ADVERTISEMENT

ಉಪ್ಪಿನಕಾಯಿಯಂತೆ ವಿಶ್ವಕರ್ಮ ಸಮಾಜ ಬಳಕೆ: ಶಂಕರಾತ್ಮಾನಂದ ಸರಸ್ವತಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2021, 13:32 IST
Last Updated 29 ಸೆಪ್ಟೆಂಬರ್ 2021, 13:32 IST
ದಾವಣಗೆರೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಖಿಲ ಭಾರತ ವಿಶ್ವಕರ್ಮ ಪರಿಷತ್‌ ಉದ್ಘಾಟನಾ ಸಮಾರಂಭದಲ್ಲಿ ಹಾಸನ ಜಿಲ್ಲೆಯ  ಅಲೆಮಾದೇನಹಳ್ಳಿಯ ವಿಶ್ವಕರ್ಮ ಮಹಾಸಂಸ್ಥಾನದ ಶಿವ ಸುಜ್ಞಾನತೀರ್ಥ ಸ್ವಾಮೀಜಿ ಮಾತನಾಡಿದರು. ಪರಿಷತ್‌ನ ರಾಷ್ಟ್ರೀಯ ಅಧ್ಯಕ್ಷ ಎಚ್‌.ವಿ. ಸತೀಶ್‌ಕುಮಾರ್‌, ಶಂಕರಾತ್ಮಾನಂದ ಸರಸ್ವತಿ ಸ್ವಾಮೀಜಿ, ಗೌರವಾಧ್ಯಕ್ಷ ನಾಗೇಂದ್ರಾಚಾರ್‌ ಬಸಾಪುರ, ಕೆಪಿಸಿಸಿಯ ಇತರೆ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ್‌ ಇದ್ದಾರೆ.
ದಾವಣಗೆರೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಅಖಿಲ ಭಾರತ ವಿಶ್ವಕರ್ಮ ಪರಿಷತ್‌ ಉದ್ಘಾಟನಾ ಸಮಾರಂಭದಲ್ಲಿ ಹಾಸನ ಜಿಲ್ಲೆಯ  ಅಲೆಮಾದೇನಹಳ್ಳಿಯ ವಿಶ್ವಕರ್ಮ ಮಹಾಸಂಸ್ಥಾನದ ಶಿವ ಸುಜ್ಞಾನತೀರ್ಥ ಸ್ವಾಮೀಜಿ ಮಾತನಾಡಿದರು. ಪರಿಷತ್‌ನ ರಾಷ್ಟ್ರೀಯ ಅಧ್ಯಕ್ಷ ಎಚ್‌.ವಿ. ಸತೀಶ್‌ಕುಮಾರ್‌, ಶಂಕರಾತ್ಮಾನಂದ ಸರಸ್ವತಿ ಸ್ವಾಮೀಜಿ, ಗೌರವಾಧ್ಯಕ್ಷ ನಾಗೇಂದ್ರಾಚಾರ್‌ ಬಸಾಪುರ, ಕೆಪಿಸಿಸಿಯ ಇತರೆ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ್‌ ಇದ್ದಾರೆ.   

ದಾವಣಗೆರೆ: ‘ಕೋವಿಡ್‌ ಸಂಕಷ್ಟ ಕಾಲದಲ್ಲಿ ವಿಶ್ವಕರ್ಮ ಸಮಾಜಕ್ಕೆ ನೆರವು ನೀಡಲು ಸರ್ಕಾರ ಮತ್ತು ಯಾವುದೇ ರಾಜಕೀಯ ಪಕ್ಷವೂ ಮುಂದೆ ಬರಲಿಲ್ಲ. ನಮ್ಮ ಸಮಾಜವನ್ನು ಊಟಕ್ಕೆ ಬೇಕಾದ ಉಪ್ಪಿನಕಾಯಿಯಂತೆ ಬಳಸಿಕೊಳ್ಳಲಾಗುತ್ತಿದೆ’ ಎಂದು ಚನ್ನಗಿರಿ ತಾಲ್ಲೂಕಿನ ಬೆಲಗೂರು ವಿಶ್ವಕರ್ಮ ಮಹಾಸಂಸ್ಥಾನ ಕಾಶಿಮಠದ ಶಂಕರಾತ್ಮಾನಂದ ಸರಸ್ವತಿ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ನಡೆದ ವಿಶ್ವಕರ್ಮ ಮಹೋತ್ಸವ ಹಾಗೂ ಅಖಿಲ ಭಾರತ ವಿಶ್ವಕರ್ಮ ಪರಿಷತ್‌ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಅವರು, ‘ಕೋವಿಡ್‌ ಸಂದರ್ಭದಲ್ಲೂ ದೊಡ್ಡ ಸಮುದಾಯಗಳ ನಿಗಮಗಳಿಗೆ ಕೋಟ್ಯಂತರ ರೂಪಾಯಿ ನೀಡಲಾಗಿದೆ. ಆದರೆ, ನಮ್ಮದು ಸಣ್ಣ ಸಮುದಾಯ ಎಂಬ ಕಾರಣಕ್ಕೆ ವಿಶ್ವಕರ್ಮ ಅಭಿವೃದ್ಧಿ ನಿಗಮದ ₹ 25 ಕೋಟಿ ಅನುದಾನದಲ್ಲಿ ₹ 15 ಕೋಟಿಯನ್ನು ವಾಪಸ್‌ ಪಡೆಯಲಾಗಿದೆ’ ಎಂದು ಕಿಡಿಕಾರಿದರು.

‘ಸರ್ಕಾರ ವಿಶ್ವಕರ್ಮ ಜಯಂತಿಯನ್ನು ಆಚರಿಸುತ್ತಿದೆ. ವಿಶ್ವಕರ್ಮ ಅಭಿವೃದ್ಧಿ ನಿಗಮವನ್ನೂ ರಚಿಸಿದೆ. ಆದರೆ, ಇವೆಲ್ಲ ಹೆಸರಿಗೆ ಮಾತ್ರವಾಗಿದೆ. ವಿಶ್ವಕರ್ಮ ಸಮಾಜದ ಕೊಡುಗೆಗಳು ಹೊಗಳುವುದಕ್ಕಷ್ಟೇ ಸೀಮಿತವಾಗುತ್ತಿದೆ. ನಮ್ಮ ಸಮಾಜಕ್ಕೆ ಆರ್ಥಿಕ, ಶೈಕ್ಷಣಿಕ, ರಾಜಕೀಯ ಪ್ರಾತಿನಿಧ್ಯ ಸಿಗುತ್ತಿಲ್ಲ. ಸರ್ಕಾರ ಹಾಗೂ ರಾಜಕೀಯ ಪಕ್ಷಗಳು ನಮ್ಮ ಸಮಾಜವನ್ನು ಕಡೆಗಣಿಸುತ್ತಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಶಿಲ್ಪಕಲಾ ವಿಶ್ವವಿದ್ಯಾಲಯ ನಿರ್ಮಿಸುವಂತೆ ಐದಾರು ವರ್ಷಗಳಿಂದ ಮಾಡುತ್ತಿರುವ ಮನವಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಇದೇ ರೀತಿ ಮುಂದುವರಿದರೆ ಇತರ ಸಮುದಾಯಗಳಂತೆ ನಮ್ಮ ಸಮಾಜವೂ ಹಕ್ಕಿಗಾಗಿ ಹೋರಾಟದ ಹಾದಿಯನ್ನು ಹಿಡಿಯಬೇಕಾಗುತ್ತದೆ’ ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದರು.

ಹಾಸನ ಜಿಲ್ಲೆಯ ಅರಕಲಗೂಡಿನ ಅರೆಮಾದೇನಹಳ್ಳಿಯ ವಿಶ್ವಕರ್ಮ ಮಹಾಸಂಸ್ಥಾನದ ಶಿವ ಸುಜ್ಞಾನತೀರ್ಥ ಸ್ವಾಮೀಜಿ, ‘ಎಲ್ಲಾ ಧರ್ಮ–ಪಂಥದವರಿಗೂ ಸಮಾನವಾಗಿ ಸೇವೆ ಸಲ್ಲಿಸುತ್ತಿದ್ದರೂ ನಮ್ಮ ಸಮಾಜದವರಿಗೆ ಇನ್ನೂ ತಮ್ಮ ಕಾಲ ಮೇಲೆ ನಿಲ್ಲಲು ಸಾಧ್ಯವಾಗದೇ ಇರುವುದು ವಿಪರ್ಯಾಸ. ಹೀಗಾಗಿ ಸಮಾಜದ ಮಠಾಧೀಶರ ನೇತೃತ್ವದಲ್ಲಿ 2022ರಲ್ಲಿ ಬೆಂಗಳೂರಿನಲ್ಲಿ ಬೃಹತ್‌ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.