ADVERTISEMENT

ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್: ಪ್ರಶಸ್ತಿ ಸುತ್ತಿಗೆ ಆರವ್‌–ಯಶಸ್‌ ಲಗ್ಗೆ

15, 17 ವರ್ಷದೊಳಗಿನವರ ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 19:33 IST
Last Updated 17 ಅಕ್ಟೋಬರ್ 2025, 19:33 IST
17 ವರ್ಷದೊಳಗಿನ ಬಾಲಕರ ಡಬಲ್ಸ್‌ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ ಮೆಹುಲ್‌ ಮಾನವ್‌ ಮತ್ತು ಸಾತ್ವಿಕ್‌ ಎಸ್‌.ಪ್ರಭು ಆಟದ ವೈಖರಿ –ಪ್ರಜಾವಾಣಿ ಚಿತ್ರ 
17 ವರ್ಷದೊಳಗಿನ ಬಾಲಕರ ಡಬಲ್ಸ್‌ ವಿಭಾಗದಲ್ಲಿ ಫೈನಲ್‌ ಪ್ರವೇಶಿಸಿದ ಮೆಹುಲ್‌ ಮಾನವ್‌ ಮತ್ತು ಸಾತ್ವಿಕ್‌ ಎಸ್‌.ಪ್ರಭು ಆಟದ ವೈಖರಿ –ಪ್ರಜಾವಾಣಿ ಚಿತ್ರ    

ದಾವಣಗೆರೆ: ಮೊದಲ ಗೇಮ್‌ನಲ್ಲಿ ಸೋಲು ಎದುರಾದರೂ ಎದೆಗುಂದದೆ ಛಲದಿಂದ ಹೋರಾಡಿದ ಮೂರನೇ ಶ್ರೇಯಾಂಕಿತ ಆಟಗಾರ ಆರವ್‌ ಬಾಸಕ್‌, ಇಲ್ಲಿ ನಡೆಯುತ್ತಿರುವ 15 ಮತ್ತು 17 ವರ್ಷದೊಳಗಿನವರ ರಾಜ್ಯ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. 

ರಾಜ್ಯ ಬ್ಯಾಡ್ಮಿಂಟನ್‌ ಸಂಸ್ಥೆ (ಕೆಬಿಎ) ಹಾಗೂ ದಾವಣಗೆರೆ ಜಿಲ್ಲಾ ಬ್ಯಾಡ್ಮಿಂಟನ್‌ ಸಂಸ್ಥೆಯ (ಡಿಡಿಬಿಎ) ಆಶ್ರಯದಲ್ಲಿ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ 17 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ ವಿಭಾಗದ ಸೆಮಿಫೈನಲ್‌ ಹಣಾಹಣಿಯಲ್ಲಿ ಬೆಂಗಳೂರಿನ ಆರವ್‌ 15-21, 21-19, 21-17 ರಿಂದ ಬೆಂಗಳೂರಿನವರೇ ಆದ ಮೆಹುಲ್‌ ಮಾನವ್‌ ಅವರನ್ನು ಪರಾಭವಗೊಳಿಸಿದರು. 

ಶ್ರೇಯಾಂಕ ರಹಿತ ಆಟಗಾರನ ಎದುರು ಮೊದಲ ಗೇಮ್‌ನಲ್ಲಿ ಮಂಕಾದಂತೆ ಕಂಡ ಆರವ್‌, ನಂತರದ ಎರಡು ಗೇಮ್‌ಗಳಲ್ಲಿ ಪುಟಿದೆದ್ದರು. ಚಾಕಚಕ್ಯತೆಯ ಸರ್ವ್‌ ಹಾಗೂ ಬಲಿಷ್ಠ ಸ್ಮ್ಯಾಷ್‌ಗಳನ್ನು ಸಿಡಿಸಿದರು. ಆಕರ್ಷಕ ರ‍್ಯಾಲಿಗಳ ಮೂಲಕವೂ ಎದುರಾಳಿಯನ್ನು ಕಂಗೆಡಿಸಿ ಜಯದ ತೋರಣ ಕಟ್ಟಿದರು.

ADVERTISEMENT

ಫೈನಲ್‌ನಲ್ಲಿ ಆರವ್‌ಗೆ ಚಿಕ್ಕಮಗಳೂರಿನ ಯಶಸ್‌ ಎಂ.ರೆಡ್ಡಿ ಸವಾಲು ಎದುರಾಗಲಿದೆ. ನಾಲ್ಕರ ಘಟ್ಟದ ಇನ್ನೊಂದು ಪೈಪೋಟಿಯಲ್ಲಿ 5ನೇ ಶ್ರೇಯಾಂಕಿತ ಯಶಸ್‌ 21–13, 21–7 ರಿಂದ ಶ್ಯಾಮ್‌ ಬಿಂಡಿಗನವಿಲೆ ಅವರನ್ನು ಸುಲಭವಾಗಿ ಸೋಲಿಸಿದರು. 

ಬಾಲಕಿಯರ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಹಿತೈಶ್ರೀ ಎಲ್‌.ರಾಜಯ್ಯ ಮತ್ತು ಬೆಂಗಳೂರಿನ ನಿಧಿ ಆತ್ಮರಾಮ್‌ ಮುಖಾಮುಖಿಯಾಗಲಿದ್ದಾರೆ. ಮೊದಲ ಸೆಮಿಫೈನಲ್‌ನಲ್ಲಿ ಹಿತೈಶ್ರೀ 21–17, 22–20ರಿಂದ ಆಶಿ ದಾಸ್‌ ಎದುರು ಗೆದ್ದರೆ, ನಿಧಿ 21–17, 21–8ರಿಂದ ನಾಲ್ಕನೇ ಶ್ರೇಯಾಂಕದ ನೇಹಾ ಕೃಪೇಶ್‌ಗೆ ಆಘಾತ ನೀಡಿದರು.

ಬಾಲಕರ ಡಬಲ್ಸ್‌ ವಿಭಾಗದ ಸೆಮಿಫೈನಲ್‌ ಪಂದ್ಯಗಳಲ್ಲಿ ಮೆಹುಲ್‌ ಮಾನವ್‌ ಮತ್ತು ಸಾತ್ವಿಕ್‌ ಎಸ್‌.ಪ್ರಭು 18-21, 21-16, 25-23 ರಿಂದ ಕೆ.ಯದುನಂದನ್‌ ಮತ್ತು ಯಶಸ್‌ ಎಂ.ರೆಡ್ಡಿ ಎದುರು, ಗೌರವ್‌ ಆರ್‌ ಮತ್ತು ಹಾರ್ದಿಕ್‌ ಮೊಹಂತಿ 21-17, 21-18 ರಿಂದ ಇವಾನ್‌ ಫರ್ನಾಂಡೀಸ್‌ ಮತ್ತು ವಿಹಾನ್‌ ಅರೋರ ವಿರುದ್ಧ ಅಮೋಘ ಗೆಲುವು ಗಳಿಸಿದರು.

ಬಾಲಕಿಯ ಡಬಲ್ಸ್‌ ವಿಭಾಗದ ಸೆಮಿಫೈನಲ್‌ನಲ್ಲಿ ನಿಧಿ ಆತ್ಮಾರಾಮ್‌ ಮತ್ತು ಸೆಲ್ವಸಮೃದ್ಧಿ ಸೆಲ್ವಪ್ರಭು 21-18, 21-14 ರಿಂದ ಸಾಯಿ ಅಕ್ಷರ ಸಿಸ್ಟಾ ಮತ್ತು ಸುಮೇಧಾ ಶ್ರೀನಿವಾಸ್‌ ಎದುರು ಜಯಿಸಿದರು.

ಮಿಶ್ರ ಡಬಲ್ಸ್‌ ವಿಭಾಗದ ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಚಿರಾಗ್‌ ಪ್ರಕಾಶ್‌ ಮತ್ತು ತನ್ವಿ ಮುನೋತ್‌ 22-20, 21-13 ರಿಂದ ಶಿವರಾಜ್‌ ಕಬ್ಬೇರಳ್ಳಿ ಮತ್ತು ಗಮ್ಯಾ ದಿವ್ಯಾನಂದ ವಿರುದ್ಧ ಗೆದ್ದರು.

ಫೈನಲ್‌ಗೆ ಏಡ್ರಿಯನ್‌, ಈಶ್ವರ್‌ ಸಾಯಿ: 15 ವರ್ಷದೊಳಗಿನ ಬಾಲಕರ ಸಿಂಗಲ್ಸ್‌ ವಿಭಾಗದಲ್ಲಿ ಏಡ್ರಿಯನ್‌ ಎಡ್ವರ್ಡ್‌ ಮತ್ತು ಈಶ್ವರ್‌ ಸಾಯಿ ಪ್ರಶಸ್ತಿ ಸುತ್ತಿಗೆ ಮುನ್ನಡೆದರು.

ಸೆಮಿಫೈನಲ್‌ನಲ್ಲಿ ಏಡ್ರಿಯನ್‌ 21-17, 21-17 ರಿಂದ ಅಗ್ರ ಶ್ರೇಯಾಂಕದ ವಿಹಾನ್‌ ಸಿ.ಗೆ ಆಘಾತ ನೀಡಿದರು. ಈಶ್ವರ್‌ ಸಾಯಿ 21-13, 21-11ರಿಂದ 7ನೇ ಶ್ರೇಯಾಂಕದ ಸಿದ್ದಾರ್ಥ್‌ ಎಸ್‌.ನಾಯರ್‌ ಅವರನ್ನು ಮಣಿಸಿದರು. 

ಬಾಲಕಿಯರ ಸಿಂಗಲ್ಸ್‌ ವಿಭಾಗದ ನಾಲ್ಕರ ಘಟ್ಟದ ಪಂದ್ಯಗಳಲ್ಲಿ ಅದಿತಿ ಸುಶಾಂತ್‌ 21-18, 17-21, 21-16 ರಿಂದ ಸ್ಮೃತಿ ಎಸ್‌ ಎದುರು, ಮಹಿತಾ ನಾಯ್ಡು ಸೂರಿಶೆಟ್ಟಿ 21-14, 22-20 ರಿಂದ ಕಂಡಿಬಿಲ್ಲಾ ಶ್ರೇಯಾ ಎದುರು ಗೆಲುವು ಕಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.