ದಾವಣಗೆರೆ: ರೇಣುಕಾ ಯಲ್ಲಮ್ಮ ದೇವಿಯ ನೂತನ ದೇಗುಲ ನಿರ್ಮಾಣದ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸುತ್ತಿದ್ದ ಗುಂಪೊಂದನ್ನು ತಾಲ್ಲೂಕಿನ ಈಚಘಟ್ಟ ಗ್ರಾಮದ ಜನರು ಮಂಗಳವಾರ ಹಿಡಿದು ದೇಗುಲವೊಂದರಲ್ಲಿ ಕೂಡಿಹಾಕಿ ಥಳಿಸಿದ್ದಾರೆ.
ಥಳಿತಕ್ಕೆ ಒಳಗಾದವರನ್ನು ನಾರಾಯಣ, ಮಂಜುನಾಥ್, ಚಂದ್ರಶೇಖರ್, ರಮೇಶ್ ಹಾಗೂ ಶಿವಪ್ಪ ಎಂದು ಗುರುತಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಕಾರೇಹಳ್ಳಿ ದಾಸರಹಟ್ಟಿ ಗ್ರಾಮದವರು ಎಂದು ಅವರು ಹೇಳಿಕೊಂಡಿದ್ದಾರೆ.
ದಾವಣಗೆರೆ ಹಾಗೂ ಚನ್ನಗಿರಿ ತಾಲ್ಲೂಕಿನ ಕೆಲ ಗ್ರಾಮಗಳಿಗೆ ಭೇಟಿ ನೀಡಿದ ಗುಂಪು, ಕಾರೇಹಳ್ಳಿ ದಾಸರಹಟ್ಟಿಯಲ್ಲಿ ರೇಣುಕಾ ಯಲ್ಲಮ್ಮದೇವಿ ದೇಗುಲ ನಿರ್ಮಾಣದ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸಿದೆ. ಗ್ರಾಮದ ಸ್ಥಿತಿವಂತರ ಮನೆಗಳಿಗೆ ಭೇಟಿ ನೀಡಿ ದೇಗುಲದ ಕರಪತ್ರ ಕೈಗಿಟ್ಟು ದೇಣಿಗೆ ಕೇಳಿದೆ. ಅನೇಕರು ₹ 1,000ದಿಂದ ₹ 25,000ದವರೆಗೆ ದೇಣಿಗೆ ನೀಡಿದ್ದಾರೆ.
ಈಚಘಟ್ಟ ಗ್ರಾಮಕ್ಕೆ ಮಂಗಳವಾರ ಬಂದಿದ್ದ ಗುಂಪು ಅನುಮಾನಸ್ಪದವಾಗಿ ವರ್ತಿಸಿದೆ. ಸಂಶಯಗೊಂಡ ಗ್ರಾಮಸ್ಥರು ಕರಪತ್ರ, ರಸೀದಿಯನ್ನು ಪರಿಶೀಲಿಸಿದ್ದಾರೆ. ಕಾರೇಹಳ್ಳಿ ದಾಸರಹಟ್ಟಿ ಗ್ರಾಮಸ್ಥರನ್ನು ಸಂಪರ್ಕಿಸಿ ವಿಚಾರಿಸಿದ್ದಾರೆ. ಆ ಗ್ರಾಮದಲ್ಲಿ ದೇಗುಲ ನಿರ್ಮಾಣ ಆಗುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಜನರು ದೇಣಿಗೆ ಸಂಗ್ರಹಕ್ಕೆ ಬಂದಿದ್ದವರನ್ನು ದೇಗುಲದಲ್ಲಿ ಕೂಡಿಹಾಕಿ ಥಳಿಸಿದ್ದಾರೆ.
‘ರೇಣುಕಾ ಯಲ್ಲಮ್ಮದೇವಿ ಹಾಗೂ ಆಂಜನೇಯ ಚಿತ್ರವನ್ನು ಹಿಡಿದು ಮನೆ ಪ್ರವೇಶಿಸುತ್ತಿದ್ದರು. ದೇಣಿಗೆಯನ್ನು ನೀಡುವಂತೆ ಪಟ್ಟು ಹಿಡಿಯುತ್ತಿದ್ದರು. ಅನುಮಾನಗೊಂಡು ಪರಿಶೀಲಿಸಿ ದೇಗುಲಕ್ಕೆ ಕರೆದೊಯ್ದು ವಿಚಾರಿಸಿದಾಗ ಹೆದರಿ ಹಣ ಮರಳಿಸಿದರು’ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ದೇಗುಲದಲ್ಲಿ ಕೂಡಿ ಹಾಕಿದ ಮಾಹಿತಿ ತಿಳಿದು ಮಾಯಕೊಂಡ ಠಾಣೆಯ ಪೊಲೀಸರು ಈಚಘಟ್ಟ ಗ್ರಾಮಕ್ಕೆ ಭೇಟಿ ನೀಡಿದ್ದರು. ದೇಣಿಗೆ ಪಡೆದ ಹಣವನ್ನು ಮರಳಿಸಿದ ಬಳಿಕ ಗ್ರಾಮಸ್ಥರು ಗುಂಪನ್ನು ಬಿಡುಗಡೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.