
ಧಾರವಾಡ: ‘ಮದ್ಯವ್ಯಸನಿಗಳಿಂದ ಕುಟುಂಬ ಹಾಗೂ ಸಮಾಜಕ್ಕೆ ತೊಂದರೆಯಾಗುತ್ತಿದೆ. ಆದ್ದರಿಂದ, ಸರ್ಕಾರ ಮದ್ಯಪಾನ ನಿಷೇಧ ಮಾಡಬೇಕು’ ಎಂದು ಗ್ರಾಮಾಭಿವೃದ್ಧಿ ಚಿಂತಕ ಡಾ.ಪ್ರಕಾಶ್ ಭಟ್ ಒತ್ತಾಯಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಜನಜಾಗೃತಿ ವೇದಿಕೆ, ಮದ್ಯಪಾನ ಸಂಯಮ ಮಂಡಳಿ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಬುಧವಾರ ರಾಯಾಪುರದ ಮಹಿಳಾ ಜ್ಞಾನವಿಕಾಸ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ್ದ 2000ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ವ್ಯಸನಿಗಳಿಗೆ ಆರಂಭದಲ್ಲಿ ಮದ್ಯಪಾನ ಖುಷಿ ನೀಡುತ್ತದೆ. ನಂತರ ಇಡೀ ಕುಟುಂಬದ ನೆಮ್ಮದಿಯನ್ನೆ ಕಿತ್ತುಕೊಳ್ಳುತ್ತದೆ. ಇದರಿಂದ ಮದ್ಯವ್ಯಸನಿಯ ಕುಟುಂಬ ಹಾಳಾಗುತ್ತದೆ. ಶಿಬಿರಾರ್ಥಿಗಳು ಮದ್ಯಪಾನ ತ್ಯಜಿಸಿ ಸಮಾಜಕ್ಕೆ ಮಾದರಿಯಾಗಬೇಕು’ ಎಂದರು.
‘ಮದ್ಯವ್ಯಸನಿಗಳಾಗುತ್ತಿರುವ ರೈತರನ್ನು ಹಾಗೂ ಕೂಲಿ ಕಾರ್ಮಿಕರ ರಕ್ಷಣೆಗೆ ನಿಂತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಕಾರ್ಯ ಶ್ಲಾಘನೀಯ. ಸಂಸ್ಥೆಯು ಶ್ರದ್ದೆ, ತಾಳ್ಮೆ ಮತ್ತು ನಿಷ್ಠೆಯಿಂದ ಈ ಕೆಲಸ ಮಾಡುತ್ತಿದೆ’ ಎಂದರು.
ಜನ ಜಾಗೃತಿ ಸಂಘದ ಅಧ್ಯಕ್ಷ ನಟರಾಜ್ ಬಾದಾಮಿ ಮಾತನಾಡಿ, ‘ಧರ್ಮಸ್ಥಳದ ಅನೇಕ ಟ್ರಸ್ಟ್‌ಗಳ ಮೂಲಕ ಸಮಾಜಮುಖಿ ಕೆಲಸ ಮಾಡುತ್ತಿದೆ’ ಎಂದರು.
ಪೊಲೀಸ್ ಇನ್‌ಸ್ಪೆಕ್ಟರ್ ಮಲ್ಲಿಕಾರ್ಜುನ್ ಹೊಸೂರ ಮಾತನಾಡಿ, ‘ದಿನನಿತ್ಯದ ಜೀವನದಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳಲ್ಲಿ ಹೆಚ್ಚಿನವು ಮದ್ಯವ್ಯಸನಿಗಳಿಂದಲೇ ಆಗುತ್ತಿವೆ. ಮದ್ಯವ್ಯಸನಿಗಳು ವ್ಯಸನಮುಕ್ತಿ ಶಿಬಿರದ ಸದುಪಯೋಗ ಪಡೆದು ಪರಿವರ್ತನೆಯಾಗಿ ಸುಂದರ ಜೀವನ ಕಟ್ಟಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಜನ ಜಾಗೃತಿ ವೇದಿಕೆ ಟ್ರಸ್ಟ್ ಜಿಲ್ಲಾ ಘಟಕದ ಅಧ್ಯಕ್ಷ ವಸಂತ ಅರ್ಕಾಚಾರ್ ಮಾತನಾಡಿ, ‘ಉತ್ತಮ ಸಮಾಜ ನಿರ್ಮಾಣದ ಹೊಣೆ ಎಲ್ಲರ ಮೇಲೂ ಇದೆ. ಎಲ್ಲರೂ ಇದಕ್ಕೆ ಕೈ ಜೋಡಿಸಬೇಕು’ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ಪ್ರದೀಪ್ ಶೆಟ್ಟಿ, ಧಾರವಾಡ ಜರ್ನಲಿಸ್ಟ್ ಗಿಲ್ಡ್ ಅಧ್ಯಕ್ಷ ಬಸವರಾಜ್ ಹೊಂಗಲ್, ಶಿಬಿರದ ವ್ಯವಸ್ಥಾಪನಾ ಸಮಿತಿ ಸದಸ್ಯ ಪ್ರಭಾಕರ ನಾಯಕ, ಸುರೇಶ ಮುರಲಿಂಗನವರ, ಎ.ವಿ.ಜಯರಾಮನವರ, ಮಾರುತಿ ಶೇಠ್, ಶಿವಾಜಿ ಖಂಡೇಕರ್, ರಮೇಶ ಮಹಾದೇವಪ್ಪನವರ, ಜೆಎಸ್‍ಎಸ್ ಪ್ರಾಚಾರ್ಯ ಮಹಾವೀರ ಉಪಾಧ್ಯಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.