ADVERTISEMENT

ವೀರಶೈವ ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಮಾನ್ಯತೆ ಸಿಗುವುದು ಅನುಮಾನ: ಅಥಣಿ ವೀರಣ್ಣ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಉಪಾಧ್ಯಕ್ಷ ಅಭಿಮತ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 6:52 IST
Last Updated 25 ಅಕ್ಟೋಬರ್ 2025, 6:52 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ದಾವಣಗೆರೆ: ವೀರಶೈವ ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಮಾನ್ಯತೆ ಸಿಗುವುದು ಅನುಮಾನ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮೂರು ಬಾರಿ ನಡೆಸಿದ ಪ್ರಯತ್ನಗಳು ಕೈಗೂಡಿಲ್ಲ ಎಂದು ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಅಥಣಿ ವೀರಣ್ಣ ಹೇಳಿದರು.

ಇಲ್ಲಿನ ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ 39ನೇ ಸ್ಮರಣೋತ್ಸವ ಹಾಗೂ ಉಮಾಪತಿ ಪಂಡಿತಾರಾಧ್ಯ ಸ್ವಾಮೀಜಿ ಅವರ 14ನೇ ಪುಣ್ಯಾರಾಧನೆ ಅಂಗವಾಗಿ ಶ್ರೀಶೈಲ ಮಠದ ವತಿಯಿಂದ ಏರ್ಪಡಿಸಿರುವ ಜನಜಾಗೃತಿ ಧರ್ಮ ಸಮ್ಮೇಳನವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

‘ಪ್ರತ್ಯೇಕ ಧರ್ಮದ ಮಾನ್ಯತೆಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾವು ಎಲ್.ಕೆ. ಅಡ್ವಾಣಿ ಗೃಹ ಸಚಿವರಾಗಿದ್ದ ಕಾಲದಿಂದಲೂ ಪ್ರಯತ್ನಿಸಿದೆ. ಹಿಂದೂ ಧರ್ಮದಿಂದ ವೀರಶೈವ ಲಿಂಗಾಯತರನ್ನು ಪ್ರತ್ಯೇಕಿಸಲು ಅವಕಾಶ ಸಿಗುವುದಿಲ್ಲ. ಪ್ರತ್ಯೇಕ ಧರ್ಮದ ಮಾನ್ಯತೆ ಪಡೆಯುವುದು ಸುಲಭವಲ್ಲ’ ಎಂದು ಅಭಿಪ್ರಾಯಪಟ್ಟರು.

‘ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಸೇರಿದಂತೆ ದೇಶದಲ್ಲಿ ಅಧಿಕೃತವಾಗಿ 6 ಧರ್ಮಗಳಿವೆ. ಜೈನರು ಮತ್ತು ಬೌದ್ಧರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿ ಪ್ರತ್ಯೇಕ ಧರ್ಮದ ಮಾನ್ಯತೆ ಧಕ್ಕಿಸಿಕೊಂಡಿದ್ದಾರೆ. ಲಿಂಗಾಯತ ಮಹಾಸಭಾ ಜನ್ಮತಾಳಿದ ಬಳಿಕ ವೀರಶೈವ ಮತ್ತು ಲಿಂಗಾಯತರ ನಡುವೆ ಭೇದ ಸೃಷ್ಟಿಯಾಗಿದೆ. ಇದರಿಂದ ಸಮಾಜ ಕವಲು ದಾರಿಯಲ್ಲಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲದಿದ್ದರೂ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಹೆಸರಿನಲ್ಲಿ ಜಾತಿ ಗಣತಿ ನಡೆಸಿದೆ. ಜಾತಿ ಮತ್ತು ಧರ್ಮದ ಕಾಲಂ ವಿಚಾರದಲ್ಲಿ ಸಮುದಾಯದಲ್ಲಿ ಮೂಡಿದ ಒಡಕು ಬೇಸರ ತಂದಿದೆ. ಹಿಂದೂ ಧರ್ಮದ ಭಾಗವಾಗಿರುವ ವೀರಶೈವ ಲಿಂಗಾಯತರು ಧರ್ಮದ ಕಾಲಂನ ಇತರೆ ವಿಭಾಗದಲ್ಲಿ ಗುರುತಿಸಿಕೊಂಡರೆ ಲೆಕ್ಕಕ್ಕೆ ಸಿಗದಷ್ಟು ಕಳೆದುಹೋಗುವ ಅಪಾಯವಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ವೀರಶೈವ ಲಿಂಗಾಯತ ಸಮುದಾಯ ಕರ್ನಾಟಕದ ಜನಸಂಖ್ಯೆಯಲ್ಲಿ ಶೇ 21ರಷ್ಟಿದೆ. ಆದರೆ, ಇದಕ್ಕೆ ಪೂರಕವಾದ ಅಂಕಿ–ಅಂಶ ಪಡೆದುಕೊಳ್ಳುವಲ್ಲಿ ಸಮುದಾಯವೇ ಎಡವುತ್ತಿದೆ. ದಶಕದ ಹಿಂದೆ ಕಾಂತರಾಜ್‌ ಆಯೋಗ ನಡೆಸಿದ ಸಮೀಕ್ಷೆಯಲ್ಲಿ ಸಮುದಾಯದ ಜನಸಂಖ್ಯೆಯನ್ನು 80 ಲಕ್ಷ ಎಂಬುದಾಗಿ ತೋರಿಸಲಾಗಿತ್ತು. ಈ ಬಾರಿ ನಡೆದ ಸಮೀಕ್ಷೆಯಲ್ಲಿ ಜನಸಂಖ್ಯೆ ಇನ್ನೂ ಕಡಿಮೆ ಆಗುವ ಸಾಧ್ಯತೆ ಇದೆ’ ಎಂದರು.

‘ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾಗೆ ಬೆಂಗಳೂರಿನ ಮಧ್ಯಭಾಗದಲ್ಲಿ ನೆಲೆ ಇಲ್ಲ. ಸಮುದಾಯದ 9 ಮುಖ್ಯಮಂತ್ರಿಗಳು ರಾಜ್ಯದಲ್ಲಿ ಆಡಳಿತ ನಡೆಸಿದರೂ ಮಹಾಸಭಾಗೆ ನೆಲೆ ಕಲ್ಪಿಸಲು ಸಾಧ್ಯವಾಗಿಲ್ಲ. ಇದರಿಂದ ಸಮುದಾಯದ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಸೌಲಭ್ಯ ಕಲ್ಪಿಸಲು ಹಾಗೂ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಆಗುತ್ತಿಲ್ಲ’ ಎಂದು ಹೇಳಿದರು.

ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ, ಶ್ರೀಶೈಲ ಪೀಠದ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಹಿರೇಕಲ್ಮಠದ ಒಡೆಯರ್‌ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಮುಷ್ಟೂರಿನ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಸುರಗೀಶ್ವರ ಮಠದ ಗುರುಸಿದ್ಧ ಶಿವಾಚಾರ್ಯ ಸ್ವಾಮೀಜಿ, ಓಂಕಾರ ಶಿವಾಚಾರ್ಯ ಸ್ವಾಮೀಜಿ, ವರ್ತಕ ಎನ್.ಜಿ. ಉಳುವಯ್ಯ, ಪ್ರೊ.ಎಸ್.ಜಿ. ಮಠಪತಿ, ಡಿ.ಎಂ.ಹಾಲಸ್ವಾಮಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.