ಧಾರವಾಡ: ಇಲ್ಲಿನ ಕರ್ನಾಟಕ ವಿಶ್ವವಿದ್ಯಾಲಯದ ಡಾ.ಆರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿರುವ ಸುಮಾರು ಏಳು ಲಕ್ಷ ಹಸ್ತಪ್ರತಿಗಳ ಡಿಜಿಟಲೀಕರಣ ಕೈಗೆತ್ತಿಕೊಳ್ಳಲಾಗಿದೆ. ಬೆಂಗಳೂರಿನ ಇ–ಸಾಹಿತ್ಯ ದಾಖಲೀಕರಣ, ಸಂಶೋಧನಾ ಕೇಂದ್ರವು ಉಚಿತವಾಗಿ ಈ ಕಾರ್ಯನಿರ್ವಹಿಸುತ್ತಿದೆ.
ಹಸ್ತಪ್ರತಿ ಭಂಡಾರದಲ್ಲಿ ತಾಳೆ ಗರಿಗಳು, ಕೋರಿ ಕಾಗದ ಪ್ರತಿಗಳ ಕಟ್ಟುಗಳಿವೆ. ಕನ್ನಡ, ಸಂಸ್ಕೃತ, ತಮಿಳು ಲಿಪಿಯ ಪ್ರತಿಗಳು ಇಲ್ಲಿವೆ. ಪ್ರಾಚೀನ ಸಾಹಿತ್ಯ, ವಚನ ಸಾಹಿತ್ಯ, ಪಾಕ ಶಾಸ್ತ್ರ, ಗಜ ಶಾಸ್ತ್ರ, ಜ್ಯೋತಿಶಾಸ್ತ್ರ, ಚಂಪೂಕಾವ್ಯ, ವಿದೇಶಿ ಓಲೆಗಳು ಮೊದಲಾದವು ಭಂಡಾರದಲ್ಲಿವೆ.
ತಾಳೆ ಗರಿಗಳನ್ನು ‘ಲೆಮನ್ ಗ್ರಾಸ್’ ದ್ರವ ಬಳಸಿ ಶುದ್ಧಗೊಳಿಸಿ ಅಕ್ಷರಗಳಿಗೆ ಮಸಿ ಲೇಪ, ಕೋರಿ ಕಾಗದಗಳ ದೂಳು ಸ್ವಚ್ಛಗೊಳಿಸುವ, ಸ್ಕ್ಯಾನ್ ಮಾಡುವ ಕಾರ್ಯ 20 ದಿನಗಳಿಂದ ನಡೆಯುತ್ತಿದೆ. 15ಕ್ಕೂ ಹೆಚ್ಚು ಮಂದಿ ಈ ಕೆಲಸದಲ್ಲಿ ತೊಡಗಿದ್ದಾರೆ.
‘ಬೆಂಗಳೂರಿನ ಇ–ಸಾಹಿತ್ಯ ದಾಖಲೀಕರಣ, ಸಂಶೋಧನಾ ಕೇಂದ್ರದ ಅಶೋಕ ದೊಮ್ಮಲೂರು ಮತ್ತು ತಂಡದವರು ಉಚಿತವಾಗಿ ಡಿಜಿಟಲೀಕರಣ ಕಾರ್ಯನಿರ್ವಹಿಸುತ್ತಿದ್ಧಾರೆ. ನಮ್ಮ ಭಂಡಾರದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಕಟ್ಟುಗಳಲ್ಲಿ ಸುಮಾರು ಏಳು ಲಕ್ಷ ಹಸ್ತ ಪ್ರತಿಗಳು ಇವೆ. ಏಳು ತಿಂಗಳಲ್ಲಿ ಹಸ್ತಪ್ರತಿಗಳ ಡಿಜಿಟಲೀಕಣ ಮುಗಿಸುವುದಾಗಿ ತಂಡದವರು ತಿಳಿಸಿದ್ಧಾರೆ. ಶತಮಾನಗಳ ಅಪರೂಪದ ಹಸ್ತಪ್ರತಿಗಳು ಇಲ್ಲಿವೆ. ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ, ಹಸ್ತಪ್ರತಿ ಅಧ್ಯಯನ ಮಾಡುವವರಿಗೆ ಡಿಜಿಟಲೀಕಣದಿಂದ ಅನುಕೂಲವಾಗಲಿದೆ’ ಎಂದು ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಕೃಷ್ಣ ನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು.
‘ಈಗಿರುವ ಹಸ್ತಪ್ರತಿ ಭಂಡಾರವನ್ನು ಗ್ರಂಥಾಲಯವಾಗಿ ಸಜ್ಜುಗೊಳಿಸುತ್ತೇವೆ. ‘ರೂಶಾ’ ಯೋಜನೆಯಡಿ ₹20 ಲಕ್ಷ ಅನುದಾನ ಮಂಜೂರಾಗಿದೆ. ಗ್ರಂಥಾಲಯ ಕೊಠಡಿಯಲ್ಲಿ ಹವಾನಿಯಂತ್ರಿತ (ಎ.ಸಿ) ವ್ಯವಸ್ಥೆ, ಹೀಟರ್ ಮೊದಲಾದ ಎಲ್ಲ ಆಧುನಿಕ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಹಸ್ತಪ್ರತಿಗಳನ್ನು ಇಲ್ಲಿ ಇಡುತ್ತೇವೆ’ ಎಂದು ಮಾಹಿತಿ ನೀಡಿದರು.
‘ಡಿಜಿಟಲೀಕರಣ; ಶಾಶ್ವತ ಸಂಗ್ರಹ’
‘ಹಸ್ತಪ್ರತಿಗಳನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡದಿದ್ದರೆ ಕಾಲಾನಂತರ ಅವು ಪುಡಿಯಾಗುತ್ತವೆ. ಹೀಗಾಗಿ ಅವುಗಳನ್ನು ಸ್ವಚ್ಛಗೊಳಿಸಿ ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದೇವೆ. ಡಿಜಿಟಲೀಕರಣ ಮಾಡುವುದರಿಂದ ಅವುಗಳನ್ನು ಶಾಶ್ವತವಾಗಿ ಕಾಪಾಡಿಕೊಳ್ಳಬಹುದು. ಅಧ್ಯಯನಕಾರರು ಡಿಜಿಟಲ್ ಪ್ರತಿಗಳನ್ನು ಪರಾಮರ್ಶನ ಮಾಡಬಹುದು’ ಎಂದು ಇ–ಸಾಹಿತ್ಯ ದಾಖಲೀಕರಣ ಸಂಶೋಧನಾ ಕೇಂದ್ರದ ಅಶೋಕ ದೊಮ್ಮಲೂರು ತಿಳಿಸಿದರು. ‘ಹಸ್ತಪ್ರತಿಗಳಲ್ಲಿ ಪುಟ ಸಂಖ್ಯೆ ಇವೆ. ಆ ಕ್ರಮಾನುಗತಿಯಲ್ಲಿ ಪ್ರತಿಗಳನ್ನು ಸ್ಕ್ಯಾನ್ ಮಾಡಿ ಕ್ಯಾಟಲಾಗ್ ಮಾಡಿ ವರ್ಗೀಕರಣ (ಪ್ರಕಟಿತ ಮತ್ತು ಅಪ್ರಕಟಿತ) ಮಾಡಿ ಹಾರ್ಡ್ ಡಿಸ್ಕ್‌ನಲ್ಲಿ ಸಂಗ್ರಹಿಸಿಡಲಾಗುವುದು. ಕಲಬುರ್ಗಿ ವಿಶ್ವವಿದ್ಯಾಲಯ ಹುಬ್ಬಳ್ಳಿಯ ಮೂರು ಸಾವಿರ ಮಠ ಮೊದಲಾದ ಕಡೆಗಳಲ್ಲಿ ಹಸ್ತಪ್ರತಿ ಡಿಜಿಟಲೀಕರಣ ಮಾಡಿದ್ದೇವೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.