ADVERTISEMENT

ದಾವಣಗೆರೆ: ಶುಲ್ಕ ಏರಿಕೆ ವಿರುದ್ಧ ಆಕ್ರೋಶ

ಜಿಲ್ಲಾ ಸ್ಥಳೀಯ ಮತ್ತು ಗೂಡ್ಸ್‌ಶೆಡ್‌ ಲಾರಿ ಮಾಲೀಕರ ಸಂಘದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2025, 7:01 IST
Last Updated 5 ಡಿಸೆಂಬರ್ 2025, 7:01 IST
ದಾವಣಗೆರೆಯ ಆರ್‌ಟಿಒ ಕಚೇರಿ ಎದುರು ಜಿಲ್ಲಾ ಸ್ಥಳೀಯ ಮತ್ತು ಗೂಡ್ಸ್‌ಶೆಡ್‌ ಲಾರಿ ಮಾಲೀಕರ ಸಂಘದ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು
ದಾವಣಗೆರೆಯ ಆರ್‌ಟಿಒ ಕಚೇರಿ ಎದುರು ಜಿಲ್ಲಾ ಸ್ಥಳೀಯ ಮತ್ತು ಗೂಡ್ಸ್‌ಶೆಡ್‌ ಲಾರಿ ಮಾಲೀಕರ ಸಂಘದ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು   

ದಾವಣಗೆರೆ: ಸರಕು ಸಾಗಣೆ ವಾಹನಗಳ ಸುಸ್ಥಿತಿ ಪ್ರಮಾಣ ಪತ್ರ (ಎಫ್‌ಸಿ) ಹಾಗೂ ನೋಂದಣಿ ನವೀಕರಣ ಶುಲ್ಕವನ್ನು ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಜಿಲ್ಲಾ ಸ್ಥಳೀಯ ಮತ್ತು ಗೂಡ್ಸ್‌ಶೆಡ್‌ ಲಾರಿ ಮಾಲೀಕರ ಸಂಘದ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು.

ನಗರದ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಎದುರು ಜಮಾಯಿಸಿದ ಪ್ರತಿಭಟನಕಾರರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲಿಂದ ಮೆರವಣಿಗೆ ಹೊರಟು ಜಿಲ್ಲಾಡಳಿತ ಭವನ ತಲುಪಿದರು. ಜಿಲ್ಲಾಧಿಕಾರಿ ಕಚೇರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ರವಾನಿಸಿದರು.

‘ಸರಕು ಸಾಗಣೆ ವಾಹನಗಳ ಸುಸ್ಥಿತಿ ಪ್ರಮಾಣ ಪತ್ರಕ್ಕೆ ಈವರೆಗೆ ₹ 1,200 ಇತ್ತು. ಈ ಶುಲ್ಕವನ್ನು ಸರ್ಕಾರ ಏಕಾಏಕಿ ₹ 28,000ಕ್ಕೆ ಹೆಚ್ಚಿಸಿದೆ. ಇದರಿಂದ ಲಾರಿ ಮಾಲೀಕರಿಗೆ ತೊಂದರೆ ಉಂಟಾಗಿದೆ. ಸರಕುಗಳನ್ನು ದೇಶದ ಎಲ್ಲೆಡೆ ಸಾಗಣೆ ಮಾಡುವ ಹೊಣೆಗಾರಿಕೆ ನಿಭಾಯಿಸುವ ಲಾರಿ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಜಿಲ್ಲಾ ಸ್ಥಳೀಯ ಮತ್ತು ಗೂಡ್ಸ್‌ಶೆಡ್‌ ಲಾರಿ ಮಾಲೀಕರ ಸಂಘದ ಅಧ್ಯಕ್ಷ ದಾದಾಪೀರ್‌ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ದುಬಾರಿ ಶುಲ್ಕ ಭರಿಸುವ ಶಕ್ತಿ ಲಾರಿ ಮಾಲೀಕರಿಗೆ ಇಲ್ಲ. ಕೇಂದ್ರ ಸರ್ಕಾರ ವಾಹನಗಳ ಮಾಲೀಕರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಈ ಹಿಂದೆ ಇದ್ದ ಶುಲ್ಕವನ್ನೇ ಮುಂದುವರಿಸಬೇಕು’ ಎಂದು ಮನವಿ ಮಾಡಿದರು.

ಸಂಘದ ಗೌರವಾಧ್ಯಕ್ಷ ಅನ್ವರ್ ಸಾಬ್, ಉಪಾಧ್ಯಕ್ಷ ಹನುಮಂತಪ್ಪ, ಕಾರ್ಯದರ್ಶಿ ಮೊಹಮದ್ ಅಲಿ, ಇಮಾಮ್ ಹುಸೇನ್, ಮನ್ಸೂರ್, ಎಚ್.ಕೆ. ಸುಭಾನ್, ಮಾಜಿ ಉಪ ಮೇಯರ್ ಗೋಪಿನಾಯ್ಕ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.