
ಆಗರಬನ್ನಿಹಟ್ಟಿ (ಚನ್ನಗಿರಿ): ‘ಈ ಗ್ರಾಮದಲ್ಲಿರುವ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಜಿಲ್ಲೆಯಲ್ಲಿಯೇ ಅತ್ಯುತ್ತಮ ಶಾಲೆ ಎಂಬ ಹೆಗ್ಗಳಿಕೆ ಪಡೆದಿದೆ. ಇತರೆ ಸರ್ಕಾರಿ ಶಾಲೆಗಳಿಗೆ ಮಾದರಿಯಾಗಿದ್ದು, ಈ ಶಾಲೆಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲು ಬದ್ಧ’ ಎಂದು ಶಾಸಕ ಬಡವರಾಜು ವಿ. ಶಿವಗಂಗಾ ತಿಳಿಸಿದರು.
ತಾಲ್ಲೂಕಿನ ಆಗರಬನ್ನಿಹಟ್ಟಿ ಗ್ರಾಮದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
‘ಈ ಶಾಲೆಗೆ ಇನ್ನು 15 ದಿನದೊಳಗೆ ಎರಡು ಹೊಸ ಕೊಠಡಿಗಳ ನಿರ್ಮಾಣಕ್ಕೆ ಅಗತ್ಯ ಅನುದಾನವನ್ನು ಬಿಡುಗಡೆ ಮಾಡಿಸುತ್ತೇನೆ. ಉರ್ದು ಶಾಲೆಗೆ ಚನ್ನಗಿರಿ ಪಟ್ಟಣದ 80 ಮಕ್ಕಳು ದಾಖಲಾಗಿರುವುದು ವಿಶೇಷವಾಗಿದೆ. ಶಾಲೆಯ ಮುಖ್ಯಶಿಕ್ಷಕ ಹಾಗೂ ಶಿಕ್ಷಕರ ಪರಿಶ್ರಮದಿಂದಾಗಿ ಈ ಶಾಲೆ ಮಾದರಿ ಶಾಲೆಯಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಶಿಸ್ತು, ಸ್ವಚ್ಛತೆ ಹಾಗೂ ಪರಿಸರ ಕಾಳಜಿಯಿಂದಾಗಿ ಉತ್ತಮ ಪರಿಸರದಲ್ಲಿ ಮಕ್ಕಳು ಶಿಕ್ಷಣವನ್ನು ಪಡೆಯುವಂತಹ ವಾತಾವರಣ ಇದೆ. ಹಾಗಾಗಿ ಈ ಶಾಲೆಗೆ ಅಗತ್ಯವಿರುವ ಸೌಲಭ್ಯಗಳನ್ನು ಶಾಸಕರ ಅನುದಾನದಲ್ಲಿ ನೀಡಲಾಗುವುದು’ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಕೆ. ರಾಜಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಎಸ್. ಗಣೇಶ್, ಬಿಆರ್‌ಪಿ ಜಮೀಲ್ ಅಹಮದ್, ಸಿಆರ್‌ಪಿ ಸಿಬ್ಗತ್ ಉಲ್ಲಾ, ಮುಖ್ಯಶಿಕ್ಷಕ ಸೈಯದ್ ಇಲ್ಯಾಸ್ ಅಹಮದ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಚಿತ್ರಸ್ವಾಮಿ, ಶಂಶೀರ್ ಖಾನ್, ಶಾಕೀರ್ ಉಲ್ಲಾ ಶರೀಫ್, ನವೀದ್ ರೆಹಮಾನ್ ಉಪಸ್ಥಿತರಿದ್ದರು.
ಕ್ಲಸ್ಟರ್ ಮಟ್ಟದ 13 ಶಾಲೆಗಳ ಮಕ್ಕಳು ಪ್ರತಿಭಾ ಕಾರಂಜಿಯ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೆಹಬೂಬ್ ಖಾನ್ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.