ADVERTISEMENT

ಅರಿವಿನ ಪರಿಧಿ ವಿಸ್ತರಿಸಿದ ಪರಿ

9ನೇ‌‌ ಆವೃತ್ತಿಯ ‘ಪ್ರಜಾವಾಣಿ‘ ವಲಯ ಮಟ್ಟದ ಕ್ವಿಜ್; ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ವಿದ್ಯಾರ್ಥಿಗಳ ಕಲರವ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 5:13 IST
Last Updated 12 ಡಿಸೆಂಬರ್ 2025, 5:13 IST
ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ವಲಯ ಮಟ್ಟದ ‘ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಶಿಪ್’ ಸ್ಪರ್ಧೆಯನ್ನು ಜಿಲ್ಲಾ ಪಂಚಾಯಿತಿ ಸಿಇಓ ಗಿತ್ತೆ ಮಾಧವ್ ವಿಠ್ಠಲರಾವ್ ಹಾಗೂ ವಿದ್ಯಾರ್ಥಿಗಳಾದ ಆದಿತ್ಯ ಮತ್ತು ನಿಖಿತಾ ಉದ್ಘಾಟಿಸಿದರು
ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ವಲಯ ಮಟ್ಟದ ‘ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಶಿಪ್’ ಸ್ಪರ್ಧೆಯನ್ನು ಜಿಲ್ಲಾ ಪಂಚಾಯಿತಿ ಸಿಇಓ ಗಿತ್ತೆ ಮಾಧವ್ ವಿಠ್ಠಲರಾವ್ ಹಾಗೂ ವಿದ್ಯಾರ್ಥಿಗಳಾದ ಆದಿತ್ಯ ಮತ್ತು ನಿಖಿತಾ ಉದ್ಘಾಟಿಸಿದರು   

ದಾವಣಗೆರೆ: ಆ ಸಭಾಂಗಣದೊಳಳಗೆ ಅಕ್ಷರಶಃ ಕಾಲಿಡಲೂ ಆಗದಷ್ಟು ದಟ್ಟಣೆ. ಕ್ವಿಜ್ ಮಾಸ್ಟರ್‌ ಕಡೆಯಿಂದ ತೂರಿಬರುವ ಪ್ರಶ್ನೆಗೆ ಹೇಗೆ ಉತ್ತರಿಸಬೇಕು ಎಂದು ಮನದಲ್ಲೇ ಲೆಕ್ಕಾಚಾರ ಹಾಕುತ್ತಿದ್ದ ವಿದ್ಯಾರ್ಥಿಗಳು. ಸವಾಲಿನ ಪ್ರಶ್ನೆಗೂ ಎದೆಗುಂದದೇ ದಿಟ್ಟತನದ ಉತ್ತರ ನೀಡಿ ಚಪ್ಪಾಳೆ ಗಿಟ್ಟಿಸಿಕೊಂಡ ಸ್ಪರ್ಧಿಗಳು...

ನಗರದ ಕುವೆಂಪು ಕನ್ನಡ ಭವನದಲ್ಲಿ ‘ಪ್ರಜಾವಾಣಿ’ ಗುರುವಾರ ಆಯೋಜಿಸಿದ್ದ 9ನೇ‌‌ ಆವೃತ್ತಿಯ ವಲಯ ಮಟ್ಟದ ಕ್ವಿಜ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಂಡಿದ್ದ ವಿವಿಧ ಶಾಲಾ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಒರೆಗೆ ಹಚ್ಚಲು ಈ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಂಡರು. ಮಧ್ಯಾಹ್ನದ ಏರು ಹೊತ್ತಿನಲ್ಲೂ ಉತ್ಸಾಹ ಕಳೆದುಕೊಳ್ಳದೇ ಬೌದ್ಧಿಕ ಚಾಕಚಕ್ಯತೆ ಪ್ರದರ್ಶಿಸಿ ಸೈ ಎನಿಸಿಕೊಂಡರು.

ರಸಪ್ರಶ್ನೆ ಕಾರ್ಯಕ್ರಮದ ಆಯ್ಕೆ ಸುತ್ತಿನಲ್ಲಿ ಕಠಿಣ ಪ್ರಶ್ನೆಗಳನ್ನು ಎದುರಿಸಿ ಹೆಚ್ಚು ಅಂಕ ಪಡೆದ ತಲಾ ಇಬ್ಬರು ವಿದ್ಯಾರ್ಥಿಗಳನ್ನು ಒಳಗೊಂಡ ವಿವಿಧ ಶಾಲೆಗಳ ಆರು ತಂಡಗಳು ಅಂತಿಮ ಸುತ್ತಿಗೆ ಆಯ್ಕೆಯಾದವು. ಪ್ರತೀ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡಿದ್ದ ಬಾಪೂಜಿ ಹೈಯರ್ ಪ್ರೈಮರಿ ಶಾಲೆಯ ವಿದ್ಯಾರ್ಥಿಗಳಾದ ಚಿನ್ಮಯ್ ಹಾಗೂ ಇಶಾನ್ ತಂಡವು 60 ಅಂಕಗಳೊಂದಿಗೆ ಅಗ್ರ ಸ್ಥಾನ ಪಡೆದು ಮೋಡಿ ಮಾಡಿತಲ್ಲದೆ, ಅಂತಿಮ ಸುತ್ತೊಂದರಲ್ಲೇ 25 ಅಂಕಗಳನ್ನು ಕಲೆಹಾಕಿ, ನಿರೀಕ್ಷೆಯಂತೆ ಜಯ ಗಳಿಸಿತು.

ADVERTISEMENT

ತಮಗೆ ಎದುರಾದ ಎರಡು ಪ್ರಶ್ನೆಗಳ ಪೈಕಿ ಒಂದನ್ನು ಡಿಫಾಲ್ಟ್ ಆಗಿ ಆಯ್ದುಕೊಂಡು 10 ಅಂಕ ಪಡೆದ ತಂಡ, ಡಬಲ್‌ ಅಪ್‌ ಸ್ಟ್ರ್ಯಾಟಜಿ ಬಳಸಿ ಮತ್ತೆ 15 ಅಂಕಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿತು. ದಾವಣಗೆರೆ ವಲಯ ಮಟ್ಟದಿಂದ ಆಯ್ಕೆಯಾಗಿರುವ ಈ ತಂಡದ ವಿದ್ಯಾರ್ಥಿಗಳು, ಬೆಂಗಳೂರಿನಲ್ಲಿ ನಡೆಯಲಿರುವ ಫೈನಲ್‌ ಸ್ಪರ್ಧೆಗೆ ಅರ್ಹತೆ ಗಿಟ್ಟಿಸಿಕೊಂಡರು.

ರಾಷ್ಟ್ರೋತ್ಥಾನ ಸಿಬಿಎಸ್‌ಇ ಶಾಲೆಯ ವಿದ್ಯಾರ್ಥಿಗಳಾದ ಅಶುತೋಷ್ ಹಾಗೂ ‌ಚಂದನ್ ತಂಡ ಒಟ್ಟು 25 ಅಂಕಗಳೊಂದಿಗೆ ರನ್ನರ್‌ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಆದರೆ, ತಲಾ 20 ಅಂಕ ಪಡೆದಿದ್ದ ತರಳಬಾಳು ಸೆಂಟ್ರಲ್ ಶಾಲೆಯ ವಿದ್ಯಾರ್ಥಿಗಳಾದ ಮಣಿಕಂಠ– ದೀಕ್ಷಿತ್ ತಂಡ ಹಾಗೂ ಚನ್ನಗಿರಿಯ ನವಚೇತನ ಶಾಲೆಯ ಅನಿಕೇತನ– ಲಾವಣ್ಯ ತಂಡದ ನಡುವೆ ಮೂರನೇ ಸ್ಥಾನಕ್ಕೆ ಪೈಪೋಟಿ ನಡೆಯಿತು.

ಟ್ರೈ ಬ್ರೇಕರ್ ಪ್ರಶ್ನೆಯಲ್ಲಿ ನವಚೇತನ ಶಾಲಾ ತಂಡ ಗೆದ್ದು ನಿಟ್ಟಿಸಿರುಬಿಟ್ಟಿತು. ಪಿ.ಎಂ. ಶ್ರೀ ಕೇಂದ್ರೀಯ ವಿದ್ಯಾಲಯ ಹಾಗೂ ಮಾಗನೂರು ಬಸಪ್ಪ ಶಾಲೆಯ ತಂಡಗಳು ಪೈಪೋಟಿ ನೀಡುವಲ್ಲಿ ಹಿನ್ನಡೆ ಅನುಭವಿಸಿದವು. ‘ಕ್ಯೂರಿಯಾಸಿಟಿ ನಾಲೆಡ್ಜ್‌ ಸಲ್ಯೂಷನ್ಸ್‌’ನ ಕ್ವಿಜ್ ಮಾಸ್ಟರ್ ಮೇಘವಿ ಮಂಜುನಾಥ ಅವರು ಚಾಕಚಕ್ಯತೆಯಿಂದ ನಿರ್ವಹಿಸಿ ಮೆಚ್ಚುಗೆ ಗಳಿಸಿದರು. ಕನ್ನಡ ಹಾಗೂ ಇಂಗ್ಲಿಷ್ ಎರಡೂ ಭಾಷೆಯಲ್ಲಿ ಸಿದ್ಧಪಡಿಸಿದ್ದ ಪ್ರಶ್ನೆಗಳನ್ನು ವೇದಿಕೆಯ ಮೇಲೆ ದೊಡ್ಡ ಪರದೆಯಲ್ಲಿ ಪ್ರದರ್ಶಿಸಲಾಯಿತು.

ಸಭಿಕರ ಉತ್ಸಾಹ: ಆಯ್ಕೆ ಸುತ್ತಿನಲ್ಲಿ ಕೇಳಿದ್ದ 20 ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಲಿಖಿತ ಉತ್ತರ ಬರೆದ ನಂತರ, ಅಂತಿಮವಾಗಿ ಆರು ತಂಡಗಳಿಂದ 12 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು. ಪ್ರಚಲಿತ, ಭೌಗೋಳಿಕ, ವಿಜ್ಞಾನ, ಇತಿಹಾಸ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಸ್ವರೂಪ ವಿದ್ಯಾರ್ಥಿಗಳ ಮಿದುಳಿಗೆ ಕೈಹಾಕುವಂತಿದ್ದವು. ಇದಾದ ಬಳಿಕ, ಉತ್ತರ ಹುಡುಕಲು ‘ಆಡಿಯನ್ಸ್’ ಎದುರು ಅವುಗಳನ್ನು ಇಡಲಾಯಿತು. ಉತ್ತರ ನೀಡಲು ನಾಮುಂದು ತಾಮುಂದು ಎಂದು ವಿದ್ಯಾರ್ಥಿಗಳು ಹಾತೊರೆದರು.

ಗೂಗಲ್ ತನ್ನ ಡೂಡಲ್ ಮೂಲಕ ಗೌರವ ನೀಡಿದ್ದ‌ ಖ್ಯಾತ್ ಪಾಪ್ ತಾರೆ ಮೈಕಲ್‌ ಜಾಕ್ಸನ್ ಕುರಿತ ಪ್ರಶ್ನೆಗಂತೂ‌ ಉತ್ತರ‌ ಹೇಳಲು ವಿದ್ಯಾರ್ಥಿಗಳು ಮೈಕ್ ನೀಡುವಂತೆ ಮುಗಿಬಿದ್ದರು. ಏಷ್ಯಾ ಖಂಡದಲ್ಲೇ ದೊಡ್ಡದಾದ, 11ನೇ ಶತಮಾನದಲ್ಲಿ ಶಾಂತವ್ವೆ ಎಂಬವರು ಕಟ್ಟಿಸಿದ ಕೆರೆಯ ಈಗಿನ ಹೆಸರೇನು? ಎಂಬ ಸ್ಥಳ ವಿಶೇಷದ ನೇಟಿವಿಟಿ ಸಂಬಂಧಿತ ಪ್ರಶ್ನೆಗಳು ಸಭಿಕರ ಉತ್ಸಾಹ ಹೆಚ್ಚಿಸಿದವು. ಸರಿ ಉತ್ತರ ನೀಡಿ ಬಹುಮಾನವನ್ನೂ ಪಡೆದರು. ನಾಸಾ ಉಡ್ಡಯನ‌ ಮಾಡಿದ್ದ ಉಪಗ್ರಹದ ಹೆಸರು ಕನ್ನಡದ‌ ಕವಿಯೊಬ್ಬರ ಮೊದಲ ಹೆಸರನ್ನು ಹೊಂದಿದೆ ಎಂಬ ಪ್ರಶ್ನೆಗೆ ‘ನಿಸಾರ್’ ಎಂದು ಉತ್ತರಿಸಲು ಪ್ರಯಾಸಪಟ್ಟರು. ಉತ್ತರ ಹೊರಬೀಳುತ್ತಿದ್ದಂತೆಯೇ, ‘ಅಯ್ಯೋ ಇದಾ.. ಇಷ್ಟು ಸರಳ ಉತ್ತರವಾ. ನನಗೂ ಗೊತ್ತಿತ್ತು’ ಎಂದು ಕೆಲವರು ನಿಡುಸುಯ್ದರು.

‘ಕನ್ನಡ ದಿನಪತ್ರಿಕೆಗಳಲ್ಲಿ ಅಗ್ರಗಣ್ಯ ಸ್ಥಾನ ಪಡೆದ ‘ಪ್ರಜಾವಾಣಿ’ ಮಕ್ಕಳ ಜ್ಞಾನ ವೃದ್ಧಿಗೆ ಕ್ವಿಜ್ ಹಮ್ಮಿಕೊಂಡಿದ್ದು ಶ್ಲಾಘನೀಯ. ಮಧ್ಯ ಕರ್ನಾಟಕದ ಪ್ರತಿಭೆಗಳು ರಾಜ್ಯ ಮಟ್ಟದಲ್ಲಿ ಪಸರಿಸಲಿ’ ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಬಿ. ವಾಮದೇವಪ್ಪ ಶುಭ ಹಾರೈಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರೇಣುಕಾದೇವಿ, ಶಿಕ್ಷಣ ಇಲಾಖೆಯ ಯೋಜನಾ ಸಂಯೋಜಕ ಕೆ.ಎಸ್‌.ದೀಪಕ್‌ ಬಹುಮಾನ ವಿತರಿಸಿ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ‘ಪ್ರಜಾವಾಣಿ’ ಬ್ಯುರೊ ಮುಖ್ಯಸ್ಥ ಸಿದ್ದಯ್ಯ ಹಿರೇಮಠ, ಜಾಹೀರಾತು ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕ ಪ್ರಮೋದ್ ಭಾಗವತ್, ಪ್ರಸರಣ ವಿಭಾಗದ ವ್ಯವಸ್ಥಾಪಕ ನಂದಗೋಪಾಲ್ ಹಾಜರಿದ್ದರು.

ಕಾರ್ಯಕ್ರಮವು ಆರ್ಕಿಡ್ಸ್ ಇಂಟರ್‌ನ್ಯಾಷನಲ್ ಸ್ಕೂಲ್, ಬ್ಯಾಂಕಿಂಗ್ ಪಾರ್ಟ್‌ನರ್–ಎಸ್‌ಬಿಐ, ರಿಫ್ರೆಶ್‌ಮೆಂಟ್ ಪಾರ್ಟ್‌ನರ್–ಮೊಗು ಮೊಗು, ಸ್ಪೆಷಲ್ ಪಾರ್ಟನರ್–ಭೀಮಾ, ನ್ಯೂಟ್ರಿಷನ್ ಪಾರ್ಟ್‌ನರ್ ನಂದಿನಿ, ಟಿವಿ ಪಾರ್ಟ್‌ನರ್ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆಗೆ ಪೂರ್ವಿಕಾ, ವಿಐಪಿಎಸ್‌, ಟ್ಯಾಲೆಂಟ್ ಸ್ಪ್ರಿಂಟ್, ಐಸಿಎಸ್‌ ಮಹೇಶ್ ಪಿಯು ಕಾಲೇಜು, ಸೂಪರ್ ಬ್ರೇನ್, ಮಾರ್ಗದರ್ಶಿ, ದಿ ಟೀಮ್ ಅಕಾಡೆಮಿ, ಐಬಿಎಂಆರ್, ಮಂಗಳೂರು ಪಿಯು ಕಾಲೇಜು ಮತ್ತು ಶಾರದಾ ವಿದ್ಯಾಮಂದಿರದ ಸಹಯೋಗದಲ್ಲಿ ನಡೆಯಿತು.

ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ವಲಯ ಮಟ್ಟದ ‘ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಶಿಪ್’ ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದ ತಂಡಗಳು    –ಪ್ರಜಾವಾಣಿ ಚಿತ್ರಗಳು
ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ವಲಯ ಮಟ್ಟದ ‘ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಶಿಪ್’ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು –ಪ್ರಜಾವಾಣಿ ಚಿತ್ರ
ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ವಲಯ ಮಟ್ಟದ ‘ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಶಿಪ್’ ಸ್ಪರ್ಧೆಯಲ್ಲಿ ಉತ್ತರಿಸಿದ ವಿದ್ಯಾರ್ಥಿನಿ –ಪ್ರಜಾವಾಣಿ ಚಿತ್ರ
ಉತ್ತರ ಬರೆಯುವಲ್ಲಿ ಮಗ್ನರಾದ ವಿದ್ಯಾರ್ಥಿಗಳು
ದಾವಣಗೆರೆಯ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ವಲಯ ಮಟ್ಟದ ‘ಪ್ರಜಾವಾಣಿ ರಸಪ್ರಶ್ನೆ ಚಾಂಪಿಯನ್‌ಶಿಪ್’ ಸ್ಪರ್ಧೆಯಲ್ಲಿ ಉತ್ತರಿಸಲು ಉತ್ಸುಕತೆ ತೋರಿದ ವಿದ್ಯಾರ್ಥಿಗಳು –ಪ್ರಜಾವಾಣಿ ಚಿತ್ರ
ಚಿನ್ಮಯಿ ಹಾಗೂ ಇಶಾನ್

‘ಕನ್ನಡ ಮಾಧ್ಯಮದಲ್ಲೂ ಸಾಧನೆ ಸಾಧ್ಯ

’ ‘ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳು ಮಾತ್ರ ಯಶಸ್ಸು ಪಡೆಯುತ್ತಾರೆ ಎಂಬುದು ಮಿಥ್ಯ. ನಾನು ಮರಾಠಿ ಮಾಧ್ಯಮದಲ್ಲಿ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿ. ದ್ವಿತೀಯ ಪಿಯುಸಿಯಲ್ಲಿ ಶೇ 56 ಅಂಕ ಪಡೆದ ನಾನು ಯುಪಿಎಸ್‌ಸಿ ಪರೀಕ್ಷೆ ಉತ್ತೀರ್ಣನಾಗಿದ್ದೇನೆ. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೂ ಸಾಧನೆ ಮಾಡುವ ಶಕ್ತಿ ಇದೆ’ ಎಂದು ಕಲ್ವಿಜ್‌ ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ ಹೇಳಿದರು. ‘ಮಹಾರಾಷ್ಟ್ರದ ನನ್ನ ಕುಟುಂಬಕ್ಕೆ ನಾಲ್ಕು ಎಕರೆ ಜಮೀನಿತ್ತು. ಗದ್ದೆಯಲ್ಲಿ ಕೆಲಸ ಮಾಡುತ್ತ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದೆ. ತಾಯಿ ಕ್ಯಾನ್ಸರ್‌ನಿಂದ ಮೃತಪಟ್ಟ ಪರಿಣಾಮ ಪ್ರಥಮ ಪಿಯುಸಿಗೆ ಪ್ರವೇಶ ಪಡೆಯಲು ಸಾಧ್ಯವಾಗಲಿಲ್ಲ. 12 ಕಿ.ಮೀ ದೂರದ ಕಾಲೇಜಿಗೆ ಹೋಗಲು ಸಾಧ್ಯವಾಗದೇ ಜಮೀನಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದೆ’ ಎಂದು ಅನುಭವ ಹಂಚಿಕೊಂಡರು. ‘ಬರಗಾಲದ ಸಂದರ್ಭದಲ್ಲಿ ಪುಣೆಯ ಕಾರ್ಖಾನೆಯೊಂದರಲ್ಲಿ ಮಾಸಿಕ ₹ 2000ಕ್ಕೆ ಕೆಲಸ ಮಾಡಿದೆ. ಮತ್ತೆ ಪಿಯುಸಿ ಡಿಪ್ಲೊಮಾ ಪೂರೈಸಿ ಎಂಜಿನಿಯರಿಂಗ್ ಪ್ರವೇಶ ಪಡೆದೆ. ವ್ಯಾಸಂಗಕ್ಕೆ ಜಮೀನು ಮನೆಯನ್ನು ಬ್ಯಾಂಕ್‌ನಲ್ಲಿ ಅಡವಿಟ್ಟು ಸಾಲ ಪಡೆದೆ. ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಸಿಕ್ಕ ಬಳಿಕ ಸಾಲ ಮರುಪಾವತಿಸಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಸಂಕಲ್ಪ ಮಾಡಿ ಯಶಸ್ಸು ಕಂಡೆ’ ಎಂದರು.

ಫೈನಲ್‌ಗೆ ಆಯ್ಕೆಯಾಗಿದ್ದು ಖುಷಿ ನೀಡಿದೆ...

ಪ್ರಚಲಿತ ವಿದ್ಯಮಾನಗಳನ್ನು ಹೆಚ್ಚು ಕೇಂದ್ರೀಕರಿಸಿ ಸಿದ್ಧತೆ ಮಾಡಿಕೊಂಡಿದ್ದೆವು. ವಿಷಯವನ್ನು ಆಳವಾಗಿ ತಿಳಿದುಕೊಳ್ಳುವುದನ್ನು ರೂಢಿ ಮಾಡಿಕೊಂಡಿದ್ದು ನೆರವಾಯಿತು –ಚಿನ್ಮಯ್ ಹಾಗೂ ಇಶಾನ್ ವಿಜೇತರು ಇದೇ ಮೊದಲ ಬಾರಿಗೆ ಕ್ವಿಜ್‌ನಲ್ಲಿ ಭಾಗವಹಿಸಿದ್ದೆ. ಪ್ರಶ್ನೆಗಳು ನಿರೀಕ್ಷೆಗಿಂತ ಸುಲಭವಾಗಿದ್ದವು. ಅನಿರೀಕ್ಷಿತವಾಗಿ ಎದುರಾದ ಸವಾಲುಗಳಿಗೆ ಇನ್ನಷ್ಟು ಚಾಣಾಕ್ಷತೆ ಮೈಗೂಡಿಸಿಕೊಳ್ಳುವ ಅಗತ್ಯವಿದೆ ಕ್ರಿಶ್‌ ಎಂ.ಪಾಟೀಲ ಜೈನ್‌ ಪಬ್ಲಿಕ್‌ ಶಾಲೆ ಕ್ವಿಜ್‌ನಲ್ಲಿ ಗೆಲ್ಲುವ ಆತ್ಮವಿಶ್ವಾಸವಿತ್ತು. ಅವಕಾಶ ಕೈತಪ್ಪಿದ್ದಕ್ಕೆ ನಿರಾಸೆ ಆಗಿಲ್ಲ. ಇದೊಂದು ಅದ್ಭುತ ಅನುಭವ. ಮುಂದಿನ ವರ್ಷಕ್ಕೆ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಐಡಿಯಾ ಸಿಕ್ಕಿದೆ ಎ.ಅಪೂರ್ವ ಸೇಂಟ್‌ ಜಾನ್‌ ಶಾಲೆ ಕ್ವಿಜ್‌ನಲ್ಲಿ ಪಾಲ್ಗೊಂಡಿದ್ದರಿಂದ ಜ್ಞಾನದ ಹರಿವಿನ ಅರಿವಾಯಿತು. ಸಾಮಾನ್ಯ ಜ್ಞಾನವನ್ನು ಇನ್ನಷ್ಟು ಅರಿಯುವ ಅಗತ್ಯವಿದೆ ಎಂಬುದು ಮನವರಿಕೆಯಾಗಿದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಸ್ಫೂರ್ತಿ ಸಿಕ್ಕಿದೆ ಮೊಹಮ್ಮದ್‌ ಆಫ್ತಾಬ್‌ ಸೋಮೇಶ್ವರ ವಿದ್ಯಾಲಯ ಕ್ವಿಜ್‌ ಹೇಗೆ ನಡೆಯುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು. ಪ್ರಶ್ನೆಗಳು ಸುಲಭವಾಗಿದ್ದವು ಅರ್ಥ ಮಾಡಿಕೊಳ್ಳುವ ಕೌಶಲ ಇನ್ನಷ್ಟು ಕರಗತ ಮಾಡಿಕೊಳ್ಳಬೇಕಿದೆ. ಕ್ವಿಜ್‌ಗೆ ಸ್ಪರ್ಧಿಸುವ ಧೈರ್ಯ ಸಿಕ್ಕಿದೆ ಮದನ್‌ ಬಿ.ಆರ್‌. ಎಸ್‌ವಿಎಸ್‌ ಶಾಲೆ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ನಿರಂತರವಾಗಿ ವ್ಯಾಸಂಗ ಮಾಡಿದ್ದೆ. ನಿರೀಕ್ಷೆಗಿಂತ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರಶ್ನೆಗಳು ವಿಶೇಷವಾಗಿದ್ದವು ಸಾಧನೆ ಮಾಡುವ ಸ್ಫೂರ್ತಿ ತುಂಬಿದವು ಐಶ್ವರ್ಯ ಕೆ.ವಿ ವಿಜಯ ಪ್ರೌಢಶಾಲೆ ಸಂತೇಬೆನ್ನೂರು ಗೊತ್ತಿಲ್ಲದೇ ಇರುವ ವಿಚಾರ ಅರಿಯಲು ಕ್ವಿಜ್‌ ಸಹಾಯ ಮಾಡಿತು. ಸಾಮಾನ್ಯ ಜ್ಞಾನಮಟ್ಟವನ್ನು ಹೆಚ್ಚಿಸಿಕೊಳ್ಳಲು ಅವಕಾಶ ಸಿಕ್ಕಿತು. ಪ್ರಶ್ನೆ ಸ್ಫೂರ್ತಿದಾಯಕ ಮಾತುಗಳು ಪ್ರೇರಣೆ ನೀಡಿದವು ಸಾನ್ನಿಧ್ಯ ಆರ್‌. ಬಿಎಸ್‌ವಿಜೆ ಪ್ರೌಢಶಾಲೆ

ಮೇರೆ ಮೀರಿದ ಉತ್ಸಾಹ

ದಾವಣಗೆರೆ ಚಿತ್ರದುರ್ಗ ಹಾಗೂ ಶಿವಮೊಗ್ಗ ಜಿಲ್ಲೆಯ 7ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವಲಯ ಮಟ್ಟದ ಕ್ವಿಜ್ ಚಾಂಪಿಯನ್‌ಶಿಪ್ ನಿಜಕ್ಕೂ ವಿದ್ಯಾರ್ಥಿಗಳ ಜಾತ್ರೆಯಂತೆ ಭಾಸವಾಯಿತು. ಬೆಳಿಗ್ಗೆ 9 ಗಂಟೆಗೆ ನೋಂದಣಿ ಆರಂಭವಾದರೂ 11 ಗಂಟೆಯವರೆಗೆ ವಿದ್ಯಾರ್ಥಿಗಳು ಗುಂಪುಗುಂಪಾಗಿ ಸಭಾಂಗಣದತ್ತ ಬರುತ್ತಲೇ ಇದ್ದರು. ಸಭಾಂಗಣ‌ ಕಿಕ್ಕಿರಿದು ತುಂಬಿ ಹೊರಗಡೆಯೂ ನೂರಾರು ವಿದ್ಯಾರ್ಥಿಗಳು ಕಾಯಬೇಕಿದ್ದರಿಂದ ವಿದ್ಯಾರ್ಥಿಗಳ ಅಂತಿಮ ಆಯ್ಕೆಗಾಗಿ ಎರಡು ಸುತ್ತಿನ ಪ್ರಕ್ರಿಯೆ ನಡೆಸಬೇಕಾಯಿತು. ಕ್ವಿಜ್‌ಗೆ ಚಾಲನೆ ನೀಡಿದ ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲ‌ರಾವ್ ಅವರು ಕಿಕ್ಕಿರಿದು ತುಂಬಿದ್ದ ಸಂಭಾಗಣದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲು ಮುಂದಾದರು. ಪರಿಶ್ರಮದಿಂದ ಯುಪಿಎಸ್‌ಸಿ ಪಾಸು ಮಾಡಿದ ಸ್ಫೂರ್ತಿದಾಯಕ‌ ಬದುಕನ್ನು ವಿವರಿಸುತ್ತಿದ್ದಂತೆಯೇ ಸಭಾಂಗಣ ನಿಶ್ಯಬ್ದವಾಯಿತು. ವಿದ್ಯಾರ್ಥಿಗಳು ತಾವೂ ನಾಗರಿಕ ಸೇವಾ ಪರೀಕ್ಷೆಯನ್ನು ಎದುರಿಸುವ ಸಂಕಲ್ಪ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.