ದಾವಣಗೆರೆ: ಮುಖ್ಯಮಂತ್ರಿ ಗಾದಿಗೆ ಸಂಬಂಧಿಸಿದಂತೆ ಆಡಿದ ಮಾತಿಗೆ ನನಗೆ ನೋಟಿಸ್ ನೀಡಲಾಗಿದೆ. ಮುಖ್ಯಮಂತ್ರಿ ಮಗನೂ ಆಗಿರುವ ವಿಧಾನಪರಿಷತ್ ಸದಸ್ಯ ಯತೀಂದ್ರ ನೀಡಿದ ಹೇಳಿಕೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಬೇಕು. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಶಾಸಕ ಬಸವರಾಜು ವಿ.ಶಿವಗಂಗಾ ಒತ್ತಾಯಿಸಿದರು.
‘ಹಿರಿಯ ನಾಯಕರಾಗಿರುವ ಯತೀಂದ್ರ ಸಿದ್ದರಾಮಯ್ಯ ಬಾಲಿಷ ಹೇಳಿಕೆ ನೀಡಬಾರದು. ಈ ಮೂಲಕ ಗೊಂದಲ ಸೃಷ್ಟಿಸುವ ಪ್ರಯತ್ನ ಸರಿಯಲ್ಲ. ಇದಕ್ಕೆ ಪ್ರತಿಕ್ರಿಯೆ ನೀಡಿದರೆ ಪಕ್ಷಕ್ಕೆ ಮುಜುಗರ ಉಂಟಾಗುತ್ತದೆ. ಪಕ್ಷದ ಹೈಕಮಾಂಡ್ ಗಮನ ಹರಿಸಬೇಕು’ ಎಂದು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
‘ವಂಶಪಾರಂಪರ್ಯ ವ್ಯವಸ್ಥೆ ರಾಜ ಮನೆತನದಲ್ಲಿ ಇದೆಯೇ ಹೊರತು ಪ್ರಜಾಪ್ರಭುತ್ವದಲ್ಲಿ ಅಲ್ಲ. ಕಾಂಗ್ರೆಸ್ ಪ್ರಬಲ ಹೈಕಮಾಂಡ್ ಹೊಂದಿರುವ ಪಕ್ಷ. ಸಿದ್ದರಾಮಯ್ಯ ಅವರ ಉತ್ತರಾಧಿಕಾರಿಯನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ಇದಕ್ಕೆ ಪಕ್ಷದ ನಾಯಕರು ಬದ್ಧವಾಗಿರಬೇಕು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆಸಿದರು.
‘ರಾಜ್ಯ ರಾಜಕಾರಣದಲ್ಲಿ ನವೆಂಬರ್ ಕ್ರಾಂತಿ ನಡೆಯುವುದಿಲ್ಲ. ಡಿಸೆಂಬರ್ ನಂತರ ಬದಲಾವಣೆ ಆಗಲಿದೆ. ಜನವರಿಯಿಂದ ಹೊಸ ಅಧ್ಯಾಯ ಆರಂಭವಾಗಲಿದೆ. ಜಾರಕಿಹೊಳಿ ಅವರಿಗೆ ಮುಖ್ಯಮಂತ್ರಿಯಾಗುವ ಅರ್ಹತೆ ಇದೆ. ಆದರೆ, ಅವರು 2033ರ ಚುನಾವಣೆಯ ಮೇಲೆ ಕಣ್ಣಿಟ್ಟಿದ್ದಾರೆ. ಅವರು ಮುಖ್ಯಮಂತ್ರಿ ಆಕಾಂಕ್ಷಿಯೇ ಅಲ್ಲ ಎಂದಾದ ಮೇಲೆ ಬಾಲಿಷ ಹೇಳಿಕೆ ನೀಡುವುದು ತಪ್ಪು’ ಎಂದು ಕಿರಿಕಾರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.