ADVERTISEMENT

ಆರೇಕುರಹಟ್ಟಿ: ಜಮೀನಿನ ನೀರು ಹೋಗಲು ದಾರಿ ಸಮಸ್ಯೆ

ಮಳೆ ಬಂದರೆ 150 ಎಕರೆ ಜಲಾವೃತ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2021, 19:31 IST
Last Updated 24 ಡಿಸೆಂಬರ್ 2021, 19:31 IST
ನವಲಗುಂದ ತಾಲ್ಲೂಕಿನ ಆರೇಕುರಹಟ್ಟಿ ಗ್ರಾಮದಲ್ಲಿ ನೀರು ಹರಿದು ಹೋಗಲು ಜಾಗವಿಲ್ಲದೇ ಜಮೀನಿನಲ್ಲಿ ನೀರು ನಿಂತಿರುವುದು
ನವಲಗುಂದ ತಾಲ್ಲೂಕಿನ ಆರೇಕುರಹಟ್ಟಿ ಗ್ರಾಮದಲ್ಲಿ ನೀರು ಹರಿದು ಹೋಗಲು ಜಾಗವಿಲ್ಲದೇ ಜಮೀನಿನಲ್ಲಿ ನೀರು ನಿಂತಿರುವುದು   

ನವಲಗುಂದ: ಮಳೆ ನೀರು ಹರಿದು ಹೋಗಲು ಜಾಗವಿಲ್ಲದೇ ಹೊಲದಲ್ಲಿ ನೀರು ನಿಲ್ಲುತ್ತದೆ. ನೀರು ಸರಾಗವಾಗಿ ಹರಿದುಹೋಗುವಂತೆ ದಾರಿ ಮಾಡಿಕೊಡಿ ಎಂದು ಸುಮಾರು 150 ಎಕರೆ ಜಮೀನಿನ ರೈತರು ಕಳೆದ ಮೂರು ವರ್ಷದಿಂದ ಮನವಿ ಮಾಡುತ್ತಿದ್ದಾರೆ. ಆದರೂ, ಸಮಸ್ಯೆಗೆ ಮುಕ್ತಿ ಸಿಕ್ಕಿಲ್ಲ.

ಗ್ರಾಮ ಪಂಚಾಯ್ತಿ, ತಹಶೀಲ್ದಾರ್, ಸಂಬಂಧಪಟ್ಟ ಇಲಾಖೆಯವರಿಗೆ ಮೇಲಿಂದ ಮೇಲೆ ಮನವಿ ಮಾಡಿಕೊಂಡರೂ ಶಾಶ್ವತ ಪರಿಹಾರ ಕಲ್ಪಿಸುತ್ತಿಲ್ಲ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

ಮೊದಲು ನೀರು ಸರಾಗವಾಗಿ ಹರಿದುಹೋಗುತ್ತಿತ್ತು. ಆದರೆ ಕೆಲ ಜಮೀನಿನ ಮಾಲಿಕರು ಬಿನ್‍ಶೇತ್ಕಿ ಮಾಡಿ ಸುಮಾರು 100 ಖಾಲಿ ನಿವೇಶನಗಳನ್ನು ಮಾರಾಟ ಮಾಡಿದ್ದಾರೆ. ಭೂ ಮಾಲೀಕರು ನೀರು ಹೋಗಲು ಜಾಗ ಬಿಟ್ಟಿದ್ದಾರೆ. ಆದರೆ ಈಗ ಅಲ್ಲಿಯೂ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಆಯಾ ಮನೆಯವರು ತಮ್ಮ ಮನೆಗಳ ಮುಂದೆ ನೀರು ಬರದಂತೆ ಎತ್ತರಕ್ಕೆ ಮಣ್ಣು ಹಾಕಿಕೊಂಡಿದ್ದಾರೆ. ಇದರಿಂದಾಗಿ ನೀರು ಹರಿದು ಹೋಗಲು ಜಾಗವಿಲ್ಲದಂತಾಗಿ ರೈತರು ಪರದಾಡುತ್ತಿದ್ದಾರೆ.

ADVERTISEMENT

‘ಈ ವರ್ಷ ಸುರಿದ ಮಳೆಯಿಂದಾಗಿ ಹಾಗೂ ಬೆಣ್ಣೆಹಳ್ಳದ ನೀರು ಏರಿ ಬಂದ ಕಾರಣ ನೂರಾರು ಹೆಕ್ಟೆರ್ ಪ್ರದೇಶದಲ್ಲಿನ ಗೋವಿನಜೋಳ, ಹೆಸರು, ಹತ್ತಿ ಬೆಳೆ ನೀರು ಪಾಲಾದವು. ತಹಶೀಲ್ದಾರ್ ಹಾಗೂ ಗ್ರಾಮ ಲೆಕ್ಕಾಧಿಕಾರಿ ಸ್ಥಳಕ್ಕೆ ಬಂದು ನೋಡಿಕೊಂಡು ಹೋಗಿದ್ದಾರೆ ಹೊರತು ಶಾಶ್ವತ ಪರಿಹಾರ ಕಲ್ಪಿಸುತ್ತಿಲ್ಲ. ನಮ್ಮೂರಲ್ಲಿಯೇ ಗ್ರಾಮ ಪಂಚಾಯ್ತಿ ಆಗಬೇಕೆಂದು ಪಟ್ಟು ಹಿಡಿದಿರುವ ಆರೇಕುರಹಟ್ಟಿ ಗ್ರಾಮಸ್ಥರು ಕಳೆದ 8 ವರ್ಷದಿಂದ ಚುನಾವಣೆ ಬಹಿಷ್ಕರಿಸಿರುವುದರಿಂದ ಜನಪ್ರತಿನಿಧಿಗಳೇ ಇಲ್ಲದಂತಾಗಿದೆ. ನಮ್ಮ ಸಮಸ್ಯೆಯನ್ನು ಯಾರ ಮುಂದೆ ಹೇಳಬೇಕು ಎಂಬುದು ತಿಳಿಯುತ್ತಿಲ್ಲ’ ಎಂದು ರೈತ ಹನಮರಡ್ಡಿ ರಂಗರಡ್ಡಿ ಅಳಲು ತೋಡಿಕೊಂಡಿದ್ದಾರೆ.

ಇನ್ನು ಬಯಲು ಚರಂಡಿಯ ಸಮರ್ಪಕ ನಿರ್ವಹಣೆ ಇಲ್ಲದೇ ಶೌಚದ ನೀರು ಗಟಾರದ ಮೂಲಕ ಕುಡಿಯುವ ನೀರಿನ ಕೆರೆ ಸೇರುತ್ತಿರುವುದರಿಂದ ಕಲುಷಿತ ನೀರು ಕುಡಿಯಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ಗಟಾರಗಳು ಗಬ್ಬು ನಾರುತ್ತಿವೆ ಎಂದು ಗ್ರಾಮಸ್ಥ ಆನಂದ ಹರಿಹರ ದೂರಿದರು.

***

ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಈಗ ಆಗಿರುವ ಸಮಸ್ಯೆಗೆ ಸರ್ಕಾರ ಪರಿಹಾರ ಒದಗಿಸಬೇಕು.
-ಹನಮರಡ್ಡಿ ರಂಗರಡ್ಡಿ, ರೈತ

**

ಯಮನೂರ ಗ್ರಾಮ ಪಂಚಾಯ್ತಿಯವರು ಬಂದು ಚರಂಡಿ ಸ್ವಚ್ಚ ಮಾಡುತ್ತಿಲ್ಲ. ಆದರೆ, ಸಮಯಕ್ಕೆ ಸರಿಯಾಗಿ ಬಂದು ಕರ ವಸೂಲಿ ಮಾತ್ರ ಮಾಡುತ್ತಾರೆ. ಇದು ಸರಿಯೇ?
-ಆನಂದ ಹರಿಹರ, ಗ್ರಾಮಸ್ಥರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.