ADVERTISEMENT

ಅರಿವಿನ ಕೊರತೆಯಿಂದ ಹತ್ತು ದೂರು: ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

ವಿಶ್ವ ಗ್ರಾಹಕರ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಕಳವಳ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2021, 4:03 IST
Last Updated 17 ಮಾರ್ಚ್ 2021, 4:03 IST
ದಾವಣಗೆರೆಯ ಆರ್.ಎಲ್. ಕಾನೂನು ಕಾಲೇಜಿನಲ್ಲಿ ಮಂಗಳವಾರ ನಡೆದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿದರು.  –ಪ್ರಜಾವಾಣಿ ಚಿತ್ರ
ದಾವಣಗೆರೆಯ ಆರ್.ಎಲ್. ಕಾನೂನು ಕಾಲೇಜಿನಲ್ಲಿ ಮಂಗಳವಾರ ನಡೆದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿದರು.  –ಪ್ರಜಾವಾಣಿ ಚಿತ್ರ   

ದಾವಣಗೆರೆ: ‘ದಾವಣಗೆರೆ ದೊಡ್ಡ ವ್ಯಾಪಾರ ಕೇಂದ್ರವಾದರೂ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ತಿಂಗಳಿಗೆ ಕೇವಲ 10 ದೂರುಗಳು ಬರುತ್ತಿರುವುದು ಕಾನೂನಿನ ಅರಿವಿನ ಕೊರತೆ ಇದೆ ಎಂಬುದನ್ನು ತಿಳಿಸುತ್ತದೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ವಿಷಾದ ವ್ಯಕ್ತಪಡಿಸಿದರು.

ಜಿಲ್ಲಾಡಳಿತ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಗಳ ಸಹಯೋಗದಲ್ಲಿ ನಗರದ ಆರ್.ಎಲ್. ಕಾನೂನು ಕಾಲೇಜಿನಲ್ಲಿ ಮಂಗಳವಾರ ನಡೆದ ವಿಶ್ವ ಗ್ರಾಹಕರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘8 ಲಕ್ಷ ಜನಸಂಖ್ಯೆ ಇರುವ ಜಿಲ್ಲೆಯಲ್ಲಿ ಒಂದು ವರ್ಷಕ್ಕೆ 120 ಪ್ರಕರಣಗಳು ಮಾತ್ರ ದಾಖಲಾಗುತ್ತಿವೆ. ಹಾಗಾದರೆ ಎಲ್ಲ ವ್ಯಾಪಾರ ವಹಿವಾಟುಗಳು ಕಾನೂನಿನ್ವಯ ಆಗುತ್ತಿವೆಯೇ ಅಥವಾ ಕಾನೂನಿನ ಅರಿವಿನ ಕೊರತೆಯಿಂದ ಗ್ರಾಹಕರು ಆಯೋಗಕ್ಕೆ ದೂರು ನೀಡುತ್ತಿಲ್ಲವೇ ಎಂಬ ಪ್ರಶ್ನೆ ಹಾಕಿಕೊಳ್ಳಬೇಕು’ ಎಂದರು.

ADVERTISEMENT

‘ನಾವು ಕೊಳ್ಳುವ ಪ್ರತಿ ವಸ್ತುವಿಗೂ ರಶೀದಿ ಪಡೆದರೆ ಮಾತ್ರ ಗ್ರಾಹಕರ ಆಯೋಗಕ್ಕೆ ದೂರು ನೀಡಿ ನ್ಯಾಯ ಪಡೆಯಲು ಸಾಧ್ಯ.ಗ್ರಾಹಕರು ಖರೀದಿಸಿದ ಉತ್ಪನ್ನ ಅಥವಾ ಸೇವೆಗಳಿಗೆ ಸಂಬಂಧಿಸಿದಂತೆ ಪ್ರತಿ ತಿಂಗಳು ಕನಿಷ್ಠ 100 ದೂರುಗಳನ್ನು ಗ್ರಾಹಕರ ಆಯೋಗಕ್ಕೆ ದಾಖಲಿಸಬೇಕು. ಆಗ ಮಾತ್ರ ಈ ದಿನಾಚರಣೆ ಸಾರ್ಥಕವಾಗುತ್ತದೆ’ ಎಂದು ಹೇಳಿದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಗೋಖಲೆ ಘಾಳಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಮಾರುಕಟ್ಟೆಯಲ್ಲಿ ಪ್ರತಿದಿನ ನೂರಾರು ಪ್ರಕರಣಗಳನ್ನು ದಾಖಲಿಸಬಹುದು. ಆದರೆ ಜನರಿಗೆ ಪ್ರಶ್ನೆ ಮಾಡುವ ಶಕ್ತಿ ಇಲ್ಲವಾಗಿದೆ. ವ್ಯಾಪಾರಿಗಳು ₹10, 20ಕ್ಕೆಲ್ಲ ಯಾರು ಬಿಲ್ಲು ಕೊಡುತ್ತಾರೆ ಎಂದು ಹೇಳುತ್ತಾರೆ.ಕಾನೂನು ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ಗ್ರಾಹಕರು ಪ್ರಶ್ನೆ ಮಾಡುವುದನ್ನು ಕಲಿಯಬೇಕು’ ಎಂದು ಸಲಹೆ ನೀಡಿದರು.

ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಜಿಲ್ಲೆಯಲ್ಲಿ ಪ್ರತಿ ವರ್ಷ 30 ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿ ಗ್ರಾಹಕರ ಕ್ಲಬ್ ಸ್ಥಾಪಿಸಿ, ಮಕ್ಕಳಲ್ಲೂ ಗ್ರಾಹಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಈ ಬಾರಿ ‘ಟ್ಯಾಕಲ್ ಪ್ಲಾಸ್ಟಿಕ್ ಅಂಡ್ ಪೊಲ್ಯೂಷನ್’ ಎಂಬ ಘೋಷವಾಕ್ಯದಡಿ ಗ್ರಾಹಕರ ಹಕ್ಕುಗಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ’ ಎಂದರು.

ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಸಂಚಾಲಕ ಪಿ. ಅಂಜನಪ್ಪ ಉಪನ್ಯಾಸ ನೀಡಿದರು. ಆರ್.ಎಲ್. ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಸೋಮಶೇಖರಪ್ಪ, ಆಹಾರ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಟಿ. ಪ್ರಕಾಶ್ ಪ್ರಾರ್ಥಿಸಿದರು. ಕಾನೂನು ಮಾಪನಶಾಸ್ತ್ರದ ಸಹಾಯಕ ನಿಯಂತ್ರಕ ಎಚ್.ಎಸ್. ರಾಜು ವಂದಿಸಿದರು.

‘ವೈದ್ಯರ ನಿರ್ಲಕ್ಷ್ಯಕ್ಕೂ ಪರಿಹಾರ’

‘ಆಸ್ಪತ್ರೆಗಳಲ್ಲಿ ವೈದ್ಯರ ನಿರ್ಲಕ್ಷ್ಯ ವಹಿಸಿದರೂ ಗ್ರಾಹಕರ ಸಂರಕ್ಷಣಾ ಆಯೋಗದಲ್ಲಿ ಅಪೀಲು ದಾಖಲಿಸಿ ಪರಿಹಾರ ಪಡೆಯಬಹುದು’ ಎಂದುಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ಜ್ಯೋತಿ ರಾಧೇಶ್ ಜಂಬಿಗಿ ಹೇಳಿದರು.

‘ಮುದ್ರಿತ ಅಥವಾ ನಿಗದಿತ ದರಕ್ಕಿಂತ ಹೆಚ್ಚಿನ ದರ ಪಡೆಯುವುದು, ವಸ್ತು ಅಥವಾ ಸೇವೆಯಲ್ಲಿನ ಕೊರತೆ, ನ್ಯೂನ್ಯತೆಯ ಬಗ್ಗೆ, ಗ್ರಾಹಕರಿಗೆ ನಕಲಿ ಸಂದೇಶ ಮತ್ತು ಜಾಹೀರಾತು ರವಾನೆ ಮಾಡಿದರೆ ಅಪೀಲು ದಾಖಲಿಸಿ ಪರಿಹಾರ ಪಡೆಯಬಹುದು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.