ನಿಗದಿಪಡಿಸಲಾಗಿದೆ. ‘ಸಂತ್ರಸ್ತ ಕುಟುಂಬದ ಬ್ಯಾಂಕ್ ಖಾತೆಯಲ್ಲಿನ ಸಮಸ್ಯೆ ಅಥವಾ ಆಧಾರ್ ಜೋಡಣೆ ಆಗದಿರುವ ಕಾರಣಕ್ಕೆ ಪರಿಹಾರ ಜಮೆ ಆಗಿರುವುದಿಲ್ಲ. ತಾಂತ್ರಿಕ ತೊಡಕು ಸರಿಪಡಿಸಿಕೊಂಡು ಪರಿಹಾರ ಪಾವತಿಸಲಾಗುವುದು’ ಎಂದು ಕೃಷಿ ಇಲಾಖೆ ವಿವರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.