ದಾವಣಗೆರೆ: ಇ-ಚಲನ್ ಮೂಲಕ ದಾಖಲಾಗಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ಪಾವತಿಗೆ ಶೇ. 50ರಷ್ಟು ರಿಯಾಯಿತಿ ಘೋಷಿಸಿದ್ದರೂ ಸೆಪ್ಟೆಂಬರ್ 2ರವರೆಗೆ ಜಿಲ್ಲೆಯಲ್ಲಿ ₹ 16.57 ಲಕ್ಷ ದಂಡ ಮಾತ್ರ ಸಂಗ್ರಹವಾಗಿದೆ. ಒಟ್ಟು 6,021 ಪ್ರಕರಣಗಳು ಇತ್ಯರ್ಥವಾಗಿವೆ.
ಜಿಲ್ಲೆಯಲ್ಲಿ ವಾಹನ ಸವಾರರು ನಿಯಮ ಉಲ್ಲಂಘಿಸಿರುವುದಕ್ಕೆ ವಿಧಿಸಲಾದ ದಂಡದ ರೂಪದಲ್ಲಿ ₹ 14.81 ಕೋಟಿ ಬಾಕಿ ಇದೆ. ಸೆಪ್ಟೆಂಬರ್ 12ರವರೆಗೆ ಶೇ 50ರ ರಿಯಾಯಿತಿ ಸೌಲಭ್ಯದೊಂದಿಗೆ ದಂಡ ಪಾವತಿಗೆ ಅವಕಾಶ ಇದೆ. ವಾಹನ ಸವಾರರು ರಿಯಾಯಿತಿ ಸೌಲಭ್ಯವನ್ನು ಸದುಪಯೋಗ ಮಾಡಿಕೊಳ್ಳಲು ಉತ್ಸುಕತೆ ತೋರುತ್ತಿದ್ದರೂ, ಇನ್ನೂ ಪಾವತಿಸಬೇಕಾದ ದಂಡದ ಮೊತ್ತ ಭಾರಿ ಪ್ರಮಾಣದಲ್ಲಿ ಉಳಿದುಕೊಂಡಿದೆ. ಬಾಕಿ ಇರುವ ಮೊತ್ತ ಕೋಟಿಗಳಲ್ಲಿದ್ದರೆ, ಪಾವತಿಸುತ್ತಿರುವ ಮೊತ್ತ ಮಾತ್ರ ಲಕ್ಷದಲ್ಲಿದೆ. ರಿಯಾಯಿತಿ ಸೌಲಭ್ಯವನ್ನು ಉಪಯೋಗಿಸಿಕೊಂಡಾದರೂ, ಒಂದಿಷ್ಟು ದಂಡದ ಮೊತ್ತವನ್ನು ಕಟ್ಟುತ್ತಿರುವುದೇ ಪೊಲೀಸ್ ಇಲಾಖೆಗೆ ಸಮಾಧಾನ ತರಿಸಿದೆ.
ರಿಯಾಯಿತಿ ಸೌಲಭ್ಯ ಆರಂಭಗೊಂಡ ಮೊದಲ ದಿನವೇ (ಆಗಸ್ಟ್ 23ರಂದು) 99 ಪ್ರಕರಣಗಳು ಇತ್ಯರ್ಥಗೊಂಡು ₹ 51,500 ದಂಡ ಸಂಗ್ರಹವಾಗಿತ್ತು. ಮರುದಿನ 103 ಪ್ರಕರಣಗಳಲ್ಲಿ ₹ 47,000 ದಂಡ ಸಂಗ್ರಹವಾಗಿತ್ತು. ಆ. 25ರಂದು ಒಂದೇ ದಿನ 729 ಪ್ರಕರಣಗಳಿಗೆ ಸಂಬಂಧಿಸಿ ವಾಹನ ಸವಾರರು ₹ 1,91,250 ದಂಡ ಪಾವತಿಸಿದ್ದಾರೆ.
ಆ.30ರಂದು 855 ಪ್ರಕರಣಗಳು ಇತ್ಯರ್ಥಗೊಂಡು ₹ 2,34,500 ದಂಡ ಸಂಗ್ರಹವಾಗಿದೆ. ಇದು ಇಲ್ಲಿಯವರೆಗೂ ಒಂದು ದಿನದಲ್ಲಿ ಸಂಗ್ರಹಗೊಂಡ ದಂಡದ ಗರಿಷ್ಠ ಮೊತ್ತವಾಗಿದೆ. ಇನ್ನುಳಿದಂತೆ ಪ್ರತೀ ದಿನವೂ ಕನಿಷ್ಠ ₹ 50,000 ದಿಂದ ಗರಿಷ್ಠ ₹ 2 ಲಕ್ಷದ ವರೆಗೆ ವಾಹನ ಸವಾರರು ದಂಡದ ಮೊತ್ತವನ್ನು ಪಾವತಿಸುತ್ತಿದ್ದಾರೆ.
ನಗರದ ವಿವಿಧೆಡೆ ಇರುವ ಸಿ.ಸಿ. ಟಿವಿ ಕ್ಯಾಮೆರಾಗಳು ಹಾಗೂ ಫೀಲ್ಡ್ ಟ್ರಾಫಿಕ್ ವೈಲೇಷನ್ ರಿಪೋರ್ಟ್ (ಎಫ್‌ಟಿವಿಆರ್) ಆಧರಿಸಿ ಸಂಚಾರ ಪೊಲೀಸರು ದಾಖಲಿಸಿದ್ದ ಪ್ರಕರಣಗಳಿಗೆ ಇದೀಗ ವಾಹನ ಸವಾರರು ದಂಡ ಪಾವತಿಸುತ್ತಿದ್ದಾರೆ. ದಾವಣಗೆರೆ ಸ್ಮಾರ್ಟ್ ಸಿಟಿ ಕಚೇರಿಯಲ್ಲಿನ ಪೊಲೀಸ್ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್‌ನಲ್ಲಿ ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ನಿರ್ವಹಿಸುತ್ತಿದ್ದಾರೆ.
ದಾವಣಗೆರೆ ಉತ್ತರ ಸಂಚಾರ ಪೊಲೀಸ್ ಠಾಣೆ, ದಕ್ಷಿಣ ಸಂಚಾರ ಠಾಣೆ, ಆರ್.ಟಿ.ಒ ಕಚೇರಿ ವೃತ್ತ, ಉಪವಿಭಾಗಾಧಿಕಾರಿ ಕಚೇರಿ ವೃತ್ತ, ಅರುಣ ಟಾಕೀಸ್ ವೃತ್ತ (ಸಂಚಾರ ವೃತ್ತ ಕಚೇರಿ), ಸಂಗೊಳ್ಳಿ ರಾಯಣ್ಣ ವೃತ್ತ, ನಿಜಲಿಂಗಪ್ಪ ಬಡಾವಣೆ ಬಳಿಯ ಕರ್ನಲ್ ರವೀಂದ್ರನಾಥ ವೃತ್ತ (ಟವರ್ ಕ್ಲಾಕ್ ವೃತ್ತ), ಡೆಂಟಲ್ ಕಾಲೇಜ್ ರಸ್ತೆ, ಬಾಡಾ ಕ್ರಾಸ್, ರಾಮ ಆ್ಯಂಡ್ ಕೋ ವೃತ್ತ, ಹೈಸ್ಕೂಲ್ ಮೈದಾನದ ಬಳಿ ಸಂಚಾರ ಪೊಲೀಸರ ಬಳಿ ತೆರಳಿ ಪ್ರಕರಣಗಳನ್ನು ಪರಿಶೀಲಿಸಿ ಇ-ಚಲನ್ ದಂಡ ಪಾವತಿಸಬಹುದಾಗಿದೆ.
ಅಲ್ಲದೇ ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್‌ಪಿ) ಆ್ಯಪ್, ಆನ್‌ಲೈನ್ ಸೇವಾ ಕೇಂದ್ರಗಳಾದ ದಾವಣಗೆರೆ ಒನ್, ಕರ್ನಾಟಕ ಒನ್, ಪೋಸ್ಟ್ ಆಫೀಸ್ ಹಾಗೂ ಜಿಲ್ಲೆಯ ಯಾವುದೇ ಪೊಲೀಸ್ ಠಾಣೆಗೆ ತೆರಳಿ ವಾಹನಗಳ ಮೇಲಿರುವ ಇ-ಚಲನ್ ಬಾಕಿ ದಂಡವನ್ನು ಪರಿಶೀಲಿಸಿ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ತಪ್ಪಾಗಿ ದಂಡ ವಿಧಿಸಲಾಗಿದ್ದರೆ, ಮರುಪರಿಶೀಲನೆಯ ದೂರನ್ನು ಆನ್‌ಲೈನ್ ಮೂಲಕ ಸಲ್ಲಿಸಬಹುದು. ಅಥವಾ ಸಂಚಾರ ನಿರ್ವಹಣಾ ಕೇಂದ್ರಕ್ಕೆ ತೆರಳಿ ದೂರು ಸಲ್ಲಿಸಲೂ ಅವಕಾಶ ನೀಡಲಾಗಿದೆ.
ಇನ್ನೂ ಸಾಕಷ್ಟು ಪ್ರಕರಣಗಳು ಇತ್ಯರ್ಥಗೊಳ್ಳಬೇಕಿದೆ. ವಾಹನ ಸವಾರರು ನಿರ್ಲಕ್ಷ್ಯ ವಹಿಸದೇ ರಿಯಾಯಿತಿ ಸೌಲಭ್ಯದ ಮೂಲಕ ದಂಡ ಪಾವತಿಸಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳಬೇಕು. ಇಲ್ಲವಾದರೆ ನೋಟಿಸ್ ನೋಡಿ ವಾಹನ ಜಪ್ತಿ ಮಾಡಿಕೊಳ್ಳಲಾಗುವುದು ನೆಲವಾಗಲುಮಂಜುನಾಥ್ ಸಿಪಿಐ ದಾವಣಗೆರೆ ಸಂಚಾರ ವಿಭಾಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.