ADVERTISEMENT

ಎಸ್ಸೆಸ್ಸೆಲ್ಸಿ: ಜಿಲ್ಲೆಗೆ ಶೇ 92.55 ಫಲಿತಾಂಶ

ಮೊದಲ ಸ್ಥಾನ ಪಡೆದ ಜಗಳೂರು; ದಾವಣಗೆರೆ ದಕ್ಷಿಣಕ್ಕೆ ಕೊನೆಯ ಸ್ಥಾನ

​ಪ್ರಜಾವಾಣಿ ವಾರ್ತೆ
Published 20 ಮೇ 2022, 4:22 IST
Last Updated 20 ಮೇ 2022, 4:22 IST
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 623 ಅಂಕ ಪಡೆದು ಉತ್ತೀರ್ಣವಾಗಿರುವ ದಾವಣಗೆರೆಯ ತರಳಬಾಳು ಪ್ರೌಢಶಾಲೆಯ ವಿದ್ಯಾರ್ಥಿನಿ ದೀಪಿಕಾ ಡಿ.ಎ.ಗೆ ತಂದೆ–ತಾಯಿ ಸಿಹಿ ತಿನ್ನಿಸಿ ಸಂಭ್ರಮಿಸಿದರು (ಎಡಚಿತ್ರ). ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 623 ಅಂಕ ಪಡೆದಿರುವ ದಾವಣಗೆರೆಯ ತರಳಬಾಳು ಪ್ರೌಢಶಾಲೆಯ ವಿದ್ಯಾರ್ಥಿ ಕರಣ್ ಎಚ್.ಗೆ ತಂದೆ–ತಾಯಿ ಸಿಹಿ ತಿನ್ನಿಸಿ ಸಂಭ್ರಮಿಸಿದರು.–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 623 ಅಂಕ ಪಡೆದು ಉತ್ತೀರ್ಣವಾಗಿರುವ ದಾವಣಗೆರೆಯ ತರಳಬಾಳು ಪ್ರೌಢಶಾಲೆಯ ವಿದ್ಯಾರ್ಥಿನಿ ದೀಪಿಕಾ ಡಿ.ಎ.ಗೆ ತಂದೆ–ತಾಯಿ ಸಿಹಿ ತಿನ್ನಿಸಿ ಸಂಭ್ರಮಿಸಿದರು (ಎಡಚಿತ್ರ). ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 623 ಅಂಕ ಪಡೆದಿರುವ ದಾವಣಗೆರೆಯ ತರಳಬಾಳು ಪ್ರೌಢಶಾಲೆಯ ವಿದ್ಯಾರ್ಥಿ ಕರಣ್ ಎಚ್.ಗೆ ತಂದೆ–ತಾಯಿ ಸಿಹಿ ತಿನ್ನಿಸಿ ಸಂಭ್ರಮಿಸಿದರು.–ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ರಾಜ್ಯ ಮಟ್ಟದಲ್ಲಿ ಜಿಲ್ಲೆಯು ಶೇ 92.55ರಷ್ಟು ಫಲಿತಾಂಶದೊಂದಿಗೆ ‘ಎ’ ಗ್ರೇಡ್‌ ಪಡೆದುಕೊಂಡಿದೆ.

ಚನ್ನಗಿರಿ ತಾಲ್ಲೂಕಿನ ಕೆರೆಬಿಳಚಿಯ ಉರ್ದು ಸರ್ಕಾರಿ ಪ್ರೌಢಶಾಲೆಯ ಆಲಿಯಾ ಫಿರ್ದೋಸ್‌, ಹೊನ್ನಾಳಿ ತಾಲ್ಲೂಕಿನ ಸ್ಟೆಲ್ಲಾ ಮೇರಿಸ್‌ ಹೈಸ್ಕೂಲ್‌ನ ಮೃದುಲಾ ಆರ್‌. ಹಾಗೂ ತೇಜಸ್ವಿನಿ ಎನ್‌.ಜಿ. ಅವರು 625ಕ್ಕೆ 624 ಅಂಕಗಳನ್ನು ಪಡೆದುಕೊಂಡಿದ್ದು, ಜಿಲ್ಲೆಗೆ ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ.

ಕೋವಿಡ್‌ ಕಾರಣಕ್ಕೆ 2021ನೇ ಸಾಲಿನಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸಿದ್ದರಿಂದ ಶೇ 100ರಷ್ಟು ಫಲಿತಾಂಶ ದಾಖಲಾಗಿತ್ತು. 2020ರಲ್ಲಿ ಜಿಲ್ಲೆಗೆ ಶೇ 78.90ರಷ್ಟು ಫಲಿತಾಂಶ ಲಭಿಸಿತ್ತು. 2020ನೇ ಸಾಲಿಗೆ ಹೋಲಿಸಿದರೆ ಈ ವರ್ಷ ಶೇ 13.65ರಷ್ಟು ಏರಿಕೆಯಾಗಿದೆ.

ADVERTISEMENT

ಶೇ 96.42ರಷ್ಟು ಫಲಿತಾಂಶದೊಂದಿಗೆ ಜಗಳೂರು ತಾಲ್ಲೂಕು ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದರೆ, ಶೇ 90.38 ಫಲಿತಾಂಶ ಪಡೆದಿರುವ ದಾವಣಗೆರೆ ದಕ್ಷಿಣ ವಲಯವು ಕೊನೆಯ ಸ್ಥಾನದಲ್ಲಿದೆ.

ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 21,518 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು. ಇವರ ಪೈಕಿ 19,915 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ಬರೆದ 10,460 ಬಾಲಕರ ಪೈಕಿ 9,439 (ಶೇ 90.23) ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಪರೀಕ್ಷೆಗೆ ಹಾಜರಾದ 11,058 ವಿದ್ಯಾರ್ಥಿನಿಯರ ಪೈಕಿ 10,476 (ಶೇ 94.73) ಬಾಲಕಿಯರು ಉತ್ತೀರ್ಣರಾಗಿದ್ದಾರೆ.

ಪ್ರತಿ ಬಾರಿಯಂತೆ ಈ ಸಲವೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

483 ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ 125 ಅಂಕ
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ 483 ವಿದ್ಯಾರ್ಥಿಗಳು ಕನ್ನಡವನ್ನು ಪ್ರಥಮ ಭಾಷೆಯಾಗಿ ತೆಗೆದುಕೊಂಡು 125ಕ್ಕೆ 125 ಅಂಕಗಳನ್ನು ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ.

ಕನ್ನಡ ವಿಷಯದಲ್ಲಿ 125 ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಿರುವ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಬಿ. ವಾಮದೇವಪ್ಪ, ‘ಮುಂದಿನ ಕಾಲೇಜು ಶಿಕ್ಷಣದ ಜೊತೆ ಜೊತೆಗೆ ಸಾಹಿತ್ಯಿಕ ಚಟುವಟಿಕೆಗಳಲ್ಲೂ, ಕನ್ನಡ ನಾಡು–ನುಡಿಯನ್ನು ವೈಭವೀಕರಿಸುವ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಜಿಲ್ಲಾ ಕಸಾಪ ಸಹಕಾರ ಮತ್ತು ಮಾರ್ಗದರ್ಶನ ನೀಡಲಿದೆ’ ಎಂದು ತಿಳಿಸಿದ್ದಾರೆ.

ಬಡವರಿಗೆ ಉಚಿತ ಚಿಕಿತ್ಸೆ ನೀಡುವ ಕನಸು

ತರಳಬಾಳು ಪ್ರೌಢಶಾಲೆಯ ವಿದ್ಯಾರ್ಥಿನಿ ದೀಪಿಕಾ ಡಿ.ಎ. ಹಾಗೂ ವಿದ್ಯಾರ್ಥಿ ಕರಣ್‌ ಎಚ್‌. ಅವರು 623 ಅಂಕಗಳನ್ನು ಗಳಿಸುವ ಮೂಲಕ ಜಿಲ್ಲೆಗೆ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

‘ವೀಕ್‌ ಸಬ್ಜೆಕ್ಟ್‌ಗಳನ್ನು ಮೊದಲು ಓದುತ್ತಿದ್ದೆ. ಶಾಲೆಯಲ್ಲಿ 6 ಪೂರ್ವಭಾವಿ ಪರೀಕ್ಷೆಗಳನ್ನು ನಡೆಸಿರುವುದು ಹಾಗೂ ಶಿಕ್ಷಕರ ನೀಡಿದ ಸಹಕಾರದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ದಿನಾಲೂ 6 ಗಂಟೆ ಕಾಲ ಅಧ್ಯಯನ ನಡೆಸುತ್ತಿದ್ದೆ’ ಎಂದು ದೀಪಿಕಾ ತಿಳಿಸಿದಳು.

‘ಸಕಾಲಕ್ಕೆ ಚಿಕಿತ್ಸೆ ಸಿಗದೇ ಬಡವರು ಕಷ್ಟಪಡುತ್ತಿರುವುದನ್ನು ಟಿವಿಗಳಲ್ಲಿ ನೋಡಿದಾಗ ಬೇಸರವಾಗುತ್ತಿತ್ತು. ಹೀಗಾಗಿ ನಾನು ವೈದ್ಯೆಯಾಗುವ ಮೂಲಕ ಸ್ವಂತ ಆಸ್ಪತ್ರೆಯನ್ನು ಆರಂಭಿಸಿ ಬಡವರಿಗೆ ಸಾಧ್ಯವಾದ ಮಟ್ಟಿಗೆ ಉಚಿತವಾಗಿ ಚಿಕಿತ್ಸೆ ನೀಡಬೇಕು ಎಂಬ ಕನಸು ಹೊಂದಿದ್ದೇನೆ’ ಎಂದು ದೀಪಿಕಾ ಹೇಳಿದಳು.

ಐಐಟಿ ಗುರಿ: ‘ತರಗತಿಯಲ್ಲಿ ಶಿಕ್ಷಕರು ಕಲಿಸುವಾಗ ಗಮನವಿಟ್ಟು ಕೇಳುತ್ತಿದ್ದೆ. ಮನೆಯಲ್ಲಿ ದಿನಾಲೂ ಅಂದಿನ ಪಠ್ಯವನ್ನು ಅಂದೇ ಓದುತ್ತಿದ್ದೆ. ಶಿಕ್ಷಕರ ಸಹಕಾರದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ಮುಂದೆ ಐಐಟಿಗೆ ಸೇರಿ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಎಂಜಿನಿಯರಿಂಗ್‌ ಪದವಿ ಪಡೆಯಬೇಕು ಎಂಬ ಗುರಿ ಹೊಂದಿದ್ದೇನೆ’ ಎಂದು ಕರಣ್ ಎಚ್‌. ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.