ಛಲವಾದಿ ನಾರಾಯಣಸ್ವಾಮಿ
ಹುಬ್ಬಳ್ಳಿ: ತಮ್ಮನ್ನು ಸಾವರ್ಕರ್ ಸೋಲಿಸಿದರೆಂದು ಡಾ.ಬಿ.ಆರ್. ಅಂಬೇಡ್ಕರ್ ಪತ್ರ ಬರೆದಿದ್ದಾರೆ ಎಂದು ಹೇಳಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಕ್ಷಿ ಸಮೇತ ಸಾಬೀತುಪಡಿಸಬೇಕು. ಇದಲ್ಲದಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ರಾಜಕೀಯದಿಂದ ಸನ್ಯಾಸ ಪಡೆಯಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸವಾಲು ಹಾಕಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರು ಸಾಕ್ಷೀಕರಿಸಿದರೆ ನಾನು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಹೇಳಿದರು.
‘ಇದೇ ವಿಷಯವನ್ನು ವಿಧಾನ ಪರಿಷತ್‌ನಲ್ಲಿ ಸಚಿವ ಪ್ರಿಯಾಂಕ ಖರ್ಗೆ ಅವರು ಹೇಳಿದಾಗ ನಾನು ವಿರೋಧಿಸಿದ್ದೆ. ಅವರು ಹೇಳಿದ್ದ ಆ ಸುಳ್ಳನ್ನೇ ಈಗ ಮುಖ್ಯಮಂತ್ರಿ ಅವರು ಪುನರುಚ್ಚರಿಸಿದ್ದಾರೆ. ಪ್ರಿಯಾಂಕ ಖರ್ಗೆ ಅವರ ಮಾತನ್ನು ಯಾರೂ ನಂಬವುದಿಲ್ಲ. ಆದರೆ, ಸಿದ್ದರಾಮಯ್ಯ ಅವರನ್ನು ಜನ ನಂಬುತ್ತಾರೆ. ಆದರೆ, ಈಗ ಅವರೇ ಸುಳ್ಳು ಹೇಳಿದರೆ ಹೇಗೆ?’ ಎಂದು ಪ್ರಶ್ನಿಸಿದರು.
‘ಈ ಸರ್ಕಾರ ಅಲ್ಪಾಯುಷಿ. ಯಾವ ಕ್ಷಣದಲ್ಲಿ ಬಿದ್ದು ಹೋಗುತ್ತದೆಯೋ ಗೊತ್ತಿಲ್ಲ. ಸಿದ್ದರಾಮಯ್ಯ ಯಾವಾಗ ಇಳಿಯುತ್ತಾರೆಂದು ಕಾಯುತ್ತಿದ್ದಾರೆ. ಕಾಂಗ್ರೆಸ್ ನಾಯಕರಲ್ಲಿಯೇ ಭಿನ್ನಾಭಿಪ್ರಾಯವಿದೆ. ಎಸ್‌ಇಪಿ/ ಟಿಎಸ್‌ಪಿ ಅನುದಾನವನ್ನು ಕಡಿತಗೊಳಿಸಿ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸುತ್ತಿದೆ. ಕಾಂಗ್ರೆಸ್‌ನಲ್ಲಿ ಹಲವು ಪರಿಶಿಷ್ಟ ಮುಖಂಡರು, ಸಚಿವರು ಇದ್ದರೂ ಯಾರೊಬ್ಬರೂ ಬಾಯಿ ಬಿಡುತ್ತಿಲ್ಲ’ ಎಂದು ಆರೋಪಿಸಿದರು.
‘ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಬೇಸತ್ತು ಹೋಗಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ. 5 ಗ್ಯಾರಂಟಿಗಳ ಮೇಲೆ 5 ವರ್ಷ ತನ್ನ ಆಡಳಿತ ಪೂರ್ಣಗೊಳಿಸಿದರೆ ಸಾಕು ಎನ್ನುತ್ತಿದೆ ರಾಜ್ಯ ಸರ್ಕಾರ’ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.