ADVERTISEMENT

‘ವೀರಶೈವ ಲಿಂಗಾಯತ’ದಲ್ಲಿ ಅದರ ಎಲ್ಲ ಒಳಪಂಗಡಗಳು ಒಗ್ಗೂಡಲು ಪೀಠಾಚಾರ್ಯ ಸಭೆ ನಿರ್ಣಯ

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 14:04 IST
Last Updated 22 ಜುಲೈ 2025, 14:04 IST
<div class="paragraphs"><p>ದಾವಣಗೆರೆಯಲ್ಲಿ ಆಯೋಜಿಸಿದ್ದ ವೀರಶೈವ ಪೀಠಾಚಾರ್ಯ, ಶಿವಾಚಾರ್ಯರ ಶೃಂಗದಲ್ಲಿ ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ, ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶ್ರೀಶೈಲ ಮಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ, ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಉಜ್ಜಿನಿ ಸಿದ್ಧಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು </p></div>

ದಾವಣಗೆರೆಯಲ್ಲಿ ಆಯೋಜಿಸಿದ್ದ ವೀರಶೈವ ಪೀಠಾಚಾರ್ಯ, ಶಿವಾಚಾರ್ಯರ ಶೃಂಗದಲ್ಲಿ ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ, ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶ್ರೀಶೈಲ ಮಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ, ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಉಜ್ಜಿನಿ ಸಿದ್ಧಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು

   

–ಪ್ರಜಾವಾಣಿ ಚಿತ್ರ: ಸತೀಶ್ ಬಡಿಗೇರ

ದಾವಣಗೆರೆ: ವೀರಶೈವ ಲಿಂಗಾಯತ ಸಮಗ್ರತೆ ಮತ್ತು ಒಗ್ಗಟ್ಟನ್ನು ಪ್ರತಿಪಾದಿಸಲು ಮುಂಬರುವ ಜಾತಿ ಗಣತಿಯಲ್ಲಿ ಎಲ್ಲ ಒಳಪಂಗಡಗಳು ‘ವೀರಶೈವ ಲಿಂಗಾಯತ’ ಎಂದೇ ಬರೆಸಬೇಕು ಎಂಬುದು ಸೇರಿದಂತೆ 12 ನಿರ್ಣಯಗಳನ್ನು ಇಲ್ಲಿ ನಡೆದ ವೀರಶೈವ ಪೀಠಾಚಾರ್ಯ, ಶಿವಾಚಾರ್ಯರ ಶೃಂಗ ಒಮ್ಮತದಿಂದ ಕೈಗೊಂಡಿತು.

ADVERTISEMENT

‘ಸನಾತನ ಹಿಂದೂ ವೀರಶೈವ ಲಿಂಗಾಯತ ಧರ್ಮದಲ್ಲಿ ಉದ್ಯೋಗಗಳಿಂದಲೇ ಉಪಜಾತಿಗಳು ನಿರ್ಮಾಣವಾಗಿವೆ. ಉಪಜಾತಿಗಳಿಂದ ಧರ್ಮವು ಹರಿದು ಹಂಚಿ ಹೋಗಬಾರದು. ಉಪಜಾತಿ ಯಾವುದೇ ಇದ್ದರೂ ವೀರಶೈವ ಲಿಂಗಾಯತರು ಎಂಬ ಒಗ್ಗಟ್ಟನ್ನು ಕಾಪಾಡಿಕೊಳ್ಳಬೇಕು’ ಎಂದು ಶೃಂಗದ ನಿರ್ಣಯಗಳನ್ನು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಪ್ರಕಟಿಸಿದರು.

‘ಜನಗಣತಿಯ ನಮೂನೆಯಲ್ಲಿ ‘ಮತ’ದ ಕಾಲಂ ಇರಬೇಕೆಂಬ ಕೋರಿಕೆಯನ್ನು ಕೇಂದ್ರ ಸರ್ಕಾರಕ್ಕೆ ಅಖಿಲ ಭಾರತ ವೀರಶೈವ ಮಹಾಸಭೆ ಸಲ್ಲಿಸಬೇಕು. ಪ್ರಧಾನಿ ನರೇಂದ್ರ ಮೋದಿ ಗಮನ ಸೆಳೆಯಲು ವೀರಶೈವ ಮಠಾಧೀಶರ, ಎಲ್ಲ ಪಕ್ಷಗಳ ಸಮುದಾಯದ ಸಂಸದರ ನಿಯೋಗವನ್ನು ದೆಹಲಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು’ ಎಂದು ಶೃಂಗವು ಮಹಾಸಭಾಗೆ ಸೂಚಿಸಿತು.

ಬೆಂಗಳೂರಿನಲ್ಲಿ ಗುರು–ವಿರಕ್ತರ ಸಭೆ:

‘ಪಂಚಪೀಠಗಳೊಂದಿಗೆ ವಿರಕ್ತ ಮತ್ತು ಶರಣ ಪರಂಪರೆಯ ಮಠ ಜೊತೆಗೂಡಿದರೆ ಸಮುದಾಯದ ಶಕ್ತಿ ಹೆಚ್ಚಾಗುತ್ತದೆ. ಇಡೀ ಸಮುದಾಯವನ್ನು ಒಗ್ಗೂಡಿಸುವ ಕಾರ್ಯ ಪಂಚಪೀಠಗಳಿಂದ ಮಾತ್ರ ಸಾಧ್ಯವಿದೆ. ಅನುಮತಿ ಸಿಕ್ಕರೆ ದೃಢವಾದ ಹೆಜ್ಜೆಗಳನ್ನು ಇಡುತ್ತೇವೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಸಭೆ ಕರೆಯುತ್ತೇವೆ’ ಎಂದು ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.

‘ಪಂಚಪೀಠ, ವಿರಕ್ತ ಪರಂಪರೆಯ ಮಠಗಳನ್ನು ಸಮಾನ ವೇದಿಕೆಗೆ ತಂದು ಭಾವೈಕ್ಯದ ಸಂದೇಶ ನೀಡಲು ರಂಭಾಪುರಿ ಪೀಠ ಹಲವು ದಶಕಗಳ ಹಿಂದೆಯೇ ಪ್ರಯತ್ನಿಸಿತ್ತು. ಬಾಳೆಹೊನ್ನೂರು ಹಾಗೂ ಕೂಡಲಸಂಗಮದಲ್ಲಿ ಗುರು–ವಿರಕ್ತರ ಸಮ್ಮಿಲನ ನಡೆದಿತ್ತು. ಕೆಲ ಮಠಾಧೀಶರು ವೀರಶೈವ ಸಂವಿಧಾನವನ್ನು ಉಲ್ಲಂಘಿಸಿದ್ದರಿಂದ ಈ ಕಾರ್ಯ ಕೈಗೂಡಲಿಲ್ಲ. ಪಂಚಪೀಠಾಧೀಶರಲ್ಲಿ ಮೂಡಿದಂತಹ ಒಗ್ಗೂಡುವ ಭಾವನೆ ವಿರಕ್ತ ಮಠಾಧೀಶರಲ್ಲಿ ಬೆಳೆದರೆ ಅವರ ಬಾಯಿಗೆ ಹಾಲು–ತಪ್ಪ ಹಾಕುತ್ತೇವೆ’ ಎಂದರು.

ಉಜ್ಜಿನಿ ಸಿದ್ಧಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ, ಶ್ರೀಶೈಲ ಮಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ, ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಹಾಜರಿದ್ದರು.

ವೀರಶೈವ ಲಿಂಗಾಯತ ಸಮುದಾಯಕ್ಕೆ ದೊಡ್ಡ ಇತಿಹಾಸವಿದೆ. ಅಷ್ಟೇ ಗಟ್ಟಿಯದ ಭವಿಷ್ಯವಿದೆ ಎಂಬುದನ್ನು ಹೇಳಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದೇವೆ. ಸಮುದಾಯ ಸಂಕಷ್ಟದ ಕಾಲದಲ್ಲಿದೆ
ಬಸವರಾಜ ಬೊಮ್ಮಾಯಿ, ಸಂಸದ
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ರಾಜ್ಯ ಸರ್ಕಾರ ಎಡವಟ್ಟು ಮಾಡದಿದ್ದರೆ ಪಂಚಪೀಠಾಧೀಶ್ವರರು ಒಂದೆಡೆ ಸೇರುತ್ತಿರಲಿಲ್ಲ. ಗುರು–ವಿರಕ್ತರನ್ನು ಒಗ್ಗೂಡಿಸುವ ಪ್ರಯತ್ನ ಶುರುವಾಗುತ್ತಿರಲಿಲ್ಲ
ವಿ.ಸೋಮಣ್ಣ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ

ಶೃಂಗದ ಪ್ರಮುಖ ನಿರ್ಣಯಗಳು

  • ವೀರಶೈವ ಲಿಂಗಾಯತ ಧರ್ಮದ ಎಲ್ಲ ಒಳಪಂಗಡಗಳಿಗೆ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿ ಸೌಲಭ್ಯಕ್ಕೆ ಕೇಂದ್ರ ಸರ್ಕಾರದ ಗಮನ ಸೆಳೆಯಬೇಕು.

  • ಕೆಲ ಒಳ ಪಂಗಡಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಲ್ಪಿಸಿರುವ ಮೀಸಲಾತಿ ಸೌಲಭ್ಯ ಮುಂದುವರಿಸಬೇಕು.

  • ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದಲ್ಲಿ ಗುರು ರೇಣುಕಾಚಾರ್ಯರ ಭಾವಚಿತ್ರ ಹಾಕುವುದನ್ನು ಮರೆಯಬಾರದು.

  • ವರ್ಷದಲ್ಲಿ ಒಮ್ಮೆ ಪೀಠಾಚಾರ್ಯರು, ಶಿವಾಚಾರ್ಯರ ಸಮಾವೇಶ ನಡೆಸಿ ಪರಂಪರೆ, ಆದರ್ಶ, ಮೌಲ್ಯಗಳನ್ನು ಸಂರಕ್ಷಿಸಬೇಕು.

  • ಉತ್ತರ ಭಾರತದಲ್ಲಿರುವ ವೀರಶೈವರಿಗೆ ಧರ್ಮ ಸಂಸ್ಕಾರ, ಸರ್ಕಾರಿ ಸೌಲಭ್ಯಕ್ಕೆ ಯೋಜನೆ ರೂಪಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.