
ದಾವಣಗೆರೆಯ ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ನಡೆದ ಭಾವೈಕ್ಯ, ಜನಜಾಗೃತಿ, ಧರ್ಮ ಸಮ್ಮೇಳನವನ್ನು ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು
ಪ್ರಜಾವಾಣಿ ಚಿತ್ರ
ದಾವಣಗೆರೆ: ‘ರಾಜ್ಯದಲ್ಲಿ ಮಾನವಧರ್ಮಕ್ಕೆ ಜಯವಾಗಲಿ ಎನ್ನುವುದಿದ್ದರೆ ಅದು ಪಂಚಪೀಠಗಳು ಮಾತ್ರ. ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಾಲದಲ್ಲಿ ಶ್ರೀಶೈಲ ಪೀಠವು ಸುವರ್ಣಯುಗವನ್ನು ಕಂಡಿತ್ತು. ಅವರೊಬ್ಬ ಬಹುಭಾಷಾ ಪರಿಣಿತರು, ಆಯುರ್ವೇದ ಪಂಡಿತರಾಗಿದ್ದರು. ಅವರ ನಂತರದ ಉಮಾಪತಿ ಪಂಡಿತಾರಾಧ್ಯ ಸ್ವಾಮೀಜಿಯೂ ಅನ್ನ ದಾಸೋಹದ ಜತೆಗೆ ಅರಿವಿನ ದಾಸೋಹವನ್ನೂ ಉಣಬಡಿಸಿದರು’ ಎಂದು ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ ಅಭಿಪ್ರಾಯಪಟ್ಟರು.
ಇಲ್ಲಿನ ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ 39ನೇ ಸ್ಮರಣೋತ್ಸವ ಹಾಗೂ ಉಮಾಪತಿ ಪಂಡಿತಾರಾಧ್ಯ ಸ್ವಾಮೀಜಿ ಅವರ 14ನೇ ಪುಣ್ಯಾರಾಧನೆ ಅಂಗವಾಗಿ ಶ್ರೀಶೈಲ ಮಠದ ವತಿಯಿಂದ ಶನಿವಾರ ನಡೆದ ಭಾವೈಕ್ಯ, ಜನಜಾಗೃತಿ, ಧರ್ಮ ಸಮ್ಮೇಳನದಲ್ಲಿ ಮಾತನಾಡಿದರು.
‘ಚನ್ನಸಿದ್ಧರಾಮ ಸ್ವಾಮೀಜಿಯೂ ಪೀಠದ ಶ್ರೇಯೋಭಿವೃದ್ಧಿಗಾಗಿ ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ 14 ರಾಜ್ಯಗಳಲ್ಲಿ ಪ್ರವಾಸ ಮಾಡುತ್ತಾ ಜನರಲ್ಲಿ ಧರ್ಮ ಜಾಗೃತಿ ಮೂಡಿಸುತ್ತಿದ್ದಾರೆ’ ಎಂದರು.
‘ವೀರಶೈವ ಲಿಂಗಾಯತ ಜಗದ್ಗುರುಗಳಲ್ಲಿ ಹೆಚ್ಚಿನವರು ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ಅವರು ಮಠದಲ್ಲಿ ಧ್ಯಾನ ಮಾಡುವುದಕ್ಕೆ ಸೀಮಿತವಾಗದೇ, ದೇಶಾದ್ಯಂತ ಸಂಚರಿಸಿ ಎಲ್ಲಾ ವೀರಶೈವರನ್ನು ಒಗ್ಗೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಹಾಗಾಗಿ ಅವರಿಗೆ ಬೆನ್ನುನೋವು ಕಾಡುತ್ತಿದೆ. ಮುಂದಿನ ಪೀಳಿಗೆಗೆ ಜಗದ್ಗುರುಗಳ ಕೊಡುಗೆ ತಿಳಿಸುವುದು ಅವಶ್ಯ’ ಎಂದು ಹರಿಹರದ ಶಾಸಕ ಬಿ.ಪಿ. ಹರೀಶ್ ಹೇಳಿದರು.
‘ವೀರಶೈವ ಪರಂಪರೆಯನ್ನು ಸೂರ್ಯ ಚಂದ್ರ ಇರುವವರೆಗೂ ಕೊಂಡೊಯ್ಯಬೇಕು. ವೀರಶೈವ ಧರ್ಮವನ್ನು ವಿಶ್ವಗುರುವನ್ನಾಗಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು’ ಎಂದರು.
ಉಜ್ಜಯಿನಿ ಮಹಾಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಶ್ರೀಶೈಲ ಮಹಾಪೀಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಆವರಗೊಳ್ಳ ಓಂಕಾರ ಶಿವಾಚಾರ್ಯ ಸ್ವಾಮೀಜಿ, ರಾಮಘಟ್ಟದ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ, ಹೆಬ್ಬಾಳು ವಿರಕ್ತಮಠದ ಮಹಾಂತರುದ್ರ ಸ್ವಾಮೀಜಿ, ಬಸವನ ಬಾಗೇವಾಡಿ ಹಿರೇಮಠದ ಒಡೆಯರ್ ಶಿವಪ್ರಕಾಶ್ ಶಿವಾಚಾರ್ಯ ಸ್ವಾಮೀಜಿ, ‘ಧೂಡಾ’ ಮಾಜಿ ಅಧ್ಯಕ್ಷ ದೇವರಮನಿ ಶಿವಕುಮಾರ್, ಬಿಜೆಪಿ ಮುಖಂಡ ಶ್ರೀನಿವಾಸ್ ದಾಸಕರಿಯಪ್ಪ, ಎನ್.ಎ.ಮುರುಗೇಶ್ ಉಪಸ್ಥಿತರಿದ್ದರು.
ಶಿವಾನಂದಪ್ಪ ಸ್ವಾಗತಿಸಿ, ಅಧ್ಯಾಪಕಿ ಸೌಭಾಗ್ಯಮ್ಮ ಹಿರೇಮಠ ನಿರೂಪಿಸಿದರು.
‘ಗೌರವಯುತವಾಗಿ ಆಹ್ವಾನಿಸಬೇಕು’
‘ಕಳೆದ ವರ್ಷ ಈ ಕಾರ್ಯಕ್ರಮಕ್ಕೆ ನನ್ನ ಕರೆದಿರಲಿಲ್ಲ. ಅಧಿಕಾರದಲ್ಲಿರುವವರನ್ನು ಮಾತ್ರ ಕರೆಯುತ್ತಾರೋ ಎಂಬ ಬೇಸರ ಮೂಡಿತ್ತು’ ಎಂದು ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಹೇಳಿದರು. ‘ತಂದೆ ಕಾಲದಿಂದಲೂ ಶ್ರೀಶೈಲ ಮಠದ ಅಪಾರ ಭಕ್ತರು ನಾವು. ಪರಿಪಾಠ ಪರಂಪರೆ ಬದಲಾಗಬಾರದು. ಸಮಿತಿಯವರು ಅಧಿಕಾರದಲ್ಲಿರುವವರ ಜೊತೆಗೆ ಅಧಿಕಾರದಲ್ಲಿ ಇರದವರನ್ನೂ ಗೌರವಯುತವಾಗಿ ಆಹ್ವಾನಿಸಬೇಕು’ ಎಂದರು. ‘ಉಪಜಾತಿಗೊಂದು ಮಠ ಸ್ವಾಮೀಜಿಗಳಿದ್ದಾರೆ. ರಾಜಕಾರಣಿಗಳು ಸ್ವಾರ್ಥಕ್ಕಾಗಿ ಎಲ್ಲಾ ಸ್ವಾಮೀಜಿಗಳನ್ನು ಒಗ್ಗೂಡಿಸುತ್ತೇವೆ ಎನ್ನುತ್ತಾರೆ. ಪರಂಪರೆ ಸಂಸ್ಕೃತಿ ಉಳಿಸುವಲ್ಲಿ ಪಂಚಪೀಠಗಳು ಮುಂದಿವೆ. ಪಂಚಪೀಠಾಧೀಶರೆಂದರೆ ಪವಾಡ ಪುರುಷರು. ಅವರನ್ನು ಮರೆಯಲು ಸಾಧ್ಯವೇ ಇಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.