ಮಲೇಬೆನ್ನೂರು: ಸಮೀಪದ ದೇವರಬೆಳಕೆರೆ ಗ್ರಂಥಾಲಯ ಮತ್ತು ಅರಿವು ಕೇಂದ್ರದಿಂದ ಆಯೋಜಿಸಿರುವ ಬೇಸಿಗೆ ಶಿಬಿರದಲ್ಲಿ ವಿವಿಧ ಬಗೆಯ ಚಟುವಟಿಕೆ ಕೈಗೊಂಡಿದ್ದು, ಮಕ್ಕಳನ್ನು ಸೆಳೆಯುತ್ತಿದೆ.
15 ದಿನಗಳ ವಿಶೇಷ ತರಬೇತಿ ಆಯೋಜಿಸಿದ್ದು, ಗ್ರಾಮೀಣ ಸೊಗಡಿನ ಜಾನಪದ ಕಲೆ ರಂಗೋಲಿ ಹಾಕುವುದು, ಗೀತ ಗಾಯನ, ಭಜನೆ, ನೃತ್ಯ, ನಾಟಕ ಕಲಿಸಲಾಗುತ್ತಿದೆ.
ಗ್ರಂಥಾಲಯದಲ್ಲಿನ ಪುಸ್ತಕದ ಗಟ್ಟಿ ಓದು, ಕನ್ನಡ, ಇಂಗ್ಲಿಷ್ ಓದು, ಉಕ್ತ ಲೇಖನ, ಗಣಕ ಯಂತ್ರ ತರಬೇತಿ, ಚಿತ್ರ ಬರೆದು ಬಣ್ಣ ಹಾಕುವುದು, ಕಾರ್ಟೂನ್ ವೀಕ್ಷಣೆ, ಮಾಹಿತಿ ನೀಡಲಾಗುತ್ತಿದೆ. ಆಶುಭಾಷಣ, ಪ್ರಬಂಧ ಸ್ಪರ್ಧೆ, ಗುಂಪು ಚರ್ಚೆ ಆಯೋಜಿಸಿ ಮಕ್ಕಳ ಜಾಣತನ ಓರೆಗೆ ಹಚ್ಚಲಾಗುತ್ತಿದೆ.
ಗ್ರಾಮೀಣ ಕ್ರೀಡೆಗಳಾದ ಚೆನ್ನಮಣಿ, ಚುರುಕಿ, ಚೆಸ್, ಕೇರಂ, ಚೆಂಡಿನಾಟ, ಲಗೋರಿ, ಕಣ್ಣಾಮುಚ್ಚಾಲೆ, ಕುಂಟಬಿಲ್ಲೆ, ಚಿನ್ನಿದಾಂಡು, ಸೈಕಲ್ ಓಡಿಸುವ ಆಟ ಕಲಿಸಲಾಗುತ್ತಿದೆ.
‘ದಿನವಿಡಿ ಒಂದಿಲ್ಲೊಂದು ಚಟುವಟಿಕೆ ಮಕ್ಕಳನ್ನು ಒಂದೆಡೆ ಹಿಡಿದಿಟ್ಟಿವೆ. ಅನಗತ್ಯ ಸುತ್ತಾಟ, ನಾಲೆ, ಬಾವಿಗಳಿಗೆ ಈಜಾಡಲು ಹೋಗುವುದನ್ನು ತಪ್ಪಿಸಿವೆ’ ಎಂದು ಪಾಲಕರಾದ ರಾಜಪ್ಪ, ಶಶಿಕಲಾ ಸಂತಸದಿಂದ ಹೇಳಿದರು.
ಮಕ್ಕಳು ಚಿಕ್ಕಪುಟ್ಟ ಪೆಟ್ಟು, ಬಿದ್ದು ಗಾಯಗೊಳ್ಳುವುದು, ಕೈಜಕಾಲು ಮುರಿದುಕೊಳ್ಳುವುದು ಈ ಬಾರಿ ತಪ್ಪಿಸಿದೆ ಎಂದರು.
ನಗರ ಪ್ರದೇಶದ ಮಕ್ಕಳಿಗೆ ಸಿಗುವ ಸೌಲಭ್ಯ ಗ್ರಾಮೀಣ ಪ್ರದೇಶದಲ್ಲಿ ಇಲ್ಲ. ಅದು ಸಿಗಲಿ ಎಂಬ ಉದ್ದೇಶದಿಂದ ಶಿಬಿರ ಆಯೋಜಿಸಲಾಗಿದೆ. ಮಕ್ಕಳೂ ಆಸಕ್ತಿಯಿಂದ ಪಾಲ್ಗೊಳ್ಳುತ್ತಿದ್ದಾರೆ. ಗ್ರಾಮಸ್ಥರು ಸಹಕಾರ ನೀಡುತ್ತಿದ್ದಾರೆ ಎಂದು ಗ್ರಂಥಪಾಲಕ ಗಣೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.