
ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಶಾಲಾ ಪೂರ್ವ ಶಿಕ್ಷಣ ಪಡೆಯುವ 3ರಿಂದ 6 ವರ್ಷದೊಳಗಿನ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿತವಾಗುತ್ತಿದೆ.
2021–22ನೇ ಸಾಲಿನಲ್ಲಿ 3–6 ವರ್ಷದೊಳಗಿನ 61,318 ಮಕ್ಕಳು ಅಂಗನವಾಡಿಗೆ ಪ್ರವೇಶ ಪಡೆದಿದ್ದರು. ನಂತರ ವರ್ಷಗಳಲ್ಲಿ ಈ ಸಂಖ್ಯೆ ಕ್ರಮೇಣ ಕ್ಷೀಣಿಸಿದೆ. ಪ್ರಸಕ್ತ ಸಾಲಿನಲ್ಲಿ 38,815 ಮಕ್ಕಳು ಪ್ರವೇಶ ಪಡೆದಿದ್ದಾರೆ. ವಿವಿಧ ಕಾರಣಗಳಿಂದ ಅಂಗನವಾಡಿಗೆ ಬರುವ ಮಕ್ಕಳ ಪ್ರಮಾಣ ಕಡಿಮೆಯಾಗುತ್ತಿದೆ.
‘ಬಾಡಿಗೆ ಕಟ್ಟಡದಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿ ಸೂಕ್ತ ವ್ಯವಸ್ಥೆ ಇರುವುದಿಲ್ಲ. ಸರ್ಕಾರ ನೀಡುವ ಬಾಡಿಗೆ ಹಣಕ್ಕೆ ಸುಸಜ್ಜಿತ ಕಟ್ಟಡ ಸಿಗುವುದೂ ಇಲ್ಲ. ಸ್ವಂತ ಕಟ್ಟಡಗಳಲ್ಲಷ್ಟೇ ಅಗತ್ಯ ಸೌಕರ್ಯ ಇರುತ್ತದೆ. ತಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕಾದರೆ ಎಲ್ಲ ರೀತಿಯ ಸೌಲಭ್ಯ ಇರುವ ಶಾಲೆಗೆ ಸೇರಿಸಬೇಕೆಂದು ಪೋಷಕರು ನಿರ್ಧರಿಸುತ್ತಾರೆ. ಸಾಕಷ್ಟು ಹಣ ಇಲ್ಲದಿದ್ದರೂ ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಾರೆ’ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ (ಸಿಐಟಿಯು) ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಸುನಂದಾ ಹೇಳಿದರು.
‘ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ನಿಯಮದಂತೆ ಅಂಗನವಾಡಿ ಕಾರ್ಯಕರ್ತೆಯರು ಬೆಳಿಗ್ಗೆ 9ರಿಂದ ಮಧ್ಯಾಹ್ನ 1.30ರವರೆಗೆ ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ ಬೋಧಿಸಬೇಕು. ಆದರೆ, ಸರ್ಕಾರವು ಸಮೀಕ್ಷೆ ಸೇರಿದಂತೆ ಬೇರೆಯದೇ ಕೆಲಸಗಳಿಗೆ ಕಾರ್ಯಕರ್ತೆಯರನ್ನು ನಿಯೋಜಿಸುತ್ತಿದೆ. ಈಚೆಗೆ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆದು, ಪೂರ್ವ ಪ್ರಾಥಮಿಕ ಶಿಕ್ಷಣದಿಂದ ದ್ವಿತೀಯ ಪಿಯುಸಿವರೆಗೆ ಒಂದೇ ಕಡೆ ಶಿಕ್ಷಣ ಲಭ್ಯವಾಗುವಂತೆ ಮಾಡಿದೆ. ಅಂಗನವಾಡಿಗಳಲ್ಲಿ ಪ್ರವೇಶಾತಿ ಕುಸಿಯಲು ಇದೂ ಕಾರಣವಾಗಿದೆ’ ಎಂದರು.
‘ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಣ ದೊರೆಯುವುದೆಂದು ಪೋಷಕರು ಯೋಚಿಸುತ್ತಾರೆ. ಆದರೆ, ಅಂಗನವಾಡಿಗಳಲ್ಲಿ ಸಿಗುವ ವಿವಿಧ ಸೌಲಭ್ಯ ಈ ಶಾಲೆಗಳಲ್ಲಿ ಇರುವುದಿಲ್ಲ. ಶಾಲಾ ಪೂರ್ವಶಿಕ್ಷಣದೊಂದಿಗೆ ಆ ವಯಸ್ಸಿನ ಮಕ್ಕಳಿಗೆ ಬೇಕಾದ ಪೌಷ್ಟಿಕ ಆಹಾರ ನೀಡಲಾಗುತ್ತದೆ. ಕಲಿಕೆಗೆ ಪೂರಕವಾದ ವಾತಾವರಣ ಇರುತ್ತದೆ. ಹಾಗಾಗಿ, ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ನೀಡುವುದನ್ನು ಸರ್ಕಾರ ನಿಲ್ಲಿಸಬೇಕು’ ಎಂದು ಒತ್ತಾಯಿಸಿದರು.
‘ಅಂಗನವಾಡಿಗಳನ್ನೂ ಪೂರ್ವ ಪ್ರಾಥಮಿಕ ಶಾಲೆಗಳಾಗಿ ರೂಪಿಸಲು ಸರ್ಕಾರ ನಿರ್ಧರಿಸಿರುವುದು ಸ್ವಾಗತಾರ್ಹ. ಇದನ್ನು ಸಮಪರ್ಕವಾಗಿ ಅನುಷ್ಠಾನಗೊಳಿಸಬೇಕು. ಸೌಕರ್ಯ ವಂಚಿತ ಅಂಗನವಾಡಿ ಕೇಂದ್ರಗಳ ಅಗತ್ಯತೆಯನ್ನು ಪೂರೈಸಬೇಕು. ಶಾಲಾ ಪೂರ್ವ ಶಿಕ್ಷಣ ನೀಡಲು ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಕ್ತ ತರಬೇತಿ ನೀಡಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆತರೆ ಖಂಡಿತವಾಗಿ ದಾಖಲಾತಿ ಪ್ರಮಾಣ ಹೆಚ್ಚುತ್ತದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.