ADVERTISEMENT

ಧಾರವಾಡ| ಅಪ್ಸರಕೊಂಡ ಅಭಯಾರಣ್ಯ ಯೋಜನೆಗೆ ಸಿದ್ಧತೆ: ವೈಶಾಲಿ ಕುಲಕರ್ಣಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 5:17 IST
Last Updated 17 ಅಕ್ಟೋಬರ್ 2025, 5:17 IST
ವೈಶಾಲಿ ಕುಲಕರ್ಣಿ
ವೈಶಾಲಿ ಕುಲಕರ್ಣಿ   

ಧಾರವಾಡ: ‘ಉತ್ತರ ಕನ್ನಡ ಜಿಲ್ಲೆಯಲ್ಲಿ ಅಪ್ಸರಕೊಂಡ ಕೋಸ್ಟಲ್‌ ವನ್ಯಜೀವಿ ಅಭಯಾರಣ್ಯ ಘೋಷಣೆಗೆ ಉದ್ದೇಶಿಸಲಾಗಿದ್ದು, ಈ ನಿಟ್ಟಿನಲ್ಲಿ ಚರ್ಚೆಗಳು ನಡೆದಿವೆ’ ಎಂದು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯೆ ವೈಶಾಲಿ ಕುಲಕರ್ಣಿ ತಿಳಿಸಿದರು.

ಇಲ್ಲಿನ ಜರ್ನಲಿಸ್ಟ್‌ ಗಿಲ್ಡ್‌ನಲ್ಲಿ ಗುರುವಾರ ನಡೆದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು.

‘ಅಪ್ಸರಕೊಂಡ ಅಭಯಾರಣ್ಯ ಘೋಷಣೆಯಾದರೆ ಅನುಕೂಲವಾಗಲಿದೆ. ಕರಾವಳಿ ಪ್ರದೇಶದ ಹೊನ್ನಾವರ ಭಾಗದ ‘ವೇಲ್‌’ ಸೇರಿದಂತೆ ವಿವಿಧ ಅಪರೂಪದ ಪ್ರಾಣಿಗಳ ಸಂರಕ್ಷಣೆಗೆ ಈ ಯೋಜನೆ ನೆರವಾಗಲಿದೆ’ ಎಂದು ಹೇಳಿದರು.

ADVERTISEMENT

‘ಬೆಂಗಳೂರಿನ ಹೆಸರುಘಟ್ಟ ಕಾಡನ್ನು ‘ಗ್ರೇಟರ್‌ ಹೆಸರುಘಟ್ಟ’ ಆಗಿಸುವ ಯೋಜನೆ ತಯಾರಿಗೆ ಚಿಂತನೆ ನಡೆದಿದೆ. ಈ ಯೋಜನೆ ಜಾರಿಗೊಳಿಸಿದರೆ ಅರಣ್ಯ ದಟ್ಟವಾಗಿಸಲು ಅನುಕೂಲವಾಗಲಿದೆ. ಅಲ್ಲಿನ ಅಪರೂಪದ ಪ್ರಾಣಿಗಳನ್ನು ರಕ್ಷಿಸಬಹುದು. ಶಿವಮೊಗ್ಗ ಸಮೀಪದ ಶೆಟ್ಟಿಹಳ್ಳಿ ಸಮೀಪದ ಅರಣ್ಯ ದಟ್ಟಗೊಳಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲು ಸಹ ಚಿಂತನೆ ನಡೆದಿದೆ’ ಎಂದು ತಿಳಿಸಿದರು.

‘ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವುದು ಮಂಡಳಿಯ ಪ್ರಮುಖ ಉದ್ದೇಶವಾಗಿದೆ. ಕಾಡುಗಳಲ್ಲಿ ಅತಿಕ್ರಮಣ, ಮಾನವ ಹಸ್ತಕ್ಷೇಪ ಹೆಚ್ಚಿದೆ. ಕಾಡುಪ್ರಾಣಿಗಳ ಸಂರಕ್ಷಣೆ ಕುರಿತು ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನೂ ಮಂಡಳಿ ಮಾಡುತ್ತಿದೆ’ ಎಂದರು.

‘ಕೆಲವೆಡೆ ಅನಧಿಕೃತವಾಗಿ ಹೋಮ್‌ ಸ್ಟೇಗಳನ್ನು ನಿರ್ಮಿಸಿಕೊಂಡಿದ್ದಾರೆ. ಕೆಲವರು ಅರಣ್ಯ ಜಾಗ ಅತಿಕ್ರಮಿಸಿದ್ಧಾರೆ. ಪ್ರಾಣಿ ಬೇಟೆ ತಡೆ ನಿಟ್ಟಿನಲ್ಲಿ ಸರ್ಕಾರವು ಬೇಟೆ ನಿಗ್ರಹ ಶಿಬಿರಗಳನ್ನು ಸ್ಥಾಪಿಸಲು ಕ್ರಮ ವಹಿಸಿದೆ. ನಮ್ಮ ಹೊಲ–ನಮ್ಮ ರಸ್ತೆ ಯೋಜನೆಯಡಿ ರಸ್ತೆ ನಿರ್ಮಿಸಿ, ಸುಮಾರು 30 ಸಾವಿರ ಗಿಡಗಳನ್ನು ನಡೆಲಾಗಿದೆ. ಈ ಯೋಜನೆ ಮುಂದುವರಿದಿದೆ’ ಎಂದು ಪ್ರತಿಕ್ರಿಯಿಸಿದರು.

ಗಿಲ್ಡ್‌ ಅಧ್ಯಕ್ಷ ಬಸವರಾಜ ಹೊಂಗಲ್‌, ಕಾರ್ಯದರ್ಶಿ ನಿಜಗುಣ ದಿಂಡಲಕೊಪ್ಪ ಇದ್ದರು.

‘ಮರಗಳ ಹನನ; ನಮಗೆ ಸಂಬಂಧವಿಲ್ಲ’

‘ಧಾರವಾಡ ತಾಲ್ಲೂಕಿನ ಬಣದೂರು ಶಾಖೆಯ ಹಳ್ಳಿಗೇರಿ ಮೀಸಲು ಅರಣ್ಯ ಪ್ರದೇಶ ಸಮೀಪದಲ್ಲಿ ನಾವು ಜಮೀನು ಖರೀದಿಸಿದ್ದೇವೆ. ಆದರೆ ಆ ಅರಣ್ಯದಲ್ಲಿ ಈಚೆಗೆ ರಸ್ತೆಗಾಗಿ ಮರಗಳನ್ನು ಕಡಿದಿರುವುದಕ್ಕೂ ನಮ್ಮ ಕುಟುಂಬಕ್ಕೂ ಸಂಬಂಧ ಇಲ್ಲ’ ಎಂದು ವೈಶಾಲಿ ಕುಲಕರ್ಣಿ ಸ್ಪಷ್ಟಪಡಿಸಿದರು. ‘ಮರಗಳ ಹನನ ಪ್ರಕರಣ ನಡೆದಾಗ ನಾವು ಜಾಗ ಖರೀದಿಸಿರಲಿಲ್ಲ. ಬೇಕಾದರೆ ದಾಖಲೆ ಪರಿಶೀಲಿಸಬಹುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.