ADVERTISEMENT

ಜಗಳೂರು: ರಸ್ತೆಗೆ ಗೇಟ್ ಅಳವಡಿಸಿದ ವಿಂಡ್ ಮಿಲ್ ಕಂಪನಿ

ಹೊಲಗಳಿಗೆ ತೆರಳಲು ರಸ್ತೆ ಇಲ್ಲದೇ ರೈತರ ಪರದಾಟ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2025, 7:55 IST
Last Updated 30 ಆಗಸ್ಟ್ 2025, 7:55 IST
ಜಗಳೂರು ತಾಲ್ಲೂಕಿನ ಭರಮಸಮುದ್ರ ಗ್ರಾಮದ ಸಮೀಪ ರೈತರ ಹೊಗಳಿಗೆ ತೆರಳುವ ರಸ್ತೆಗೆ ಕಬ್ಬಿಣದ ಗೇಟ್ ಅಳವಡಿಸಿರುವುದು
ಜಗಳೂರು ತಾಲ್ಲೂಕಿನ ಭರಮಸಮುದ್ರ ಗ್ರಾಮದ ಸಮೀಪ ರೈತರ ಹೊಗಳಿಗೆ ತೆರಳುವ ರಸ್ತೆಗೆ ಕಬ್ಬಿಣದ ಗೇಟ್ ಅಳವಡಿಸಿರುವುದು   

ಜಗಳೂರು: ತಾಲ್ಲೂಕಿನ ಭರಮಸಮುದ್ರ ಗ್ರಾಮದ ಸಮೀಪದಲ್ಲಿರುವ ಹೊಲಗಳಿಗೆ ತೆರಳುವ ರಸ್ತೆಗೆ ಅಡ್ಡಲಾಗಿ ಖಾಸಗಿ ವಿಂಡ್ ಮಿಲ್ ಕಂಪನಿಯು ಗೇಟ್ ಅಳವಡಿಸಿದ್ದು, ಈ ಭಾಗದ ಜಮೀನುಗಳಿಗೆ ಓಡಾಡಲು ಅಡ್ಡಿಯಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಗಳೂರು–ದೊಣೆಹಳ್ಳಿ ಮಾರ್ಗದ ಭರಮಸಮುದ್ರ ಗ್ರಾಮದ ಸಮೀಪ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಹಲವು ಹೊಲಗಳಿಗೆ ತೆರಳುವ ರಸ್ತೆಗೆ ಕಳೆದ ಕೆಲವು ದಿನಗಳ ಹಿಂದೆ ಕಬ್ಬಿಣದ ಗೇಟ್ ಅಳವಡಿಸಲಾಗಿದ್ದು, ರೈತರನ್ನು ಈ ಮಾರ್ಗದಲ್ಲಿ ಓಡಾಡದಂತೆ ನಿರ್ಬಂಧಿಸಲಾಗಿದೆ. 

ಹಲವು ವರ್ಷಗಳಿಂದ ಈ ರಸ್ತೆಯು ಸಂಪರ್ಕ ಸೇತುವಾಗಿದ್ದು, ಟ್ರ್ಯಾಕ್ಟರ್, ಎತ್ತಿನಗಾಡಿಗಳ ಸಂಚಾರಕ್ಕೆ ಈವರೆಗೆ ಯಾವುದೇ ಅಡೆತಡೆ ಇರಲಿಲ್ಲ. ಮಲ್ಪೆ–ಮೊಳಕಾಲ್ಮುರು ರಾಜ್ಯ ಹೆದ್ದಾರಿ ನಿರ್ಮಾಣದ ಸಂದರ್ಭದಲ್ಲಿ ಈ ರಸ್ತೆಗೆ ಸೇತುವೆಯನ್ನೂ ನಿರ್ಮಿಸಲಾಗಿದೆ ಎಂದು ಈ ಭಾಗದ ರೈತರು ಹೇಳಿದ್ದಾರೆ. 

ADVERTISEMENT

ಇದೇ ರಸ್ತೆಯಲ್ಲಿರುವ ಎರಡು ಸ್ಥಳಗಳಲ್ಲಿ ಕ್ಲೀನ್ ಮ್ಯಾಕ್ಸ್ ಕಂಪನಿಯ ವಿಂಡ್ ಫ್ಯಾನ್‌ಗಳನ್ನು ಅಳವಡಿಸಲಾಗಿದೆ. ಕಂಪನಿಯು ಈ ರಸ್ತೆ ಅಕ್ಕಪಕ್ಕದ ಇಬ್ಬರು ಜಮೀನು ಮಾಲೀಕರೊಂದಿಗೆ ರಸ್ತೆ ಬಳಕೆ ಕುರಿತು ಒಪ್ಪಂದ ಮಾಡಿಕೊಂಡಿತ್ತು. ರಾತ್ರೋರಾತ್ರಿ ರಸ್ತೆಗೆ ಗೇಟ್ ಅಳವಡಿಸಿರುವುದರಿಂದ ಉಳಿದ ಜಮೀನುಗಳು ರೈತರು ತಮ್ಮ ಹೊಲಗಳಿಗೆ ಹೋಗಿಬರಲು ಸಾಧ್ಯವಾಗುತ್ತಿಲ್ಲ. 

‘ಅಜ್ಜನ ಕಾಲದಿಂದಲೂ ನಾವು ಈ ರಸ್ತೆಯಲ್ಲೇ ನಮ್ಮ ಹೊಲಗಳಿಗೆ ತೆರಳುತ್ತಿದ್ದೆವು. ಮೂರು ವರ್ಷಗಳ ಹಿಂದೆ ಈ ರಸ್ತೆಗೆ ಹೊಂದಿಕೊಂಡಂತೆ ಕ್ಲೀನ್ ಮ್ಯಾಕ್ಸ್ ಕಂಪನಿಯ ಎರಡು ವಿಂಡ್ ಫ್ಯಾನ್‌ಗಳನ್ನು ಅಳವಡಿಸಿ, ಹಳೆಯ ಕಾಲುದಾರಿಯನ್ನು ಸ್ವಲ್ಪ ವಿಸ್ತರಿಸಲಾಗಿತ್ತು. ಆದರೆ ನೂರಾರು ರೈತರು ಓಡಾಡುವ ರಸ್ತೆಗೆ ತಿಂಗಳ ಹಿಂದೆ ಗೇಟ್ ಹಾಕಲಾಗಿದೆ’ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.  

‘ನಿಮಗೆ ಇಲ್ಲಿ ರಸ್ತೆ ಇಲ್ಲ. ಬೇರೆ ಕಡೆಯಿಂದ ಓಡಾಡಿ. ಇಲ್ಲಿ ಓಡಾಡಲು ಅವಕಾಶವಿಲ್ಲ ಎಂದು ಕಂಪನಿ ಅಧಿಕಾರಿಗಳು ಹಾಗೂ ಈ ಮಾರ್ಗದ ಜಮೀನಿನ ಮಾಲೀಕರು ಅಕ್ಕಪಕ್ಕದ ರೈತರನ್ನು ದಬಾಯಿಸುತ್ತಿದ್ದಾರೆ’ ಎಂದು ರೈತರಾದ ವೆಂಕಟೇಶ್, ಚನ್ನಬಸಪ್ಪ, ತಿಪ್ಪೇಸ್ವಾಮಿ, ತಿಮ್ಮೇಶ್ ಆರೋಪಿಸಿದ್ದಾರೆ.

ಏಕಾಏಕಿ ರಸ್ತೆಯನ್ನು ಮುಚ್ಚಿರುವ ಬಗ್ಗೆ ತಹಶೀಲ್ದಾರ್‌ಗೆ ಮೌಖಿಕವಾಗಿ ದೂರು ಸಲ್ಲಿಸಿದ್ದೇವೆ. ಈ ರಸ್ತೆಯ ಮೂಲಕ ಅತಿಸಣ್ಣ ರೈತರು ಹಾಗೂ ಪರಿಶಿಷ್ಟ ಸಮುದಾಯದವರೇ ಹೆಚ್ಚಾಗಿ ಓಡಾಡುತ್ತಿದ್ದು, ಅವರಿಗೆ ಬಹಳ ತೊಂದರೆಯಾಗಿದೆ. ಮೆಕ್ಕೆಜೋಳ ದಟ್ಟವಾಗಿ ಬೆಳೆದಿದ್ದು, ರಸ್ತೆ ಇಲ್ಲದ ಕಾರಣ ನಮ್ಮ ಹೊಲಗಳಿಗೆ ಹೋಗಲು ಸಾಧ್ಯವಾಗಿಲ್ಲ. ತಾಲ್ಲೂಕು ಆಡಳಿತ ಸೂಕ್ತ ಕ್ರಮ ಕೈಗೊಂಡು ಗೇಟ್ ತೆರವುಗೊಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಲ್ಲೂಕಿನ ಹುಚ್ಚವ್ವನಹಳ್ಳಿಯಿಂದ ಮಾದಮುತ್ತೇನಹಳ್ಳಿಗೆ ಹೋಗುವ ಮಾರ್ಗದಲ್ಲೂ ಇದೇ ಕಂಪನಿಯು ತಡೆಗೋಡೆ ನಿರ್ಮಿಸಿದೆ ಎಂಬುದಾಗಿ ಗ್ರಾಮಸ್ಥರು ಈ ಹಿಂದೆ ದೂರು ನೀಡಿದ್ದರು.

ಹೊಲಗಳಿಗೆ ತೆರಳುವ ರಸ್ತೆಗೆ ಗೇಟ್ ಹಾಕಿರುವ ವಿಚಾರ ಗಮನಕ್ಕೆ ಬಂದಿದೆ. ಕ್ಲೀನ್ ಮ್ಯಾಕ್ಸ್ ಕಂಪನಿ ಪ್ರತಿನಿಧಿಗಳ ಜತೆ ಮಾತನಾಡಿದ್ದೇವೆ. ರೈತರಿಗೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಹೇಳಿದ್ದೇವೆ. ಸಮಸ್ಯೆ ಪರಿಹರಿಸಲಾಗುವುದು.
– ಕಲೀಂ ಉಲ್ಲಾ ತಹಶೀಲ್ದಾರ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.