
ದಾವಣಗೆರೆ: ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 7ನೇ ರಾಜ್ಯಮಟ್ಟದ ಜೂನಿಯರ್ ನೆಟ್‌ಬಾಲ್ ಟೂರ್ನಿಯ ಬಾಲಕಿಯರ ವಿಭಾಗದಲ್ಲಿ ಹಾಸನ ಹಾಗೂ ಬಾಲಕರ ವಿಭಾಗದಲ್ಲಿ ಬೆಂಗಳೂರು ನಗರ ತಂಡಗಳು ಜಯಗಳಿಸಿದವು.
ದಾವಣಗೆರೆ ನೆಟ್‌ಬಾಲ್ ಅಸೋಸಿಯೇಷನ್ ಹಾಗೂ ಅಮೆಚೂರ್ ನೆಟ್‌ಬಾಲ್ ಅಸೋಸಿಯೇಷನ್ ಆಫ್ ಕರ್ನಾಟಕ ವತಿಯಿಂದ ಎರಡು ದಿನ ಆಯೋಜಿಸಿದ್ದ ಟೂರ್ನಿಯಲ್ಲಿ ರಾಜ್ಯದ ವಿವಿಧೆಡೆಯ ತಂಡಗಳು ಪಾಲ್ಗೊಂಡಿದ್ದವು.
ಬಾಲಕಿಯರ ವಿಭಾಗದಲ್ಲಿ ಹಾಸನ ಮತ್ತು ದಾವಣಗೆರೆ ತಂಡಗಳ ನಡುವೆ ನಡೆದ ಫೈನಲ್‌ನಲ್ಲಿ ಹಾಸನ ತಂಡವು 27–20 ಅಂತರದಿಂದ ಗೆಲುವು ದಾಖಲಿಸಿತು. ದಾವಣಗೆರೆ ತಂಡ ದ್ವಿತೀಯ ಹಾಗೂ ಚಾಮರಾಜನಗರ ಮತ್ತು ದಕ್ಷಿಣ ಕನ್ನಡ ಜಿಲ್ಲಾ ತಂಡಗಳು ತೃತೀಯ ಸ್ಥಾನ ಪಡೆದವು.
ಬಾಲಕರ ವಿಭಾಗದಲ್ಲಿ ಬೆಂಗಳೂರು ನಗರ ಹಾಗೂ ಚಾಮರಾಜನಗರ ತಂಡಗಳ ನಡುವೆ ರೋಚಕ ಪಂದ್ಯ ನಡೆಯಿತು. 31–30ರ ಅಂತರದಲ್ಲಿ ಬೆಂಗಳೂರು ತಂಡವು ಚಾಮರಾಜನಗರ ತಂಡವನ್ನು ಮಣಿಸಿತು. ಚಾಮರಾಜನಗರ ದ್ವಿತೀಯ ಹಾಗೂ ಮೈಸೂರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ತಂಡಗಳು ತೃತೀಯ ಸ್ಥಾನವನ್ನು ಹಂಚಿಕೊಂಡವು.
ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಗಡಿಗುಡಾಳ್ ಮಂಜುನಾಥ್ ಅವರು ಬಹುಮಾನ ವಿತರಿಸಿದರು. ಮಾರ್ಚ್24 ರಿಂದ 27ರವರೆಗೆ ಹರಿಯಾಣದಲ್ಲಿ ನಡೆಯಲಿರುವ ರಾಷ್ಟ್ರೀಯ ನೆಟ್‌ಬಾಲ್ ಟೂರ್ನಿಯಲ್ಲಿ ರಾಜ್ಯ ತಂಡಗಳು ಭಾಗವಹಿಸಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.