ADVERTISEMENT

ದಾವಣಗೆರೆ: ಪುಪ್ಪಸದ ರಕ್ತ ಹೆಪ್ಪುಗಟ್ಟುವಿಕೆಗೆ ಯಶಸ್ವಿ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2021, 5:32 IST
Last Updated 23 ಜೂನ್ 2021, 5:32 IST

ದಾವಣಗೆರೆ: ಇಲ್ಲಿನಸಿಟಿ ಸೆಂಟ್ರಲ್ ಆಸ್ಪತ್ರೆಯಲ್ಲಿ ಪುಪ್ಪಸದ ರಕ್ತ ಹೆಪ್ಪುಗಟ್ಟುವಿಕೆಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಶಿವಮೊಗ್ಗದ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಎಂಜಿನಿಯರ್ ಆಗಿರುವ 52 ವರ್ಷದ ವ್ಯಕ್ತಿಯೊಬ್ಬರು 4 ವರ್ಷಗಳಿಂದ ಅಸ್ತಮಾ ರೀತಿಯ ತೊಂದರೆಯಿಂದ ಬಳಲುತ್ತಿದ್ದರು. ಲ್ಯಾಬೋರೇಟರಿ, ಇಮೇಜಿಂಗ್‌ ಸರ್ವೀಸ್ ಸೆಂಟರ್‌ಗಳಲ್ಲಿ ನಡೆಸಿದ ಸ್ಥೂಲ ಪರೀಕ್ಷೆಯ ನಂತರ ಇದೊಂದು ಪುಪ್ಪಸದ ರಕ್ತ ಹೆಪ್ಪುಗಟ್ಟುವುದು (ಕ್ರಾನಿಕ್ ಪಲ್ಮನವರಿ ಥರ್ಮೊ ಎಂಬಾಲಿಸಂ) ಕಾಯಿಲೆ ಎಂಬುದು ದೃಢಪಟ್ಟಿತು.

ಶ್ವಾಸಕೋಶದ ಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟಿ, ಬಲಗಡೆಯ ಹೃದಯದ ಹಿಂದೆ ಉಂಟಾಗುವ ಅತೀವ ಒತ್ತಡದ ಪರಿಣಾಮ ಹೃದಯ ಉಬ್ಬಿ ನಿರಂತರವಾಗಿ ಉಸಿರಾಟದ ತೊಂದರೆಯಾಗಿತ್ತು. ಅವರು ಆಮ್ಲಜನಕಕ್ಕೆ ಅವಲಂಬಿತರಾಗುವುದು ಅನಿವಾರ್ಯವಾಗಿತ್ತು. ಶ್ವಾಸಕೋಶ ಮತ್ತು ಪಲ್ಮನರಿ ಆರ್ಟರಿ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಅವರು ಹಲವು ಔಷಧಗಳ ಮೊರೆಹೋಗಿದ್ದರು. ಅಲ್ಲದೇ ಈತೊಂದರೆಯ ನಿವಾರಣೆಗಾಗಿ ರಾಜ್ಯದ ಮತ್ತು ಹೊರ ರಾಜ್ಯದ ಹಲವು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದರು.

ADVERTISEMENT

ಡಾ. ಎಚ್.ಎಲ್.ಸುಬ್ಬರಾವ್ ಮತ್ತು ತಂಡ ಮಾರ್ಚ್ ತಿಂಗಳಲ್ಲಿ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿತು. ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಒಂದು ತಂಡವಾಗಿ ಕೆಲಸ ಮಾಡಿದ್ದರಿಂದ ಮಿದುಳಿನ ಚಟುವಟಿಕೆಯ ಮೇಲೆ ತೀವ್ರ ನಿಗಾ ಇರಿಸುವುದು, ರಕ್ತದ ಪಿಎಚ್ ಮೇಲೆ ನಿಗಾವಣೆ, ತಾಪಮಾನದ ನಿಯಂತ್ರಣ ಇವೆಲ್ಲವೂ ಏಕಕಾಲದಲ್ಲಿ ಸಾಧ್ಯವಾಗಿದೆ. ರೋಗಿಯು ಏಪ್ರಿಲ್ 24ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ರೋಗಿಗೆ ಮೂರು ದಿನ ವೆಂಟಿಲೇಟರ್‌ ಅಳವಡಿಸಲಾಗಿತ್ತು. ಶಸ್ತ್ರಚಿಕಿತ್ಸೆ ನಂತರ ರೋಗಿಯ ಸ್ಥಿತಿ ದಿನದಿಂದ ದಿನಕ್ಕೆ ಸುಧಾರಿಸಿದೆ.

ಡಾ.ಮಧುಸೂದನ್, ಸಹಾಯಕ ರಮೇಶ್‌ ಮತ್ತು ನಾಗರಾಜ್, ಹೃದಯರೋಗ ತಜ್ಞ ಡಾ.ವೆಂಕಟೇಶ್, ಡಾ.ಮುರಳೀಧರ್, ಸರಿತಾ ಶಸ್ತ್ರಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.