ADVERTISEMENT

ದಾವಣಗೆರೆ: ರಸ್ತೆ ವಿಸ್ತೀರ್ಣ ಕಡಿತಕ್ಕೆ ವಿರೋಧಿಸಿ ಕಾಲೊನಿ ನಿವಾಸಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 2:53 IST
Last Updated 6 ಜನವರಿ 2026, 2:53 IST
ದಾವಣಗೆರೆಯ ಜಯದೇವ ವೃತ್ತದಲ್ಲಿ ಎಸ್‌ಓಜಿ ಕಾಲೊನಿ ನಾಗರಿಕ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಿವಾಸಿಗಳು ಸೋಮವಾರ ಪ್ರತಿಭಟನೆ ನಡೆಸಿದರು
ದಾವಣಗೆರೆಯ ಜಯದೇವ ವೃತ್ತದಲ್ಲಿ ಎಸ್‌ಓಜಿ ಕಾಲೊನಿ ನಾಗರಿಕ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಿವಾಸಿಗಳು ಸೋಮವಾರ ಪ್ರತಿಭಟನೆ ನಡೆಸಿದರು   

ದಾವಣಗೆರೆ: ಎಸ್‌ಓಜಿ ಕಾಲೊನಿಯ ಮುಖ್ಯ ರಸ್ತೆಯ ವಿಸ್ತೀರ್ಣ ಕಡಿತಗೊಳಿಸಿ ನಿರಾಶ್ರಿತರಿಗೆ ನಿವೇಶನ ಹಂಚಿಕೆ ಮಾಡಿರುವ ಆದೇಶವನ್ನು ಕೂಡಲೇ ರದ್ದುಪಡಿಸಬೇಕು. ನೀರಿನ ಕಂದಾಯ ಪಾವತಿಗೆ 5 ವರ್ಷದ ಬಾಕಿಯನ್ನು ಮಾತ್ರ ಪರಿಗಣಿಸಬೇಕು ಎಂದು ಒತ್ತಾಯಿಸಿ ಸಾರ್ವಜನಿಕರು ಮಹಾನಗರ ಪಾಲಿಕೆ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ಜಯದೇವ ವೃತ್ತದಲ್ಲಿ ಸೇರಿದ ಎಸ್‌ಒಜಿ ಕಾಲೊನಿಯ ನಿವಾಸಿಗಳು ಮಹಾನಗರ ಪಾಲಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿಂದ ಮೆರವಣಿಗೆ ಹೊರಟ ಪ್ರತಿಭಟನಕಾರರು ಮಹಾನಗರ ಪಾಲಿಕೆಗೆ ತೆರಳಿ ಮನವಿ ಸಲ್ಲಿಸಿದರು.

ನಗರದ ರವೀಂದ್ರನಾಥ ಬಡಾವಣೆಯಲ್ಲಿ ಇತ್ತೀಚೆಗೆ ತೆರವುಗೊಳಿಸಿದ 36 ಕುಟುಂಬಗಳಿಗೆ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಈ ಕುಟುಂಬಗಳಿಗೆ ಇತ್ತೀಚೆಗೆ ಎಸ್‌ಒಜಿ ಕಾಲೊನಿಯ ಮುಖ್ಯ ರಸ್ತೆ ಬದಿಯಲ್ಲಿ ನಿವೇಶನ ಒದಗಿಸಲಾಗಿದೆ. ಮುಖ್ಯರಸ್ತೆಯ ವಿಸ್ತೀರ್ಣವನ್ನು ಕಡಿತಗೊಳಿಸಿ ನಿರಾಶ್ರಿತರಿಗೆ ನಿವೇಶನ ಸೌಲಭ್ಯ ಕಲ್ಪಿಸಿದ್ದು ಖಂಡನೀಯ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ವಾಹನ ದಟ್ಟಣೆ ಸಾಧ್ಯತೆಯನ್ನು ಗಮನಿಸಿ 40 ಅಡಿ ಮುಖ್ಯ ರಸ್ತೆಯನ್ನು ನಿರ್ಮಿಸಲಾಗಿತ್ತು. ಇದೇ ರಸ್ತೆಯ ಬದಿಯಲ್ಲಿ ಒಳಚರಂಡಿ, ಗ್ಯಾಸ್‌ ಕೊಳವೆ ಮಾರ್ಗ ಹಾಗೂ ಕುಡಿಯುವ ನೀರಿನ ಪೈಪ್‌ಲೈನ್‌ ಅಳವಡಿಸಲಾಗಿದೆ. ರಸ್ತೆ ವಿಸ್ತೀರ್ಣವನ್ನು 25 ಅಡಿಗೆ ಕಡಿತಗೊಳಿಸಿ ಪ್ರತಿ ನಿರಾಶ್ರಿತ ಕುಟುಂಬಕ್ಕೆ 15X40 ಅಡಿಯ ನಿವೇಶನ ಹಂಚಿಕೆ ಮಾಡಲಾಗಿದೆ. ಇದರಿಂದ ಕಾಲೊನಿಯ ನಿವಾಸಿಗಳಿಗೆ ತೊಂದರೆ ಆಗಲಿದೆ’ ಎಂದು ಎಸ್‌ಓಜಿ ಕಾಲೊನಿ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಿ. ಕಲ್ಲೇಶಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿಯಾಗಿದ್ದ ಕೆ.ಶಿವರಾಂ ಅವರು ಎಸ್‌ಒಜಿ ಕಾಲೊನಿ ನಿರ್ಮಿಸಿದ್ದರು. ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು ನೀರಿನ ಕಂದಾಯಕ್ಕೆ ವಿನಾಯಿತಿ ನೀಡಿದ್ದರು. ಆದರೆ, ಇತ್ತೀಚೆಗೆ ಮಹಾನಗರ ಪಾಲಿಕೆ 25 ವರ್ಷಗಳ ನೀರಿನ ಕಂದಾಯ ಪಾವತಿಸುವಂತೆ ನೋಟಿಸ್‌ ನೀಡಿದೆ. ಇದು ನಾಗರಿಕರಲ್ಲಿ ಆತಂಕ ಮೂಡಿಸಿದೆ ಎಂದು ಪ್ರತಿಭಟನಕಾರರು ಅಸಮಾಧಾನ ಹೊರಹಾಕಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.