ದಾವಣಗೆರೆಯಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ಯುವಜನೋತ್ಸವ ಅಂಗವಾಗಿ ಆಯೋಜಿಸಿದ್ದ ಕಲಾ ತಂಡಗಳ ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳ ಕಲಾವಿದರು ಗಮನ ಸೆಳೆದರು –
ಪ್ರಜಾವಾಣಿ ಚಿತ್ರ : ಸತೀಶ್ ಬಡಿಗೇರ
ದಾವಣಗೆರೆ: ರಾಜ್ಯ ಮಟ್ಟದ ಯುವಜನೋತ್ಸವದಲ್ಲಿ ‘ಕಥೆ’ ಮತ್ತು ‘ಕವನ’ ರಚನೆ ಸ್ಪರ್ಧೆಯಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗೆ ಮಾತ್ರ ಅವಕಾಶ ಕಲ್ಪಿಸಿದ್ದಕ್ಕಾಗಿ ಸ್ಪರ್ಧಾಳುಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಪಸ್ವರಕ್ಕೆ ಮಣಿದ ಆಯೋಜಕರು ಕೊನೆಯ ಕ್ಷಣದಲ್ಲಿ ಕನ್ನಡದಲ್ಲಿ ಕಥೆ, ಕವನ ರಚನೆಗೂ ಅವಕಾಶ ಮಾಡಿಕೊಟ್ಟರು.
ಇಲ್ಲಿನ ಬಾಪೂಜಿ ಎಂಬಿಎ ಕಾಲೇಜು ಆವರಣದಲ್ಲಿ ಭಾನುವಾರ ಆರಂಭವಾದ ಉತ್ಸವದಲ್ಲಿ ಮಧ್ಯಾಹ್ನ ಕವನ ರಚನೆ ಸ್ಪರ್ಧೆ ನಡೆಯಿತು. ಕಥಾ ಸ್ಪರ್ಧೆಗೆ 20 ಹಾಗೂ ಕವನ ರಚನೆ ಸ್ಪರ್ಧೆಗೆ 22 ಸ್ಪರ್ಧಾಳುಗಳು ಪಾಲ್ಗೊಂಡಿದ್ದರು.
‘ಭವಿಷ್ಯದ ಭಾರತವನ್ನು ಮಹಾಶಕ್ತಿಯಾಗಿ ಕಾಣಲು ನನ್ನ ದೃಷ್ಟಿಕೋನ’ ಎಂಬ ವಿಷಯದ ಮೇಲೆ ಕಥೆ ಬರೆಯುವಂತೆ ಸೂಚಿಸಲಾಗಿತ್ತು. ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬರೆದ ಕಥೆ ಮತ್ತು ಕವನವನ್ನು ಮಾತ್ರ ಆಯ್ಕೆ ಮಾಡಲಾಗುವುದು ಎಂಬ ಆಯೋಜಕರ ಷರತ್ತು ಸ್ಪರ್ಧಾಳುಗಳನ್ನು ಕೆರಳಿಸಿತು.
ಸ್ಪರ್ಧೆಯಲ್ಲಿ ಪಾಲ್ಗೊಂಡವರು ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕನ್ನಡದಲ್ಲಿ ಮಾತ್ರವೇ ಕಥೆ–ಕವನ ಬರೆಯುವುದಾಗಿ ಪಟ್ಟು ಹಿಡಿದರು. ‘ಸ್ಪರ್ಧೆಯಲ್ಲಿ ಗೆದ್ದವರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುತ್ತಿರುವುದರಿಂದ ಕನ್ನಡ ಪರಿಗಣಿಸುವುದಿಲ್ಲ’ ಎಂಬುದನ್ನು ಈ ಮೊದಲೇ ತಿಳಿಸಲಾಗಿತ್ತು ಎಂದು ಆಯೋಜಕರು ಸಮರ್ಥನೆ ನೀಡಿದರು. ಸ್ಪರ್ಧಾಳುಗಳ ಒತ್ತಡಕ್ಕೆ ಮಣಿದು ಕನ್ನಡದಲ್ಲಿ ಕಥೆ–ಕವನ ರಚನೆಗೆ ಅವಕಾಶ ಮಾಡಿಕೊಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.