ದಾವಣಗೆರೆ: ‘ವಿದೇಶಿಗರು ನಮ್ಮ ದೇಶದ ಯೋಗ, ಸಂಸ್ಕೃತಿ, ಕಲೆಯತ್ತ ಆಕರ್ಷಿತರಾಗುತ್ತಿದ್ದು, ನಾವು ಅದರಿಂದ ವಿಮುಖರಾಗುತ್ತಿರುವುದು ದುರಂತ. ಈ ಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಹರಿಹರದ ವೀರಶೈವ–ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಸಲಹೆ ನೀಡಿದರು.
ನಗರದ ಹೈಸ್ಕೂಲ್ ಮೈದಾನದಲ್ಲಿ ಸ್ವದೇಶಿ ಜಾಗರಣ ಮಂಚ್- ಕರ್ನಾಟಕ ವತಿಯಿಂದ ಡಿ.15ರವರೆಗೆ ಆಯೋಜಿಸಿರುವ ಸ್ವದೇಶಿ ಮೇಳಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ನಾವು ನಮ್ಮ ಸಂಸ್ಕೃತಿ, ಪರಂಪರೆಯನ್ನು ಬಿಟ್ಟು ವಿದೇಶಿಯರನ್ನು ಅನುಕರಣೆ ಮಾಡುತ್ತಿದ್ದರೆ, ಅವರು ನಮ್ಮ ಆಚರಣೆಯತ್ತ ಬರುತ್ತಿದ್ದಾರೆ. ಹಿಂದೆ ನಮ್ಮ ದೇಶದ ಪ್ರತಿಭೆಗಳ ಪಲಾಯನ ಆಗುತ್ತಿತ್ತು, ಹತ್ತು ವರ್ಷಗಳಿಂದೀಚೆಗೆ ಪ್ರತಿಭೆಗಳ ‘ಘರ್ ವಾಪಸಿ’ ಆಗುತ್ತಿರುವುದು ಆಶಾದಾಯಕ ಬೆಳವಣಿಗೆ’ ಎಂದರು.
‘ಒಬ್ಬ ವ್ಯಕ್ತಿ ಆರೋಗ್ಯವಾಗಿದ್ದಾನೆ ಎಂದರೆ ಆತನ ಕನಿಷ್ಠ ಮೌಲ್ಯ ₹ 8 ಕೋಟಿ. ಆರೋಗ್ಯ ವ್ಯಕ್ತಿ ದೇಶದ ಬಹುದೊಡ್ಡ ಸಂಪತ್ತು. ನಿಮ್ಮ ಆರೋಗ್ಯ ದೇಶದ ಆರೋಗ್ಯದ ಮೇಲೆ ನಿಂತಿದೆ. ನೀವು ಆರೋಗ್ಯವಾಗಿರಲು ದೇಶಿಯ ಉತ್ಪನ್ನಗಳನ್ನು ಬಳಸಬೇಕು. ಅದನ್ನು ಬಿಟ್ಟು ವಿದೇಶಿ ಉತ್ಪನ್ನಗಳು ಬಳಸಿದರೆ ಅನಾರೋಗ್ಯ ಬರುತ್ತದೆ. ಅನಾರೋಗ್ಯವಾದಾಗ ನಾವು ಬಳಸುವ ನೋವು ನಿರಾರಕಗಳು, ಮಾತ್ರೆಗಳೂ ವಿದೇಶಿ ಉತ್ಪಾದಕಗಳು. ಅವುಗಳ ಬಳಕೆಯಿಂದ ವಿದೇಶದ ಆರ್ಥಿಕತೆ ಹೆಚ್ಚುತ್ತದೆ ಹೊರತು ದೇಶದ ಆರ್ಥಿಕತೆಗೆ ನಷ‌್ಟ’ ಎಂದು ವಿವರಿಸಿದರು.
‘ಈಗ ಮಹಾನಗರಗಳಲ್ಲಿ ದಕ್ಷಿಣ ಅಮೆರಿಕದ ‘ಕಿಣ್ವ’ ಎನ್ನುವ ಆಹಾರ ಪ್ರಸಿದ್ಧಿಗೆ ಬಂದಿದೆ. ಅದು ನವಣೆಯಿಂದ ಮಾಡಿದ್ನು, ಅದರ ಬದಲು ನಾವು ಸಿರಿಧಾನ್ಯ ಬಳಸಿದರೆ ನಮ್ಮ ಆರೋಗ್ಯದ ಜತೆಗೆ ದೇಶದ ಆರ್ಥಿಕತೆ ವೃದ್ಧಿಸುತ್ತದೆ. ಸ್ವದೇಶಿ ಸ್ವಾವಲಂಬನೆ ಗಾಂಧೀಜಿಯ ಕನಸಾಗಿತ್ತು. ಆತ್ಮನಿರ್ಭರದ ಮೂಲಕ ಹೆಚ್ಚು ಸ್ವಾವಲಂಬಿಯಾಗಿ ದೇಶಕ್ಕೆ ಕೊಡುಗೆ ನೀಡಬೇಕು’ ಎಂದು ಕಿವಿಮಾತು ಹೇಳಿದರು.
‘ಇಂತಹ ಮೇಳಗಳು ಹೆಚ್ಚು ಹೆಚ್ಚು ನಡೆಯಬೇಕು. ಯುವಕರು ಸ್ವಾವಲಂಬಿಗಳಾಗಿ ಉದ್ಯಮಿಗಳಾಗಲು ಪ್ರಯತ್ನಿಸಬೇಕು. ದೇಶದಲ್ಲಿ ಭ್ರಷ್ಟಾಚಾರ, ಜಾತೀಯತೆ ತೊಲಗಿದರೆ ದೇಶ ಪ್ರಪಂಚಕ್ಕೇ ಮಾದರಿಯಾಗಲಿದೆ. ಈ ನಿಟ್ಟಿನಲ್ಲಿ ಯುವ ಜನಾಂಗ ಗಮನಹರಿಸಬೇಕು’ ಎಂದು ಉದ್ಯಮಿ ಬಿ.ಸಿ. ಉಮಾಪತಿ ಕಿವಿಮಾತು ಹೇಳಿದರು.
‘ನಾವು ಚಿಕ್ಕವಾರಿದ್ದಾಗ ಇದ್ದ ವಸ್ತುಗಳ ಬೆಲೆಗೂ ಈಗಿನ ಬೆಲೆಗೂ ಅಜಗಂತಾರವಿದೆ. ಇಂತಹ ವ್ಯತ್ಯಾಸ ಯಾಕೆ ಆಯಿತು ಎಂಬ ಬಗ್ಗೆ ಚಿಂತನೆ ಅಗತ್ಯ. ಈ ನಿಟ್ಟಿನಲ್ಲಿ ಎಲ್ಲರೂ ಗಮನಹರಿಸಿ, ಜನರಿಗೆ ಅನುಕೂಲ ಕಲ್ಪಿಸಬೇಕು’ ಎಂದು ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಸಲಹೆ ನೀಡಿದರು.
ಬಳಿಕ ಚಿಂತಕರ ಚಾವಡಿ ಹರಟೆ ಕಾರ್ಯಕ್ರಮ ನಡೆಯಿತು.
ಸ್ವದೇಶಿ ಜಾಗರಣ ಮಂಚ್‌ನ ಎಸ್.ಟಿ. ವೀರೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಚ್‌ನ ಮಂಜುಳಾ, ಚೇತನ್ ಇದ್ದರು.
‘ಪ್ರಪಂಚದಲ್ಲಿಯೇ ಭಾರತದ್ದು ವಿಶಿಷ್ಟ ಆರ್ಥಿಕತೆ’
‘ಪ್ರಪಂಚದಲ್ಲಿ ವಿಶಿಷ್ಟ ಆರ್ಥಿಕತೆ ಎಂದರೆ ಅದು ಭಾರತದ್ದು. ಏಕೆಂದರೆ ಇಲ್ಲಿ ಕುಟುಂಬ ಆರ್ಥಿಕತೆ ಇದೆ. ಪಶ್ಚಿಮಾತ್ಯ ದೇಶಗಳಲ್ಲಿ ಕುಟುಂಬ ವ್ಯವಸ್ಥೆ ಗಟ್ಟಿಯಾಗಿಲ್ಲ. ವಿದೇಶಗಳಲ್ಲಿ ವ್ಯಕ್ತಿ ಸ್ವಾತಂತ್ರ್ಯ ಮುಖ್ಯ. ನಮ್ಮ ದೇಶದ ಹೂಡಿಕೆಗೆ ಭಾರತೀಯರ ಉಳಿಯಾದ ಹಣದಿಂದ ಬರುವ ಕೊಡುಗೆ ಶೇ 98ರಷ್ಟು’ ಎಂದು ಸ್ವದೇಶಿ ಆರ್ಥಿಕ ತಜ್ಞ ಬಿ.ಎಂ.ಕುಮಾರಸ್ವಾಮಿ ಹೇಳಿದರು. ‘ವಿದೇಶದಲ್ಲಿರುವ ಅನಿವಾಸಿ ಭಾರತೀಯರು ನೀಡುವ ಬಂಡವಾಳ (ಎಫ್‌ಡಿಐ)ಕ್ಕಿಂತ ವಿದೇಶದಲ್ಲಿನ ಭಾರತೀಯ ಕಾರ್ಮಿಕರು ನಮ್ಮ ದೇಶಕ್ಕೆ ನೀಡುವ ಕೊಡುಗೆ ಹೆಚ್ಚು. ಜಿಡಿಪಿಯಲ್ಲಿ ಇದರ ಪಾಲು ಶೇ 75ರಷ್ಟು. ಅನಿವಾಸಿ ಕಾರ್ಮಿಕರು ದೇಶದಲ್ಲಿರುವ ತಮ್ಮ ಕುಟುಂಬಗಳಿಗೆ ಹಣ ಕಳಿಸುವ ಮೂಲಕ ಭಾರತದ ಆರ್ಥಿಕತೆಗೆ ಶಕ್ತಿ ತುಂಬುತ್ತಿದ್ದಾರೆ’ ಎಂದು ಅವರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.