ADVERTISEMENT

ಮಾಹಿತಿ ತಂತ್ರಜ್ಞಾನ; ಕರ್ನಾಟಕ ಸದೃಢ: ಪ್ರಿಯಾಂಕ್‌ ಖರ್ಗೆ

ಇನ್ಫೊಸಿಸ್‌ ಕ್ಯಾಂಪಸ್‌ನಲ್ಲಿ ಎಐ, ಬಾಹ್ಯಾಕಾಶ ತಂತ್ರಜ್ಞಾನ ಕೇಂದ್ರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 21:59 IST
Last Updated 6 ಆಗಸ್ಟ್ 2025, 21:59 IST
ಹುಬ್ಬಳ್ಳಿಯ ಹೊರವಲಯದಲ್ಲಿರುವ ಇನ್ಫೊಸಿಸ್‌ ಕ್ಯಾಂಪಸ್‌ನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಗತಿಗೆ ಶ್ರಮಿಸಿದ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಸಚಿವರಾದ ಪ್ರಿಯಾಂಕ್‌ ಖರ್ಗೆ, ಎಂ.ಬಿ. ಪಾಟೀಲ ಪಾಲ್ಗೊಂಡಿದ್ದರು 
ಹುಬ್ಬಳ್ಳಿಯ ಹೊರವಲಯದಲ್ಲಿರುವ ಇನ್ಫೊಸಿಸ್‌ ಕ್ಯಾಂಪಸ್‌ನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಗತಿಗೆ ಶ್ರಮಿಸಿದ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಸಚಿವರಾದ ಪ್ರಿಯಾಂಕ್‌ ಖರ್ಗೆ, ಎಂ.ಬಿ. ಪಾಟೀಲ ಪಾಲ್ಗೊಂಡಿದ್ದರು    

ಹುಬ್ಬಳ್ಳಿ: ‘ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕವು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ವಿಯೆಟ್ನಾಂ, ಯೂರೋಪ್‌ಗೆ ಪೈಪೋಟಿ ಕೊಡುವಷ್ಟು ಸದೃಢವಾಗಿದೆ’ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ನಗರದ ಹೊರವಲಯದ ಇನ್ಫೊಸಿಸ್‌ ಕ್ಯಾಂಪಸ್‌ನಲ್ಲಿ ಬುಧವಾರ ಕೃತಕ ಬುದ್ಧಿಮತ್ತೆ (ಎಐ), ಸೈಬರ್ ಭದ್ರತೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ‘ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ 23 ಮಾಹಿತಿ ತಂತ್ರಜ್ಞಾನ ಕಂಪನಿಗಳು ಸ್ಥಾಪನೆಯಾಗಿದ್ದು, ಇನ್ನೂ 40ಕ್ಕೂ ಹೆಚ್ಚು ಕಂಪನಿಗಳು ಆಸಕ್ತಿ ತೋರಿವೆ. ಒಂದು ಸಾವಿರ ನವೋದ್ಯಮಗಳಲ್ಲಿ, ಹುಬ್ಬಳ್ಳಿಯಲ್ಲೇ 120 ಕಂಪನಿಗಳು ಸ್ಥಾಪನೆಯಾಗಿವೆ’ ಎಂದರು.

‘ರಾಜ್ಯದಲ್ಲಿರುವ ಮೂಲಸೌಲಭ್ಯಗಳನ್ನು ಅರಿತು ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ಉದ್ಯಮಿಗಳು ಉತ್ಸುಕತೆ ತೋರುತ್ತಿದ್ದಾರೆ. ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದಲ್ಲೂ ಬಹುದೊಡ್ಡ ಪ್ರಗತಿ ಸಾಧಿಸುತ್ತಿದ್ದೇವೆ. ಐದು ವರ್ಷಗಳಿಂದ ಇದೇ ಹುಬ್ಬಳ್ಳಿಯ ಇನ್ಫೊಸಿಸ್‌ ಕ್ಯಾಂಪಸ್‌ನಲ್ಲಿಯೇ ಎಐ ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದೆ. ಪ್ರತಿ ಕ್ಷೇತ್ರದಲ್ಲೂ ನಾವು ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ. ಆದರೆ, ಯಾವುದೇ ಪ್ರಗತಿ ಆಗಿಲ್ಲ ಎನ್ನುವಂತೆ ವಿರೋಧ ಪಕ್ಷಗಳು ಟೀಕಿಸುತ್ತಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಮಾತನಾಡಿ, ‘ಬಿಯಾಂಡ್‌ ಬೆಂಗಳೂರು ಕಲ್ಪನೆಯಂತೆ ಹುಬ್ಬಳ್ಳಿಯೂ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಗತಿಯತ್ತ ಸಾಗಬೇಕು. ಅದಕ್ಕೆ ಪೂರಕ ವಾತಾವರಣ ಸಹ ಇಲ್ಲಿದ್ದು, ಉದ್ಯಮಗಳು ಇಲ್ಲಿ ಕಾರ್ಯಾರಂಭ ಮಾಡಬೇಕು. ಈ ನಿಟ್ಟಿನಲ್ಲಿ ಇನ್ಫೊಸಿಸ್‌ ಸಾಕಷ್ಟು ಕೊಡುಗೆ ನೀಡುತ್ತಿದೆ’ ಎಂದರು.

‘ಇನ್ಫೊಸಿಸ್‌ ಹುಬ್ಬಳ್ಳಿ ಕ್ಯಾಂಪಸ್‌ನಲ್ಲಿ ಉದ್ಯೋಗಿಗಳ ಸಂಖ್ಯೆ ಒಂದು ಸಾವಿರ ತಲುಪಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ಸ್ಥಳೀಯ ಪ್ರತಿಭಾವಂತರಿಗೆ ಎಐ ಮತ್ತು ಸೈಬರ್‌ ಭದ್ರತೆಯಂತಹ ನೂತನ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಲು ಸಹಕಾರಿಯಾಗಿದೆ. ಇದು ಬೆಂಗಳೂರಿನ ಕ್ಯಾಂಪಸ್ ಮೀರಿಸುವಷ್ಟು ದೊಡ್ಡದಾಗಿ ಬೆಳೆಯಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ ಪಾಟೀಲ, ಇನ್ಫೊಸಿಸ್‌ ಕಾರ್ಯಕಾರಿ ಉಪಾಧ್ಯಕ್ಷ ರಜನೀಶ ಮಾಳವೀಯ, ಸುನೀಲಕುಮಾರ ಧಾರೇಶ್ವರ ಇದ್ದರು.

ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯವು ವರ್ಷಕ್ಕೆ ₹4.50 ಲಕ್ಷ ಕೋಟಿ ವ್ಯವಹಾರ ನಡೆಸುತ್ತಿದೆ. ಪಕ್ಕದಲ್ಲಿರುವ ಆಂಧ್ರಪ್ರದೇಶದ ವ್ಯವಹಾರ ₹2.50 ಲಕ್ಷ ಕೋಟಿಯಷ್ಟಿದೆ. ನಾವು ವೇಗವಾಗಿ ಮುನ್ನಡೆದಿದ್ದೇವೆ.
ಪ್ರಿಯಾಂಕ್ ಖರ್ಗೆ ಮಾಹಿತಿ ತಂತ್ರಜ್ಞಾನ ಸಚಿವ
ಕೈಗಾರಿಕಾ ಕ್ಷೇತ್ರದಲ್ಲಿ ಎಐ-ಚಾಲಿತ ಡಿಜಿಟಲ್ ಪರಿಹಾರ ನೀಡುವಲ್ಲಿ ಈ ಹೊಸ ಲಿವಿಂಗ್ ಲ್ಯಾಬ್ ಮಹತ್ವದ ಹೆಜ್ಜೆಯಾಗಿದೆ. ಅತ್ಯಾಧುನಿಕ ಮೂಲಸೌಲಭ್ಯ ಎಐ- ಫಸ್ಟ್ ವಿಧಾನದೊಂದಿಗೆ ಕೇಂದ್ರ ಸ್ಥಾಪನೆಯಾಗಿದೆ.
ಸುನೀಲಕುಮಾರ್‌ ಧಾರೇಶ್ವರ್ ಕಾರ್ಯನಿರ್ವಾಹಕ ಉಪಾಧ್ಯಕ್ಷ ಇನ್ಫೊಸಿಸ್

Cut-off box - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.