ADVERTISEMENT

ರಾಜ್ಯ ಯುವಜನೋತ್ಸವ: ಡೊಳ್ಳು ಬಾರಿಸಿ ಚಾಲನೆ ನೀಡಿದ ಸಂಸದೆ ಪ್ರಭಾ ಮಲ್ಲಿಕಾರ್ಜುನ್

​ಪ್ರಜಾವಾಣಿ ವಾರ್ತೆ
Published 5 ಜನವರಿ 2025, 6:39 IST
Last Updated 5 ಜನವರಿ 2025, 6:39 IST
<div class="paragraphs"><p>ಡೊಳ್ಳು ಬಾರಿಸಿ&nbsp;ರಾಜ್ಯ ಯುವಜನೋತ್ಸವಕ್ಕೆ ಚಾಲನೆ ನೀಡಿದ ಸಂಸದೆ ಪ್ರಭಾ ಮಲ್ಲಿಕಾರ್ಜುನ್</p></div>

ಡೊಳ್ಳು ಬಾರಿಸಿ ರಾಜ್ಯ ಯುವಜನೋತ್ಸವಕ್ಕೆ ಚಾಲನೆ ನೀಡಿದ ಸಂಸದೆ ಪ್ರಭಾ ಮಲ್ಲಿಕಾರ್ಜುನ್

   

ಪ್ರಜಾವಾಣಿ ಚಿತ್ರಗಳು- ಸತೀಶ್ ಬಡಿಗೇರ

ದಾವಣಗೆರೆ: ಇಲ್ಲಿನ ಬಾಪೂಜಿ ಎಂಬಿಎ ಕಾಲೇಜು ಮೈದಾನದಲ್ಲಿ ಎರಡು ದಿನ ಆಯೋಜಿಸಿರುವ ರಾಜ್ಯಮಟ್ಟದ ಯುವಜನೋತ್ಸವದ ಅಂಗವಾಗಿ ಕಲಾತಂಡಗಳ ಮೆರವಣಿಗೆ ಭಾನುವಾರ ವೈಭವದಿಂದ ನಡೆಯಿತು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಡೊಳ್ಳು ಬಾರಿಸಿ, ಬಿಲ್ಲಿಗೆ ಬಾಣ ಹೂಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ADVERTISEMENT

ನಗರದ ಕರ್ನಲ್‌ ಎಂ.ಬಿ. ರವೀಂದ್ರನಾಥ್‌ (ಗಡಿಯಾರ) ವೃತ್ತದಿಂದ ಆರಂಭವಾದ ಮೆರವಣಿಗೆ ರಿಂಗ್ ರಸ್ತೆಯ ಮೂಲಕ ಸಾಗಿ ಎಂಬಿಎ ಕಾಲೇಜು ಮೈದಾನ ಸೇರಿತು. ರಾಜ್ಯದ ಹಲವು ಜಿಲ್ಲೆಗಳಿಂದ ಆಗಮಿಸಿದ್ದ ಸ್ಪರ್ಧಾಳುಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ಕೇರಳದ ತೆಯ್ಯಂ, ಕಥಕ್ಕಳಿ, ಪಂಜಾಬಿನ ಭಾಂಗ್ರಾ, ಮಹಾರಾಷ್ಟ್ರದ ಲಾವಣಿ, ಒಡಿಶಾದ ಸಂಬಲ್‌ಪುರಿ, ಮಧ್ಯಪ್ರದೇಶದ ಬರೇಡಿ ನೃತ್ಯ ಕಲಾತಂಡಗಳು ಮೆರವಣಿಗೆಯ ಪ್ರಮುಖ ಆಕರ್ಷಣೆ ಆಗಿದ್ದವು. ದೇಶದ ಸಾಂಸ್ಕೃತಿಕ ವೈವಿಧ್ಯತೆ ಮೆರವಣಿಗೆಯಲ್ಲಿ ಮೇಳೈಸಿತ್ತು.

ಮಹಿಳೆಯರು ಪೂರ್ಣಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಪುರಾಣದ ಪಾತ್ರಗಳು ಎಲ್ಲರೊಂದಿಗೆ ಹೆಜ್ಜೆ ಹಾಕುತ್ತಿದ್ದ ಸೊಬಗನ್ನು ಜನರು ರಸ್ತೆಯ ಇಕ್ಕೆಲಗಳಲ್ಲಿ ಕುತೂಹಲದಿಂದ ಕಣ್ತುಂಬಿಕೊಂಡರು. ರಾಮ-ಲಕ್ಷ್ಮಣ, ಸೀತೆ, ಹನುಮಂತ ಹಾಗೂ ರಾವಣನ ವೇಷಧಾರಿಗಳು ಗಮನ ಸೆಳೆದರು. ಪೂಜಾ ಕುಣಿತದ ದೃಶ್ಯಗಳು ಭಕ್ತಿಯನ್ನು ಉಕ್ಕಿಸಿದವು.

ಕಹಳೆ ಮೊಳಗಿದ ಬೆನ್ನಲ್ಲೆ ತಮಟೆ ಹಾಗೂ ಡೊಳ್ಳಿನ ಸದ್ದು ನೃತ್ಯಕ್ಕೆ ಪ್ರೇರಣೆ ನೀಡಿದವು. ಉತ್ತರ ಕರ್ನಾಟಕದ ಜಗ್ಗಲಗೆಗೆ ತಕ್ಕಂತೆ ಲಂಬಾಣಿ ನೃತ್ಯ ಕಣ್ಮನ ಸೆಳೆಯಿತು. ಸಿಂಗಾರಗೊಂಡ ಎತ್ತಿನ ಗಾಡಿಯಲ್ಲಿ ಯಕ್ಷಗಾನ, ಭರತನಾಟ್ಯ ಕಲಾವಿದೆಯರು ಸಾಗಿದರು. ಚಂಡೆ, ಮರಗಾಲು ಕುಣಿತ, ಬೇಡರ ವೇಷ ಸೇರಿ 20 ಕ್ಕೂ ಅಧಿಕ ಕಲಾತಂಡದ ಮೆರವಣಿಗೆ ಮುಗಿಯುತ್ತಿದ್ದಂತೆ ಕಲಾವಿದರೊಂದಿಗೆ ಸೆಲ್ಫಿಗೆ ಜನರು ಮುಗಿಬಿದ್ದರು.

ಹರಿಹರ ಶಾಸಕ ಬಿ.ಪಿ.ಹರೀಶ್, ಮೇಯರ್ ಕೆ.ಚಮನ್ ಸಾಬ್, ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್‌ ಬಿ. ಇಟ್ನಾಳ್‌ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.