ADVERTISEMENT

ಸೆನ್ಸಾರ್ ಆಧಾರಿತ ಸಿಗ್ನಲ್ ಅಳವಡಿಕೆ: ಎಸ್‌ಪಿ

20ರಂದು ಸಿಗ್ಲನ್‌ ಜಾಗೃತಿ ಅಭಿಯಾನ, ಬಳಿಕ ನಿಯಮ ಉಲ್ಲಂಘಿಸಿದರೆ ದಂಡ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2023, 5:59 IST
Last Updated 17 ಮಾರ್ಚ್ 2023, 5:59 IST
ಸೆನ್ಸಾರ್ ಆಧಾರಿತ ಸಂಚಾರ ನಿಯಂತ್ರಣ ವ್ಯವಸ್ಥೆ ಬಗ್ಗೆ ದಾವಣಗೆರೆಯ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಮಾಹಿತಿ ನೀಡಿದರು.
ಸೆನ್ಸಾರ್ ಆಧಾರಿತ ಸಂಚಾರ ನಿಯಂತ್ರಣ ವ್ಯವಸ್ಥೆ ಬಗ್ಗೆ ದಾವಣಗೆರೆಯ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಮಾಹಿತಿ ನೀಡಿದರು.   

ದಾವಣಗೆರೆ: ಸ್ಮಾರ್ಟ್‍ಸಿಟಿ ಯೋಜನೆಯಡಿ ನಗರದ ಸಿಗ್ನಲ್‍ಗಳಲ್ಲಿ ಸೆನ್ಸಾರ್ ಆಧಾರಿತ ಸಂಚಾರ ನಿಯಂತ್ರಣ ವ್ಯವಸ್ಥೆ ಅಳವಡಿಸಲಾಗಿದೆ. ಮಾರ್ಚ್‌ 20ರಂದು ಸಂಚಾರ ಜಾಗೃತಿ ಅಭಿಯಾನ ನಡೆಸಲಾಗುವುದು. ಬಳಿಕ ಸಿಗ್ನಲ್‌ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ತಿಳಿಸಿದರು.

ಈ ಸೆನ್ಸಾರ್ ಅಳವಡಿಕೆ ಮಾಡಿರುವುದರಿಂದ ಬದಲಾವಣೆಗಳಾಗಿವೆ. ಕೆಂಪು ಇದ್ದಾಗ ಸೆಕೆಂಡ್‌ ನಂಬರ್‌ ಬೀಳುತ್ತಿರುತ್ತದೆ. ಅದು ಸೊನ್ನೆಗೆ ಬಂದ ಮೇಲೂ ಮೂರು ಸೆಕೆಂಡ್ಸ್‌ನಷ್ಟು ಹೊತ್ತು ಎಸ್‌ಪಿ ಎಂದು ಬರುತ್ತದೆ. ಆಗ ಕೆಂಪು ಸಿಗ್ನಲ್ಲೇ ಇರುತ್ತದೆ. ಬಳಿಕ ಹಸಿರು ಸಿಗ್ನಲ್‌ ಬರುತ್ತದೆ. ನಂಬರ್‌ ಸೊನ್ನೆಗೆ ಬಂತು ಎಂದು ಕೂಡಲೇ ಹೊರಡದೇ 3 ಸೆಕೆಂಡ್ಸ್‌ ನಿಂತೇ ಮುಂದಕ್ಕೆ ಚಲಿಸಬೇಕು ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸೆನ್ಸಾರ್ ಆಧಾರಿತ ಅಡಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ವ್ಯವಸ್ಥೆ ಅಳವಡಿಸಲಾಗಿದೆ. ಈ ಸಿಗ್ನಲ್‍ನಲ್ಲಿ ವಾಹನ ನಿಲುಗಡೆ ಸಮಯ ಸೆನ್ಸಾರ್ ನಿರ್ದೇಶನದ ಮೇಲೆ ನಿಶ್ಚಯವಾಗುತ್ತದೆ. ಕಡಿಮೆ ವಾಹನ ಒತ್ತಡ ಇದ್ದಾಗ ನಿಲುಗಡೆಗೆ ಕಡಿಮೆ ಸೆಕೆಂಡ್ ತೋರಿಸುತ್ತದೆ. ಹೆಚ್ಚು ವಾಹನ ಒತ್ತಡ ಇದ್ದಾಗ ನಿಲುಗಡೆಗೆ ಹೆಚ್ಚು ಸೆಕೆಂಡ್ ತೋರಿಸುತ್ತದೆ ಎಂದರು.

ADVERTISEMENT

ನಗರದಲ್ಲಿ 23 ಕಡೆಗಳಲ್ಲಿ ಸಿಗ್ನಲ್ ಇದ್ದು, ಇವೆಲ್ಲವನ್ನೂ ಸುತ್ತಹಾಕಲು ಮೊದಲಿಗೆ 43 ನಿಮಿಷಗಳ ಸಮಯ ಬೇಕಾಗಿತ್ತು. ಈಗ ನೂತನ ತಂತ್ರಜ್ಞಾನ ಅಳವಡಿಕೆ ಮಾಡಿದ್ದರಿಂದ 28 ನಿಮಿಷಗಳು ಸಾಕಾಗುತ್ತದೆ. ಹೀಗಾಗಿ, ಸರಾಸರಿ 14 ನಿಮಿಷಗಳ ಸಮಯ ಉಳಿತಾಯ ಆಗಲಿದೆ ಎಂದು ತಿಳಿಸಿದರು.

ಸಿಗ್ನಲ್‍ನಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವುದನ್ನು ಸ್ವಯಂಚಾಲಿತ ಪ್ರಕರಣ ದಾಖಲು ಮಾಡಲಾಗುತ್ತದೆ. ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸ್ವಯಂಚಾಲಿತ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಅಳವಡಿಸಲಾಗಿದೆ. ಮುಂದೆ ಇನ್ನೂ 9 ಸಿಗ್ನಲ್‌ಗಳಲ್ಲಿ ಅಳವಡಿಸುವ ಯೋಜನೆ ಇದೆ ಎಂದು ಹೇಳಿದರು.

ಸಿಗ್ನಲ್‌ಗಳಲ್ಲಿ ಹಸಿರು ಬರುವವರೆಗೆ ವಾಹನಗಳನ್ನು ಆಫ್‌ ಮಾಡಿ ಇಡಬೇಕು. ಇತ್ತೀಚೆಗೆ ವಾಹನ ಚಲಾಯಿಸುವವರು ಜಾಗೃತರಾಗಿದ್ದಾರೆ. ಹಾಗಾಗಿ 2019ರಲ್ಲಿ ವಾಯುಮಾಲಿನ್ಯ 440 ಪಿಪಿಎಂನಿಂದ 341 ಪಿಪಿಎಂಗೆ ಇಳಿದಿದೆ. ತ್ರಿಬಲ್ ರೈಡ್‌, ಕರ್ಕಶ ಸದ್ದು ಮಾಡುವ ಸೈಲೆನ್ಸರ್‌ ನಿಯಂತ್ರಿಸಲು ಈಗಾಗಲೇ ದಂಡ ವಿಧಿಸಲಾಗುತ್ತಿದೆ. ಮುಂದೆ ಇನ್ನಷ್ಟು ಚುರುಕುಗೊಳಿಸಲಾಗುವುದು. ಟ್ರಾಫಿಕ್‌ ಜಾಮ್‌ ತಪ್ಪಿಸಲು ಲೋಡಿಂಗ್‌ ಅನ್‌ಲೋಡಿಂಗ್‌ಗೆ ಸಮಯ ನಿಗದಿಪಡಿಸಲು ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಸಂಚಾರ ಅರಿವು ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಿ ಸಹಕರಿಸಬೇಕು ಎಂದು ಸ್ಮಾರ್ಟ್‍ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ವೀರೇಶ ಕುಮಾರ್ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಸ್ಮಾರ್ಟ್‍ಸಿಟಿ ಲಿಮಿಟೆಡ್ ಅಧಿಕಾರಿಗಳಾದ ಚಂದ್ರಶೇಖರ್, ಮಮತಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.