ಮಾದಾರ ಚನ್ನಯ್ಯ ಸ್ವಾಮೀಜಿ
ದಾವಣಗೆರೆ: ಒಳಮೀಸಲಾತಿ ಜಾರಿಗೊಳಿಸುವ ಸಂಬಂಧ ದತ್ತಾಂಶ ಸಂಗ್ರಹದಲ್ಲಿ ತೊಡಗಿರುವ ರಾಜ್ಯ ಸರ್ಕಾರ ಕಾಲಮಿತಿಯಲ್ಲಿ ಇದನ್ನು ಅನುಷ್ಠಾನಗೊಳಿಸುವ ವಿಶ್ವಾಸವಿದೆ. ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾದಿಗ ಸಮುದಾಯ ಬೆಂಬಲವಾಗಿ ನಿಲ್ಲುವ ಅಗತ್ಯವಿದೆ ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ರೋಟರಿ ಬಾಲಭವನದಲ್ಲಿ ಮಾದಿಗ ದಂಡೋರ ಜಿಲ್ಲಾ ಸಮಿತಿ ವತಿಯಿಂದ ಮಾಪಣ್ಣ ಹದನೂರು ಅವರಿಗೆ ಭಾನುವಾರ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಒಳಮೀಸಲಾತಿ ಅನುಷ್ಠಾನಗೊಂಡರೆ ಕೇವಲ ಮಾದಿಗ ಸಮುದಾಯಕ್ಕಷ್ಟೇ ಪ್ರತಿಫಲ ಸಿಗುವುದಿಲ್ಲ. ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳು ಇದರ ಪ್ರಯೋಜನಕ್ಕೆ ಭಾಜನವಾಗಲಿವೆ. ಮೀಸಲಾತಿ ನಿಗದಿಯಲ್ಲಿ ಕೊಂಚ ವ್ಯತ್ಯಾಸವಾದರೂ ತಾಳ್ಮೆಯಿಂದ ಇರಬೇಕಿದೆ. ಉದಾರ ಮನೋಭಾವ ಬೆಳೆಸಿಕೊಳ್ಳಬೇಕಿದೆ’ ಎಂದು ಸಲಹೆ ನೀಡಿದರು.
‘ಇತ್ತೀಚೆಗೆ ದಾವಣಗೆರೆಗೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಒಳಮೀಸಲಾತಿ ಕುರಿತು ಚರ್ಚೆ ನಡೆಸಲಾಗಿದೆ. ಸಿದ್ದರಾಮಯ್ಯ ಅವರು ಒಳಮೀಸಲಾತಿ ಬಗ್ಗೆ ಸಕಾರಾತ್ಮಕ ಭಾವನೆ ಹೊಂದಿರುವುದು ಗಮನಕ್ಕೆ ಬಂದಿದೆ. ಮಾದಿಗ ಸಮುದಾಯ ಅವರಿಗೆ ಮಾನಸಿಕ, ನೈತಿಕ ಹಾಗೂ ಸಂಘಟನಾತ್ಮಕವಾಗಿ ಬೆಂಬಲ ನೀಡಬೇಕಿದೆ’ ಎಂದು ಹೇಳಿದರು.
‘ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಅವರು ದತ್ತಾಂಶ ಸಂಗ್ರಹದಲ್ಲಿ ಸಕ್ರಿಯರಾಗಿದ್ದಾರೆ. ಸಮುದಾಯದ ಬಂಧುಗಳು ಆಯೋಗಕ್ಕೆ ಪೂರಕ ಮಾಹಿತಿ ಒದಗಿಸಬೇಕು. ಬೆಳಗಾವಿಯಲ್ಲಿ ನಡೆದ ಹೋರಾಟಕ್ಕೆ ಸರ್ಕಾರ ಸೂಕ್ತವಾಗಿ ಸ್ಪಂದಿಸಿದೆ. ಮುಂದಿನ ದಿನಗಳ ಬಗ್ಗೆ ಆಶಾಭಾವನೆಯಿಂದ ಇರೋಣ’ ಎಂದರು.
‘ಸಮುದಾಯದ ಸಂಘಟನೆಗೆ ಸಂಬಂಧಿಸಿದಂತೆ ಚರ್ಚೆ ನಡೆಸುವ ಅಗತ್ಯವಿದೆ. ಶಿವರಾತ್ರಿಯ ಒಳಗೆ ಸಮುದಾಯದ ಎಲ್ಲ ಸಂಘಟನೆ ಹಾಗೂ ಪಕ್ಷದ ಮುಖಂಡರನ್ನು ಚಿತ್ರದುರ್ಗದ ಗುರುಪೀಠಕ್ಕೆ ಆಹ್ವಾನಿಸಲಾಗುವುದು. ಸಮುದಾಯದ ಸಶಕ್ತ ಸಂಘಟನೆಗೆ ಸಂಬಂಧಿಸಿದಂತೆ ತೀರ್ಮಾನ ತೆಗೆದುಕೊಳ್ಳೋಣ’ ಎಂದು ನುಡಿದರು.
ಪಾವಗಡದ ಮಾಜಿ ಶಾಸಕ ತಿಮ್ಮರಾಯಪ್ಪ, ಮಾದಿಗ ದಂಡೋರಾ ರಾಜ್ಯ ಘಟಕದ ಅಧ್ಯಕ್ಷ ಬಿ.ನರಸಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಬಿ.ನರಸಿಂಹಸ್ವಾಮಿ, ಮುಖಂಡರಾದ ಹುಸೇನಪ್ಪ ಸ್ವಾಮಿ, ಎಂ.ಸಿ.ಶ್ರೀನಿವಾಸ, ಎಚ್.ಬಸವರಾಜು, ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷ ತಿಪ್ಪೇಸ್ವಾಮಿ, ವಕೀಲ ಅನೀಷ್ ಪಾಷಾ, ಎಚ್.ಚಿದಾನಂದಪ್ಪ, ಬಿ.ಎ.ಮಹೇಶ್, ಜಿ.ಗೋವಿಂದಪ್ಪ, ಪಾವಗಡ ಶ್ರೀರಾಮ್ ಹಾಜರಿದ್ದರು.
ಮಾಪಣ್ಣ ಅವರು ವೈಯಕ್ತಿಕ ಬದುಕು ತ್ಯಜಿಸಿ ಮೂರು ದಶಕಗಳಿಂದ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಸಮುದಾಯದ ಹಿತಾಸಕ್ತಿಗೆ ದುಡಿದ ರೀತಿ ಮಾದರಿಯಾಗಿದೆ.ಎಚ್.ಸಿ.ಗುಡ್ಡಪ್ಪ, ಅಧ್ಯಕ್ಷ, ಮಾದಿಗ ದಂಡೋರ ಜಿಲ್ಲಾ ಘಟಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.