ADVERTISEMENT

ವಿದ್ಯಾರ್ಥಿನಿಯರಿಗೂ ಮುಟ್ಟಿನ ರಜೆಗಾಗಿ ಶೀಘ್ರ ಶಿಫಾರಸು: ಅಪರ್ಣಾ ಎಂ.ಕೊಳ್ಳ

ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯೆ ಅಪರ್ಣಾ ಎಂ. ಕೊಳ್ಳ ಭರವಸೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 7:57 IST
Last Updated 2 ಜನವರಿ 2026, 7:57 IST
<div class="paragraphs"><p>ಮುಟ್ಟಿನ ಕಪ್‌ಗಳು</p></div>

ಮುಟ್ಟಿನ ಕಪ್‌ಗಳು

   

ದಾವಣಗೆರೆ: ಮಹಿಳಾ ನೌಕರರಿಗೆ ತಿಂಗಳಲ್ಲಿ ಒಂದು ದಿನ ಮುಟ್ಟಿನ ರಜೆಯ ಸೌಲಭ್ಯ ಕಲ್ಪಿಸಿದ ನೀತಿಯನ್ನು ಶಾಲಾ–ಕಾಲೇಜು ವಿದ್ಯಾರ್ಥಿನಿಯರಿಗೂ ವಿಸ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಶೀಘ್ರ ಶೀಫಾರಸು ಮಾಡಲಾಗುವುದು ಎಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯೆ ಅಪರ್ಣಾ ಎಂ.ಕೊಳ್ಳ ಭರವಸೆ ನೀಡಿದರು.

ಇಲ್ಲಿನ ಎವಿಕೆ ಕಾಲೇಜು ರಸ್ತೆಯ ಗುರುಭವನದಲ್ಲಿ ಮಕ್ಕಳ ರಕ್ಷಣಾ ನಿರ್ದೇಶನಾಲಯದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ‘ನಿಮ್ಮ ಹಕ್ಕು ನಮ್ಮ ಧ್ವನಿ’ ಸಂವಾದದಲ್ಲಿ ‘ಮುಟ್ಟಿನ ರಜೆ ವಿದ್ಯಾರ್ಥಿನಿಯರಿಗೂ ಸಿಗಬೇಕಲ್ಲವೇ’ ಎಂಬ ಬಾಲಕಿಯೊಬ್ಬರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ADVERTISEMENT

‘ಮುಟ್ಟಿನ ರಜೆಯ ಸೌಲಭ್ಯ ಕೇಳಿದ್ದು ಸ್ವಾಗತಾರ್ಹ. ಉತ್ತಮ ವಿಚಾರವನ್ನು ಬಾಲಕಿ ಮುಂದಿಟ್ಟಿದ್ದಾಳೆ. ಇದು ಸರ್ಕಾರದ ಹಂತದಲ್ಲಿ ತೀರ್ಮಾನ ಆಗಬೇಕಿದೆ. ಈ ಕುರಿತು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ರಾಜ್ಯ ಸರ್ಕಾರಕ್ಕೆ ಕೂಡಲೇ ಶಿಫಾರಸು ಮಾಡಲಿದೆ’ ಎಂದರು.

‘ಜಿಲ್ಲೆಯಲ್ಲಿ ಬಾಲ್ಯವಿವಾಹ ಹೆಚ್ಚಾಗಿರುವುದನ್ನು ಅಂಕಿ–ಅಂಶಗಳು ಖಚಿತಪಡಿಸಿವೆ. ಫೆಬ್ರುವರಿ, ಮಾರ್ಚ್, ಏಪ್ರಿಲ್‌ ತಿಂಗಳಲ್ಲಿ ಬಾಲ್ಯವಿವಾಹಗಳು ಹೆಚ್ಚಾಗಿ ನಡೆಯುವ ಸಾಧ್ಯತೆ ಇದೆ. ಈ ಬಗ್ಗೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ. ಇಂತಹ ವಿಚಾರಗಳು ಗಮನಕ್ಕೆ ಬಂದ ಕೂಡಲೇ ಮಕ್ಕಳ ಸಹಾಯವಾಣಿಗೆ ದೂರು ನೀಡಿ’ ಎಂದು ಸಲಹೆ ನೀಡಿದರು.

‘ಪ್ರೀತಿ, ಪ್ರೇಮದ ನೆಪದಲ್ಲಿ ಲೈಂಗಿಕ ದೌರ್ಜನ್ಯ ಹೆಚ್ಚಾಗಿದೆ. ಪೋಕ್ಸೊ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಪ್ರೀತಿ–ಪ್ರೇಮಕ್ಕೆ ಸಂಬಂಧಿಸಿದವು ಹೆಚ್ಚಾಗಿವೆ. ಈ ಬಗ್ಗೆ ಬಾಲಕ–ಬಾಲಕಿಯರು ಎಚ್ಚರಿಕೆಯಿಂದ ಇರುವ ಅಗತ್ಯವಿದೆ’ ಎಂದು ಕಿವಿಮಾತು ಹೇಳಿದರು.

ಸ್ಕ್ರೀನ್‌ಟೈಮ್‌ ಕಡಿಮೆಯಾಗಲಿ:

‘ವಿದ್ಯಾರ್ಥಿಗಳು ಟಿವಿ ಹಾಗೂ ಮೊಬೈಲ್‌ ಫೋನ್‌ ಹೆಚ್ಚು ವೀಕ್ಷಿಸುತ್ತಿದ್ದಾರೆ. ಫೋನ್‌ ರೇಡಿಯೇಶನ್‌ ಕಣ್ಣು, ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿದೆ. ಇದರಿಂದ ವಿದ್ಯಾರ್ಥಿಗಳು ಏಕಾಗ್ರತೆ ಕಳೆದುಕೊಳ್ಳುತ್ತಿದ್ದಾರೆ. ಆನ್‌ಲೈನ್‌ ಗೇಮ್‌ಗಳಿಗೆ ನಿರ್ಬಂಧವಿದ್ದು, ಇವುಗಳಿಂದ ದೂರ ಇರಬೇಕು. ಸ್ಕ್ರೀನ್‌ಟೈಮ್‌ ಕಡಿಮೆಯಾದರೆ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಸಾಧ್ಯ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅಭಿಪ್ರಾಯಪಟ್ಟರು.

‘ಪ್ರೌಢಶಾಲೆಯ ವಿದ್ಯಾರ್ಥಿಗಳು ಕೂಡ ಮದ್ಯ ಸೇವನೆ ಮಾಡಿ ಸಿಕ್ಕಿಬಿದ್ದಿದ್ದಾರೆ. ದುಶ್ಚಟಗಳಿಂದ ವಿದ್ಯಾರ್ಥಿಗಳನ್ನು ದೂರವಿಡಲು ಕ್ರೀಡೆ, ಸಾಂಸ್ಕೃತಿಕ ಚುಟವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಸಬೇಕು. ಪಾಲಕರು, ಶಾಲಾ–ಕಾಲೇಜುಗಳು ಇತ್ತ ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು.

‘ಜಿಲ್ಲೆಯಲ್ಲಿ 820 ವಿದ್ಯಾರ್ಥಿಗಳು ಶಾಲೆಗಳಿಂದ ಹೊರ ಉಳಿದಿದ್ದಾರೆ. ಇದಕ್ಕೆ ಬಡತನವೂ ಕಾರಣವಿರಬಹುದು. ಆದರೆ, ವಿದ್ಯಾರ್ಥಿಗಳು ಶಿಕ್ಷಣದ ಬಗ್ಗೆ ಆಸಕ್ತಿ ಮೂಡಿಸಿಕೊಳ್ಳಬೇಕು. ಕಷ್ಟಪಟ್ಟು ಓದುವ ಬದಲು ಇಷ್ಟಪಟ್ಟು ಓದಬೇಕು. ಮನೆ–ಮನೆಗೆ ಭೇಟಿ ನೀಡುವ ಪೊಲೀಸರು ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿಗಳ ಬಗ್ಗೆಯೂ ಮಾಹಿತಿ ಕಲೆಹಾಕಲಿದ್ದಾರೆ’ ಎಂದು ಹೇಳಿದರು.

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಮಂಜುಳಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜ ನಾಯ್ಕ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಟಿ.ಎನ್. ಕವಿತಾ, ವೈದ್ಯ ಡಾ. ಸಿದ್ದೇಶ್, ಬಿಇಒಗಳಾದ ಪುಷ್ಪಲತಾ, ‌ವಿಶಾಲಾಕ್ಷಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.