
ಅಣ್ಣಿಗೇರಿ: ಸುತ್ತಮುತ್ತಲಿನ ಪರಿಸರವನ್ನು ನಾವು ಸ್ವಚ್ಛತೆಯಿಂದ ಕಾಪಾಡಿಕೊಂಡರೆ ನಮ್ಮ ಆರೋಗ್ಯವು ಸಹ ಸ್ವಚ್ಛತೆಯಿಂದ ಇರುತ್ತದೆ. ಆರೋಗ್ಯದ ಹಿತದೃಷ್ಟಿಯಿಂದ ನಮ್ಮ ಮನೆಯ ಅಕ್ಕಪಕ್ಕದಲ್ಲಿರುವ ಸ್ಥಳವನ್ನು ಪ್ರತಿಯೊಬ್ಬರೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್.ಪಾಟೀಲ್ ಹೇಳಿದರು.
ಸ್ಥಳೀಯ ಪುರಸಭೆ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನದಲ್ಲಿ ಮಾತನಾಡಿದರು.
ಸ್ಥಳೀಯ ಆಡಳಿತ ಮಂಡಳಿ ಸದಸ್ಯರು ಪ್ರತಿ ಭಾನುವಾರ ತಮ್ಮ ವಾರ್ಡ್‌ನಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳುವ ಬದಲು ಪ್ರತಿ ತಿಂಗಳ ಮೊದಲ ಭಾನುವಾರ ನಗರದ 23 ವಾರ್ಡುಗಳಲ್ಲಿ ಏಕ ಕಾಲದಲ್ಲಿ ಸ್ವಚ್ಚತೆ ಮಾಡುವ ಕಾರ್ಯವನ್ನು ಹಮ್ಮಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಶಾಸಕ ಎನ್. ಎಚ್. ಕೋನರಡ್ಡಿ ಮಾತನಾಡಿ, ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಿದ ಉಪಾಧ್ಯಕ್ಷ ಡಿ.ಆರ್.ಪಾಟೀಲ್ ಹಿರಿಯರಿಗೆ ಅಭಿನಂದನೆ ಸಲ್ಲಿಸಿದರು.
ಇಂದೋರ್ ನಗರದಲ್ಲಿ ಸ್ವಚ್ಛತೆಗಾಗಿ ಕೈಗೊಂಡ ಕಾರ್ಯಗಳ ಬಗ್ಗೆ ಈಗಾಗಲೇ ನಮ್ಮ ಆಡಳಿತ ಸಂಪೂರ್ಣವಾಗಿ ತಿಳಿದುಕೊಂಡಿದೆ. ಅಲ್ಲಿನ ವ್ಯವಸ್ಥೆಯನ್ನೇ ಇಲ್ಲಿ ಉಪಯೋಗಿಸಿ ಸ್ವಚ್ಛತೆ ಕಡೆಗೆ ಗಮನವನ್ನು ನೀಡಬೇಕಾಗಿದೆ. ಮುಂದಿನ ಒಂದು ವರ್ಷದ ಒಳಗೆ ಅಣ್ಣಿಗೇರಿ ನಗರವನ್ನು ಸ್ವಚ್ಛತೆಯಲ್ಲಿ ಮಾದರಿ ನಗರವನ್ನಾಗಿ ಮಾಡಲು ಎಲ್ಲರೂ ಕಂಕಣ ಬದ್ಧರಾಗಿ ನಿಲ್ಲಬೇಕಾಗಿದೆ ಎಂದರು.
ಪ್ರತಿಯೊಂದು ವಾರ್ಡನಲ್ಲೂ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡ ನಾಗರಿಕರು ಮಾನವೀಯ ದೃಷ್ಟಿಯಿಂದ ಸ್ವಯಂ ಪ್ರೇರಣೆಯಿಂದ ತೆರವುಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು. ಸ್ವಚ್ಛತಾ ಕಾರ್ಯದಲ್ಲಿ ಸ್ವತಃ ಸದಸ್ಯರೇ ಕಸಬರಗಿ ಹಿಡಿದು ಸ್ವಚ್ಛತೆ ಮಾಡುತ್ತಿರುವುದು ಎಲ್ಲರ ಗಮನ ಸೆಳೆಯಿತು.
ಸ್ವಚ್ಛತಾ ಅಭಿಯಾನದಲ್ಲಿ ಸ್ಥಳೀಯ ದಾಸೋಹ ಮಠದ ಶಿವಕುಮಾರ ಸ್ವಾಮೀಜಿ ಕೂಡಾ ಭಾಗವಹಿಸಿ ತಮ್ಮ ಸಲಹೆ ಸೂಚನೆ ರಾಯಭಾರಿಯಾಗಿ ನೀಡಿರುವುದು ವಿಶೇಷವಾಗಿತ್ತು.
ಇಂದು ಕೇರಿ ಓಣಿಯಿಂದ ಹೊರಕೇರಿ ಓಣಿವರೆಗೆ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ತಹಶೀಲ್ದಾರ್ ಮಂಜುನಾಥ ದಾಸಪ್ಪನವರ, ಪುರಸಭೆ ಮುಖ್ಯಾಧಿಕಾರಿ ವೈ.ಜಿ.ಗದ್ದಿಗೌಡರ, ಅಧ್ಯಕ್ಷ ಶಿವಾನಂದ ಬೆಳಹಾರ, ಉಪಾಧ್ಯಕ್ಷ ನಾಗರಾಜ ದಳವಾಯಿ, ಸ್ಥಾಯಿ ಸಮಿತಿ ಚೇರ್ಮನ್ ನೀಲವ್ವ ಕುರುಹಟ್ಟಿ, ಮುದಕಣ್ಣ ಭಜಂತ್ರಿ, ಷಣ್ಮುಖ ಗುರಿಕಾರ, ಗ್ಯಾರಂಟಿ ಸಮಿತಿ ಅಧ್ಯಕ್ಷ ಮಂಜುನಾಥ ಮಾಯಣ್ಣವರ, ಮಲ್ಲಿಕಾರ್ಜುನ ಸುರಕೋಡ, ಮುತವಲ್ಲಿ ರಫೀಕ್ ಲೋಕಾಪುರಿ, ಖಾದರಸಾಬ ಡಂಬಳಿ,ಚಾಂದುಸಾಬ ಅಗಸಿಬಾಗಿಲ,ಬಸವರಾಜ ಕೋಳಿವಾಡ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.