ADVERTISEMENT

ಅಜೀಮ್‌ ಪ್ರೇಮ್‌ ಜಿ ವಿಶ್ವವಿದ್ಯಾಲಯದಲ್ಲಿ ದೇಶವಿರೋಧಿ ಕೃತ್ಯ: ಎಬಿವಿಪಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 6:14 IST
Last Updated 26 ಫೆಬ್ರುವರಿ 2026, 6:14 IST
ಹುಬ್ಬಳ್ಳಿಯ ವಿದ್ಯಾನಗರದ ಬಿವಿಬಿ ಕಾಲೇಜಿನ ಎದುರು ಎಬಿವಿಪಿ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು
ಹುಬ್ಬಳ್ಳಿಯ ವಿದ್ಯಾನಗರದ ಬಿವಿಬಿ ಕಾಲೇಜಿನ ಎದುರು ಎಬಿವಿಪಿ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು   

ಹುಬ್ಬಳ್ಳಿ: ‘ಬೆಂಗಳೂರಿನ ಅಜೀಮ್‌ ಪ್ರೇಮ್‌ ಜಿ ವಿಶ್ವವಿದ್ಯಾಲಯದ ಆವರಣದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಸಂಘ (ಎಐಎಸ್‌ಎ) ದೇಶವಿರೋಧಿ ಚಟುವಟಿಕೆಗಳ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ರಾಜ್ಯ ಸರ್ಕಾರ ತಕ್ಷಣ ಕ್ರಮಕ್ಕೆ ಮುಂದಾಗಬೇಕು’ ಎಂದು ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ನಗರದಲ್ಲಿ ಪ್ರತಿಭಟನೆ ನಡೆಸಿದರು.

ವಿದ್ಯಾನಗರದ ಬಿವಿಬಿ ಕಾಲೇಜು ಎದುರು ಬುಧವಾರ ಪ್ರತಿಭಟನೆ ನಡೆಸಿದ ಅವರು, ಅಜೀಮ್‌ ಪ್ರೇಮ್‌ ಜಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿ ಆಕ್ರೊಶ ವ್ಯಕ್ತಪಡಿಸಿದರು. ದೇಶದ್ರೋಹಿ ವಿಶ್ವವಿದ್ಯಾಲಯವನ್ನು ಬಂದ್‌ ಮಾಡಬೇಕು ಎಂದು ಆಗ್ರಹಿಸಿದರು.

‘ಜ್ಞಾನಾರ್ಜನೆಯ ಕೇಂದ್ರವಾಗಿರಬೇಕಾದ ದೇಶದ ಕೆಲವು ಪ್ರತಿಷ್ಠಿತ ವಿಶ್ವವಿದ್ಯಾಲಯಗಳು, ದೇಶದ್ರೋಹಿ ಚಟುವಟಿಕೆಗಳ ತಾಣವಾಗುತ್ತಿರುವುದು ಆತಂಕದ ಸಂಗತಿ. ಎಐಎಸ್‌ಎ ಅನೇಕ ವರ್ಷಗಳಿಂದ ಇಂತಹ ಚಟುವಟಿಕೆಗಳನ್ನು ನಡೆಸುತ್ತ ಬಂದಿದ್ದು, ಯುವ ಸಮುದಾಯ ದೇಶದ ವಿರುದ್ಧ ಕಾರ್ಯನಿರ್ವಹಿಸುವಂತೆ ಮಾಡುತ್ತಿದೆ. ಇದರ ಪ್ರಾಯೋಜಿತ ಸ್ಪಾರ್ಕ್‌ ಸಂಸ್ಥೆಯು ಸೈನಿಕರ ವಿರುದ್ಧ ಅಪಪ್ರಚಾರ ಮಾಡುತ್ತ, ಕಾಶ್ಮೀರದ ವಿಷಯದಲ್ಲಿ ಪ್ರಚೋದನಕಾರಿ ಹೇಳಿಕೆ ನಿಡುತ್ತ ದೇಶದ ಸಮಗ್ರತೆಗೆ ಧಕ್ಕೆ ತರುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ತಕ್ಷಣ ಎಐಎಸ್‌ಎ ಹಾಗೂ ಸ್ಪಾರ್ಕ್‌ ಸಂಸ್ಥೆಯನ್ನು ನಿಷೇಧಿಸಬೇಕು. ದೇಶವಿರೋಧಿ ಚಟುವಟಿಕೆಗಳನ್ನು ಆಯೋಜಿಸುವ ವಿದ್ಯಾರ್ಥಿಗಳ ಹಾಗೂ ಸಂಘಟನೆಯ ಪ್ರಮುಖರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಂತಹ ಚಟುವಟಿಕೆಗಳಿಗೆ ಅವಕಾಶ ನೀಡುತ್ತಿರುವ ವಿಶ್ವವಿದ್ಯಾಲಯದ ಮಾನ್ಯತೆಯನ್ನು ರದ್ದುಪಡಿಸಬೇಕು’ ಎಂದು ಒತ್ತಾಯಿಸಿದರು.

ಸಂಘಟನೆಯ ರಾಜ್ಯ ಕಾರ್ಯದರ್ಶಿ ದರ್ಶನ ಹೆಗಡೆ, ಕೇಂದ್ರೀಯ ಕಾರ್ಯಸಮಿತಿ ಸದಸ್ಯ ಸಚಿನ ಕುಳಗೇರಿ, ಸಿದ್ಧಾರ್ಥ ಕೋರಿ, ಅಥರ್ವ ಚವ್ಹಾಣ, ಲೋಕೇಶ ಚಿಗರೆ, ತಿಲಕ, ಶಿವಕುಮಾರ, ಕರ್ಣ, ಪೃಥ್ವಿರಾಜ, ಚೈತ್ರಾ, ಮೇಘನಾ, ಶ್ರಾವಣಿ, ಅಜಯ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.