ADVERTISEMENT

ಯೂರಿಯಾ ಕೊರತೆ: ರೊಚ್ಚಿಗೆದ್ದ ರೈತ ಸಮೂಹ

ಬಾಗಿಲು ಮುಚ್ಚಿದ ವರ್ತಕರು; ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 5:07 IST
Last Updated 22 ಜುಲೈ 2025, 5:07 IST
ಜಗಳೂರಿನಲ್ಲಿ ಯೂರಿಯಾ ಸಿಗದೆ ಪರದಾಡಿದ ರೈತರು ಫರ್ಟಿಲೈಸರ್ಸ್ ಅಂಗಡಿಗಳ ಸೋಮವಾರಎದುರು ಕಿಕ್ಕಿರಿದು ಸೇರಿದ್ದರಿಂದ ವರ್ತಕರು ಆತಂಕದಿಂದ ಬಾಗಿಲು ಮುಚ್ಚಿಕೊಂಡು ತೆರಳಿದರು.
ಜಗಳೂರಿನಲ್ಲಿ ಯೂರಿಯಾ ಸಿಗದೆ ಪರದಾಡಿದ ರೈತರು ಫರ್ಟಿಲೈಸರ್ಸ್ ಅಂಗಡಿಗಳ ಸೋಮವಾರಎದುರು ಕಿಕ್ಕಿರಿದು ಸೇರಿದ್ದರಿಂದ ವರ್ತಕರು ಆತಂಕದಿಂದ ಬಾಗಿಲು ಮುಚ್ಚಿಕೊಂಡು ತೆರಳಿದರು.   

ಜಗಳೂರು: ತಾಲ್ಲೂಕಿನಾದ್ಯಂತ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಮೆಕ್ಕೆಜೋಳ ಬೆಳೆಗೆ ಯೂರಿಯಾ ಕೊರತೆ ಎದುರಾಗಿದ್ದು ರೈತರು ಪಟ್ಟಣದ ಖಾಸಗಿ ಅಂಗಡಿಗಳ ಮುಂದೆ ಸೋಮವಾರ ಸೇರಿ ಆಕ್ರೋಶ ವ್ಯಕ್ತಪಡಿಸಿದರು.

ಎರಡು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಭಾನುವಾರ ದೊಡ್ಡ ಪ್ರಮಾಣದ ಮಳೆ ಸುರಿದಿದ್ದರಿಂದ ತಾಲ್ಲೂಕಿನ ಹಳ್ಳಿಗಳಿಂದ ನೂರಾರು ರೈತರು ಯೂರಿಯಾ ಗೊಬ್ಬರಕ್ಕಾಗಿ ದಿನವಿಡೀ ಪಟ್ಟಣದ ಖಾಸಗಿ ರಸಗೊಬ್ಬರ ಅಂಗಡಿಗಳ ಮುಂದೆ ಕಾದು ನಿಂತಿದ್ದರು.

ಎಲ್ಲಾ ಅಂಗಡಿಗಳಲ್ಲೂ ಅಗತ್ಯ ಯೂರಿಯಾ ಸಿಗದೆ ಪರದಾಡಿದ ರೈತರು ಸಂಜೆ ವೇಳೆಗೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಂತೆ ಕೆಲ ವ್ಯಾಪಾರಿಗಳು ಬಾಗಿಲು ಮುಚ್ಚಿಕೊಂಡು ತೆರಳಿದರು. ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗುತ್ತಿದ್ದಂತೆ ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ಹಾಗೂ ಎಸ್.ಐ ಗಾದಿಲಿಂಗಪ್ಪ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಬಂದರು.

ADVERTISEMENT

‘ತಾಲ್ಲೂಕಿಗೆ ಸಾಕಷ್ಟು ಯೂರಿಯಾ ಪೂರೈಕೆ ಮಾಡಲಾಗಿದೆ. ಆದರೆ, ಎರಡೆರೆಡು ಬಾರಿ ರೈತರು ಯೂರಿಯಾ ಬಳಕೆ ಮಾಡುತ್ತಿದ್ದು, ಬೇಡಿಕೆ ಹೆಚ್ಚಾಗಿದೆ. ಈ ಬಗ್ಗೆ ರೈತರಿಗೆ ಮನವರಿಕೆ ಮಾಡಬೇಕಿದೆ. ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಶ್ವೇತಾ ಅವರು ಪ್ರತಿಕ್ರಿಯೆಗೆ ಸಿಗುತ್ತಿಲ್ಲ. ಬೆಳಿಗ್ಗೆಯಿಂದ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಮಂಗಳವಾರ ರೈತರ ಸಮ್ಮುಖದಲ್ಲಿ ಸಮಸ್ಯೆ ಪರಿಹರಿಸಲಾಗುವುದು’ ಎಂದು ತಹಶೀಲ್ದಾರ್ ಕಲೀಂ ಉಲ್ಲಾ ತಿಳಿಸಿದರು.

‘ದಾವಣಗೆರೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದರಿಂದ ಫೋನ್ ಸ್ವಿಚ್ ಆಫ್ ಆಗಿತ್ತು. ತಾಲ್ಲೂಕಿಗೆ ಈಗಾಗಲೇ ಸುಮಾರು 10 ಸಾವಿರ ಟನ್  ಯೂರಿಯಾ ಪೂರೈಕೆಯಾಗಿದೆ. ರೈತರೂ ಖರೀದಿಸಿದ್ದಾರೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಶ್ವೇತಾ ‘ಪ್ರಜಾವಾಣಿ‘ಗೆ ಮಾಹಿತಿ ನೀಡಿದರು.

ಗೊಬ್ಬರ ವಿತರಿಸಲು ಒತ್ತಾಯ:

‘ಕೆಲವು ವರ್ತಕರು ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಯೂರಿಯಾ ಮಾರಾಟ ಮಾಡುತ್ತಾ ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ. ಇದುವರೆಗೆ ಸಮೃದ್ಧ ಮಳೆಯಾಗಿಲ್ಲ. ಹೀಗಾಗಿ ಬಹುತೇಕ ರೈತರು ಯೂರಿಯಾ ಖರೀದಿಸಿಲ್ಲ. ಆದಾಗ್ಯೂ ಅಧಿಕಾರಿಗಳು ಅಗತ್ಯಕ್ಕಿಂತ ಹೆಚ್ಚಿನ ಯೂರಿಯಾ ಪೂರೈಕೆ ಮಾಡಲಾಗಿದೆ ಎಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಯೂರಿಯಾ ಮೇಲುಗೊಬ್ಬರ ಹಾಕಿದರೆ ಮುಂದೆ ಒಳ್ಳೆಯ ಫಸಲು ಬರುತ್ತದೆ. ಇಲ್ಲದಿದ್ದರೆ ಬೆಳವಣಿಗೆ ಕುಂಠಿತವಾಗುತ್ತದೆ. ರೈತರಿಗೆ ಕೂಡಲೇ ಯೂರಿಯಾ ವಿತರಿಸಬೇಕು’ ಎಂದು ರೈತ ದೊಡ್ಡ ಬೋರಯ್ಯ ಗೊಲ್ಲರಹಟ್ಟಿ ವೆಂಕಟೇಶ್ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.