ADVERTISEMENT

ಕವಿವಿ ಕುಲಪತಿ ನೇಮಕ: ಹೈಕೋರ್ಟ್‌ಗೆ ರಿಟ್ ಅರ್ಜಿ

ತಕ್ಷಣಕ್ಕೆ ಯಾವುದೇ ಕ್ರಮ ಕೈಗೊಳ್ಳದಂತೆ ಆದೇಶ

​ಪ್ರಜಾವಾಣಿ ವಾರ್ತೆ
Published 9 ಜುಲೈ 2025, 4:53 IST
Last Updated 9 ಜುಲೈ 2025, 4:53 IST
ಕರ್ನಾಟಕ ವಿಶ್ವವಿದ್ಯಾಲಯ
ಕರ್ನಾಟಕ ವಿಶ್ವವಿದ್ಯಾಲಯ   

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ನೇಮಕಾತಿ ಹೈಕೋರ್ಟ್‌ ಮೆಟ್ಟಿಲು ಏರಿದೆ. ತಕ್ಷಣಕ್ಕೆ ಯಾವುದೇ ಕ್ರಮ ಕೈಗೊಳ್ಳದಂತೆ ಹೈಕೋರ್ಟ್‌ ಮಧ್ಯಂತರ ಆದೇಶ ನೀಡಿದೆ.

ಧಾರವಾಡ ಹೈಕೋರ್ಟ್‌ ಪೀಠದ ನ್ಯಾಯಮೂರ್ತಿ ಪ್ರೊ.ಪ್ರದೀಪ್‌ ಸಿಂಗ್‌ ಯೆರೂರು ಅವರು ಈ ಆದೇಶ ನೀಡಿದ್ದಾರೆ. ರಾಜ್ಯಪಾಲರು, ಉನ್ನತ ಶಿಕ್ಷಣ ಇಲಾಖೆ ಕಾಯದರ್ಶಿ, ಕವಿವಿ ಆಡಳಿತಾಂಗ ಕುಲಸಚಿವರ ಪ್ರತಿನಿಧಿಗಳು ಮತ್ತು ಪ್ರೊ.ಎ.ಎಂ.ಖಾನ್‌ ಅವರಿಗೆ ನೋಟಿಸ್‌ ಜಾರಿಗೊಳಿಸಲು ಸೂಚಿಸಿದ್ದಾರೆ. ಜುಲೈ 23ಕ್ಕೆ ಮುಂದಿನ ವಿಚಾರಣೆ ನಿಗದಿಯಾಗಿದೆ.

ಮಂಗಳೂರು ವಿಶ್ವವಿದ್ಯಾಲಯ ಎಲೆಕ್ಟ್ರಾನಿಕ್ಸ್‌ ವಿಭಾಗದ ಪ್ರೊ. ಎ.ಎಂಖಾನ್‌ ಅವರನ್ನು ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿಯಾಗಿ ನೇಮಿಸಿ, ಜುಲೈ 5ರಂದು ಆದೇಶ ಹೊರಡಿಸಲಾಗಿತ್ತು. ಪ್ರೊ.ಖಾನ್‌ ಅವರು ಜುಲೈ 7ರಂದು ಅಧಿಕಾರ ವಹಿಸಿಕೊಂಡಿದ್ದಾರೆ.

ADVERTISEMENT

ಕುಲಪತಿ ಹುದ್ದೆ ಆಕಾಂಕ್ಷಿಗಳಲ್ಲಿ ಒಬ್ಬರಾದ ಕರ್ನಾಟಕ ವಿಶ್ವವಿದ್ಯಾಲಯ ರಸಾಯನಶಾಸ್ತ್ರ ಅಧ್ಯಯನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಮಹದೇವಪ್ಪ ಕರಿದುರಗನವರ ಅವರು ಹೈಕೋರ್ಟ್‌ ಧಾರವಾಡ ಪೀಠದಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದಾರೆ. 

‘ಕುಲಪತಿ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಎಲ್ಲರ ಅರ್ಹತೆ ಪರಿಗಣಿಸಿದರೆ, ಎಲ್ಲದರಲ್ಲೂ ನಾನು ಮುಂಚೂಣಿಯಲ್ಲಿದ್ದೇನೆ. ಪ್ರತಿಭೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ‌ನನ್ನನ್ನು ಕುಲಪತಿ ಹುದ್ದೆಗೆ ಪರಿಗಣಿಸಬೇಕಿತ್ತು. ಹೀಗಾಗಿ, ನೇಮಕಾತಿ ಪ್ರಶ್ನಿಸಿ ಕೋರ್ಟ್‌ ಮೆಟ್ಟಿಲು ಏರಿದ್ದೇನೆ’ ಎಂದು ಪ್ರೊ.ಮಹದೇವಪ್ಪ ಕರಿದುರಗನವರ ’ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.