ADVERTISEMENT

ದುರ್ವರ್ತನೆ ತೋರಿದವರ ವಿರುದ್ಧ ಕ್ರಮ: ಪೊಲೀಸ್‌ ಕಮಿಷನರ್‌ ಎನ್‌.ಶಶಿಕುಮಾರ್‌

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 6:15 IST
Last Updated 26 ಫೆಬ್ರುವರಿ 2026, 6:15 IST
ಜುಬಿಲಿ ವೃತ್ತದಲ್ಲಿ ಪೊಲೀಸ್‌ ಕಮಿಷನರ್‌‌ ಎನ್‌.ಶಶಿಕುಮಾರ್‌ ಮತ್ತು ಅಕ್ಸಾ ಅಧ್ಯಕ್ಷ ಕಾಂತಕುಮಾರ್‌ ನಡುವೆ ವಾಗ್ವಾದ ನಡೆಯಿತು –ಚಿತ್ರ: ಬಿ.ಎಂ.ಕೇದಾರನಾಥ
ಜುಬಿಲಿ ವೃತ್ತದಲ್ಲಿ ಪೊಲೀಸ್‌ ಕಮಿಷನರ್‌‌ ಎನ್‌.ಶಶಿಕುಮಾರ್‌ ಮತ್ತು ಅಕ್ಸಾ ಅಧ್ಯಕ್ಷ ಕಾಂತಕುಮಾರ್‌ ನಡುವೆ ವಾಗ್ವಾದ ನಡೆಯಿತು –ಚಿತ್ರ: ಬಿ.ಎಂ.ಕೇದಾರನಾಥ   

ಧಾರವಾಡ: ‘ನಗರದಲ್ಲಿ ಮಂಗಳವಾರ ನಡೆದ ಉದ್ಯೋಗಾಕಾಂಕ್ಷಿಗಳ ಬೃಹತ್‌ ಪ್ರತಿಭಟನೆಯಲ್ಲಿ ಪೊಲೀಸರ ಜತೆ ಸಂಘರ್ಷಕ್ಕಿಳಿದವರು, ದುರ್ವರ್ತನೆ ತೋರಿದವರು, ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಹುಬ್ಬಳ್ಳಿ–ಧಾರವಾಡ ಮಹಾನಗರ ಪೊಲೀಸ್‌ ಕಮಿಷನರ್‌ ಎನ್‌.ಶಶಿಕುಮಾರ್‌ ತಿಳಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾ‌ಡಿದ ಅವರು, ‘ಎಲ್ಲೆಲ್ಲಿ ಕಾನೂನು ಉಲ್ಲಂಘನೆ ಮಾಡಿದ್ದಾರೆಂದು ಪರಿಶೀಲಿಸಿ ಕ್ರಮ ಜರುಗಿಸಲಾಗುವುದು. ರ‍್ಯಾಲಿ ಮಾರ್ಗ ಬದಲಾವಣೆ ಮಾಡಬಾರದು ಎಂದು ನಾಲ್ಕೈದು ಕಡೆ ಬ್ಯಾರಿಕೇಡ್‌ ಹಾಕಿ ತಡೆದರೂ ಕೆಲವರು ಅದನ್ನು ನೂಕಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ಧಾರೆ. ತಳ್ಳಾಟ ನೂಕಾಟ ಸಂದರ್ಭದಲ್ಲಿ ಕೆಲವು ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿವೆ’ ಎಂದು ತಿಳಿಸಿದರು.

‘ಮೊದಲೇ ಎಚ್ಚರಿಕೆ ನೀಡಿದ್ದರೂ ಕಾನೂನು ಉಲ್ಲಂಘಿಸಿದ್ದಾರೆ. ಹಲವರು ಪದೇ ಪದೇ ರಾಜ್ಯ ವಿವಿಧೆಡೆಗಳಲ್ಲಿ ನಡೆದ ಪ್ರತಿಭಟನೆಗಳಲ್ಲಿ ಭಾಗವಹಿಸಿ ಕಾನೂನು ಉಲ್ಲಂಘಿಸಿರುವುದು ಕಂಡುಬಂದಿದೆ. ಪ್ರಚೋದನೆ ನೀಡಿದ, ನೀರಿನ ಬಾಟಲಿ ತೂರಿದ ದಾಖಲೆಗಳು ಇವೆ. ಈವರೆಗೆ ಯಾರ ವಿರುದ್ಧವೂ ಪ್ರಕರಣ ದಾಖಲಿಸಿಲ್ಲ’ ಎಂದರು.

ADVERTISEMENT

ಪ್ರತಿಭಟನೆಗೆ ಅನುಮತಿ ಪಡೆದಿದ್ದು ಬಿಜೆಪಿ: ‘ಉದ್ಯೋಗಾಕಾಂಕ್ಷಿಗಳ ಬೇಡಿಕೆಗಳಿಗೆ ಸಂಬಂಧಿಸಿದಂತೆ ಶ್ರೀನಗರ ವೃತ್ತದಿಂದ ಮಿಚಿಗನ್‌ ಕಾಂಪೌಂಡ್‌ ವರೆಗೆ ಪ್ರತಿಭಟನಾ ರ‍್ಯಾಲಿ ಮತ್ತು ವೇದಿಕೆ ಕಾರ್ಯಕ್ರಮಕ್ಕೆ ಬಿಜೆಪಿಯವರಿಗೆ ಅನುಮತಿ ನೀಡಲಾಗಿತ್ತು. ಅವರು ಅನುಮತಿಸಿ ಮಾರ್ಗದಲ್ಲಿ ಸಾಗಿ, ನಿಗದಿತ ಸ್ಥಳದಲ್ಲಿ ವೇದಿಕೆ ಕಾರ್ಯಕ್ರಮ ಮಾಡಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.