ADVERTISEMENT

ವಿವೇಕ ವಿಚಾರ ವೇದಿಕೆ ಕಾಲದ ತುರ್ತು: ಡಾ.ಎ.ಬಿ. ರಾಮಚಂದ್ರಪ್ಪ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 12:43 IST
Last Updated 4 ಫೆಬ್ರುವರಿ 2020, 12:43 IST
ದಾವಣಗೆರೆಯಲ್ಲಿ ರಚಿಸಿದ ವಿವೇಕ ವಿಚಾರ ವೇದಿಕೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಚಿಂತಕ ಡಾ.ಎ.ಬಿ. ರಾಮಚಂದ್ರಪ್ಪ ಮಾತನಾಡಿದರು
ದಾವಣಗೆರೆಯಲ್ಲಿ ರಚಿಸಿದ ವಿವೇಕ ವಿಚಾರ ವೇದಿಕೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಚಿಂತಕ ಡಾ.ಎ.ಬಿ. ರಾಮಚಂದ್ರಪ್ಪ ಮಾತನಾಡಿದರು   

ದಾವಣಗೆರೆ: ಸತ್ಯ, ಶಾಂತಿ, ಅಹಿಂಸೆಯ ಅನಿವಾರ್ಯದಿಂದಾಗಿ ಗಾಂಧಿ ಈ ನಾಡಿನಲ್ಲಿ ಹುಟ್ಟಿದರು. ಜಾತಿನಿಷ್ಠೆ ವ್ಯವಸ್ಥೆಯ ವಿರುದ್ಧದ ಅನಿವಾರ್ಯತೆಯಿಂದಾಗಿ ಅಂಬೇಡ್ಕರ್ ಉದಯಿಸಿದರು. ಹಾಗೆಯೇ ವಿವೇಕ ವಿಚಾರ ವೇದಿಕೆ ಕೂಡ ಇಂತಹಯೊಂದು ಕಾಲದ ತುರ್ತಿಗೆ ಜನ್ಮ ತಾಳಿದೆ ಎಂದು ಚಿಂತಕ ಡಾ.ಎ.ಬಿ. ರಾಮಚಂದ್ರಪ್ಪ ಅಭಿಪ್ರಾಯ ಪಟ್ಟರು.

ಇಲ್ಲಿನ ಅಕ್ತರ್ ರಜಾ ವೃತ್ತದಲ್ಲಿ ಭಾನುವಾರ ವಿವೇಕ ವಿಚಾರ ವೇದಿಕೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಜಾತಿ, ಧರ್ಮ, ಭಾಷೆ, ಗಡಿಗಳಿಲ್ಲದೆ ವಿಚಾರವಂತರ ವೇದಿಕೆಯಾಗಿ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಲು, ಅದನ್ನು ಬೆಳೆಸಲು ಜನ್ಮತಾಳಿರುವುದು ಹೆಮ್ಮೆಯ ಸಂಗತಿ. ದೇಶದಲ್ಲಿ ಸದ್ಯ ಹೋರಾಟ ಮಾಡಿ ಜನರ ಶಾಂತಿ, ನೆಮ್ಮದಿ, ಸೌಹಾರ್ದವನ್ನು ಕಾಪಾಡಿಕೊಳ್ಳಬೇಕಾದ ಸ್ಥಿತಿ ಇದೆ ಎಂದು ವಿಶ್ಲೇಷಿಸಿದರು.

ADVERTISEMENT

ಬರಹಗಾರ ಷಣ್ಮುಖ ಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ಗಳಂಥ ಅವಿವೇಕದ ಕಾನೂನುಗಳನ್ನು ಜಾರಿಗೆ ತಂದು ಜನರ ಶಾಂತಿ, ನೆಮ್ಮದಿ, ಸೌಹಾರ್ದವನ್ನು ಪಂಚರ್‌ ಮಾಡಲಾಗಿದೆ. ಇದರ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಇಂತಹ ಸಂಘಟನೆಗಳು ಇನ್ನಷ್ಟು ಜನ್ಮತಾಳಬೇಕು. ಸಮಾನತೆ, ಸಹಬಾಳ್ವೆಯನ್ನು ಕಾಪಾಡಬೇಕು’ ಎಂದು ತಿಳಿಸಿದರು.

ಆಳುವ ಸರ್ಕಾರಗಳು ಸುಳ್ಳು ಹೇಳುತ್ತಿವೆ. ಅವರ ಹಸಿ ಸುಳ್ಳುಗಳನ್ನು ಬಯಲು ಮಾಡುವ ಕೆಲಸವನ್ನು ಸಂಘಟನೆ ನಿರಂತರವಾಗಿ ಮಾಡುವಂತಾಗಲಿ ಎಂದು ಆಶಿಸಿದರು.

ಕಾನೂನು ಸಲಹೆಗಾರ ಖಲೀಲ್ ಖಾನ್, ಪಾಲಿಕೆ ಸದಸ್ಯ ಕಬೀರ್ ಖಾನ್, ವೇದಿಕೆಯ ಅಧ್ಯಕ್ಷ ಇರ್ಫಾನ್ ಅಹಮದ್ ಮಾತನಾಡಿದರು. ಸಾದಿಕ್, ಮುನ್ನಾ, ಯೂಸುಫ್‌, ರಮೇಶ್ ಅವರೂ ಇದ್ದರು. ಶಾಂತರಾಜ್ ಜೈನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಬಿ. ಭರತ್ ವಂದಿಸಿದರು. ಗಗನಶ್ರೀ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.