ADVERTISEMENT

ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಮಾರಾಟ: ಐವರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2020, 13:38 IST
Last Updated 27 ಫೆಬ್ರುವರಿ 2020, 13:38 IST

ಹುಬ್ಬಳ್ಳಿ: ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಮಾರಾಟ ಮಾಡಿದ ಆರೋಪದ ಮೇಲೆ ವಿದ್ಯಾನಗರ ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.

ಕೃಷ್ಣಾ ದೇಶಪಾಂಡೆ ಹಾಗೂ ಅವರ ಪತ್ನಿ ಗೀತಾ ಗಣಾಚಾರಿ ನೀಡಿದ ದೂರಿನ ಮೇರೆಗೆ ಕುಂದಗೋಳ ತಾಲ್ಲೂಕಿನ ಕಡಪಟ್ಟಿಯ ಶಿವಾನಂದ ಬಿಡ್ನಾಳ, ಹಳೇ ಹುಬ್ಬಳ್ಳಿಯ ಮಹ್ಮದ ರಫೀಕ ಹುಸೇನಸಾಬ ಕಮಲಾಪೂರ, ರಿಯಾಜ್‌ ಅಹ್ಮದ್ ಶಿರಹಟ್ಟಿ, ಜಗದೀಶ ಹೆಸರೆಡ್ಡಿ, ಮಹ್ಮದ ರಫೀಕ ಹುಸೇನಸಾಬಾ ಕಮಲಾಪೂರ ಹಾಗೂ ಮಹಿಳೆಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಮುಖ ಆರೋಪಿ ಶಿವಾನಂದ ಮಹಿಳೆಯೊಬ್ಬರ ಜತೆ ಸೇರಿ, ದೂರುದಾರರಿಗೆ ಸೇರಿದ ಕೇಶ್ವಾಪುರದ ಯುರೇಕಾ ಕಾಲೊನಿಯ 2ನೇ ಕ್ರಾಸ್‌ನ ಪ್ಲಾಟ್ ನಂ. 1ರ ಆಸ್ತಿಗೆ ತಾವೇ ಮಾಲೀಕರು ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ.

ADVERTISEMENT

ಬಳಿಕ, ಹುಬ್ಬಳ್ಳಿ ನೋಂದಣಾಧಿಕಾರಿ ಕಚೇರಿಯಲ್ಲಿ ದಾಖಲೆಗಳನ್ನು ಹಾಜರುಪಡಿಸಿ, ಪ್ಲಾಟ್ ಅನ್ನು ಮಹ್ಮದ ರಫೀಕ ಹುಸೇನಸಾಬ ಅವರಿಗೆ ಮಾರಾಟ ಮಾಡಿದ್ದ. ಇದಕ್ಕೆ ಜಗದೀಶ ಹೆಸರೆಡ್ಡಿ ಮತ್ತು ರಿಯಾಜ್ ಅಹ್ಮದ್ ಶಿರಹಟ್ಟಿ ಸಾಕ್ಷಿದಾರರಾಗಿ ಸಹಿ ಮಾಡಿದ್ದರು.

ಮಹ್ಮದ ರಫೀಕ ಈ ಆಸ್ತಿಯನ್ನು ಪರಶುರಾಮ ಕಾಶೀನಾಥಸಾ ಪಾಟೀಲ ಅವರಿಗೆ ಖರೀದಿ ಸಂಚಗಾರ ಪತ್ರ ಮಾಡಿಕೊಂಡು ₹10 ಲಕ್ಷಕ್ಕೆ ಮಾರಾಟ ಮಾಡುವ ಮೂಲಕ, ದೇಶಪಾಂಡೆ ದಂಪತಿಗೆ ವಂಚಿಸಿದ್ದ ಎಂದು ವಿದ್ಯಾನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಏಜೆಂಟರಿಂದ ದಾಖಲೆ ಪರಿಶೀಲನೆ– ಆರೋಪ ಅಲ್ಲಗಳೆದ ಆರ್‌ಟಿಒ
ನಗರದ ಪೂರ್ವ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಕೆಲ ಅಧಿಕಾರಿಗಳು ಏಜೆಂಟರೊಂದಿಗೆ ರಾತ್ರಿ ವೇಳೆ ದಾಖಲೆಗಳ ಪರಿಶೀಲನೆ ಮಾಡಿರುವ ಆರೋಪ ಕೇಳಿ ಬಂದಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಆರ್‌ಟಿಒ ಅಪ್ಪಯ್ಯ ನಾಲತವಾಡಮಠ, ‘ಕಚೇರಿಯಲ್ಲಿದ್ದ ಕಡತಗಳನ್ನು ಕೆಲವರ ನೆರವಿನೊಂದಿಗೆ ಸಿಬ್ಬಂದಿ ಜೋಡಿಸುತ್ತಿದ್ದರು. ಆ ದೃಶ್ಯವನ್ನು ಯಾರೊ ಮೊಬೈಲ್‌ನಲ್ಲಿ ಕ್ಲಿಕ್ ಮಾಡಿಕೊಂಡು, ಸುಳ್ಳು ಸುದ್ದಿ ಹಬ್ಬಿಸಿದ್ದಾರೆ’ ಎಂದರು.

‘ಕಚೇರಿಯಲ್ಲಿ ಪಾರದರ್ಶಕತೆ ಮತ್ತು ಏಜೆಂಟರ ತಡೆಗಾಗಿ, ಎಲ್ಲಾ ಕಡೆ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ನಾನೇ ಎಲ್ಲಾ ವಿಭಾಗಗಳ ಮೇಲೂ ನಿಗಾ ಇಡುತ್ತಿರುತ್ತೇನೆ. ಸಾರ್ವಜನಿಕರೂ ಏನೇ ಕೆಲಸಗಳಿದ್ದರೂ, ನೇರವಾಗಿ ಅಧಿಕಾರಿಗಳನ್ನು ಭೇಟಿ ಮಾಡಬೇಕು’ ಎಂದು ಹೇಳಿದರು.

ರೀಫಂಡ್ ಹೆಸರಲ್ಲಿ ವಂಚನೆ:ಗೂಗಲ್ ಪೇ ಮೊಬೈಲ್ ಆ್ಯಪ್‌ನಲ್ಲಿ ವರ್ಗಾವಣೆಯಾಗದಿದ್ದರೂ ಖಾತೆಯಿಂದ ಕಡಿತಗೊಂಡಿದ್ದ ಹಣ ರೀಫಂಡ್ ಮಾಡಿಕೊಡುವ ಹೆಸರಲ್ಲಿ ವ್ಯಕ್ತಿಯೊಬ್ಬರಿಗೆ ₹41,864 ವಂಚಿಸಲಾಗಿದೆ.

ಧಾರವಾಡದ ಜೈರಾಜ್ ಹೆಗಡೆ ವಂಚನೆಗೊಳಗಾದವರು. ಫೆ. 26ರಂದು ಹೆಗಡೆ ಅವರು, ಆ್ಯಪ್ ಮೂಲಕ ಒಬ್ಬರಿಗೆ ಹಣ ವರ್ಗಾಯಿಸಿದ್ದರು. ಆದರೆ, ಅವರಿಗೆ ಹಣ ತಲುಪಿರಲಿಲ್ಲ. ಆದರೆ, ಖಾತೆಯಿಂದ ಹಣ ಕಡಿತಗೊಂಡಿತ್ತು. ಆಗ 89277 59687 ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿದ ವ್ಯಕ್ತಿಯೊಬ್ಬ ತಾನು ಗೂಗಲ್ ಪೇ ಕಂಪನಿ ಕಡೆಯಿಂದ ಮಾತನಾಡುತ್ತಿದ್ದು, ನಿಮ್ಮ ಹಣವನ್ನು ರೀಫಂಡ್ ಮಾಡಿಕೊಡುವುದಾಗಿ ಹೇಳಿದ್ದಾನೆ.

ಆತನ ಸೂಚನೆಯಂತೆ, ಹೆಗಡೆ ತಮ್ಮ ಬ್ಯಾಂಕ್ ಖಾತೆ ವಿವರ, ಯುಪಿಐ ಸಂಖ್ಯೆಯನ್ನು ನೀಡಿದ್ದಾರೆ. ಇದಾದ ಕೆಲ ಹೊತ್ತಿನಲ್ಲೇ ಅವರ ವಿಜಯ ಬ್ಯಾಂಕ್ ಖಾತೆಯಿಂದ ₹26,450 ಹಾಗೂ ಎಕ್ಸಿಸ್ ಬ್ಯಾಂಕ್ ಖಾತೆಯಿಂದ ₹15,414 ಮೊತ್ತವನ್ನು ಹಂತ ಹಂತವಾಗಿ ವರ್ಗಾಯಿಸಿಕೊಂಡು ವಂಚಿಸಿದ್ದಾನೆ ಎಂದು ಸೈಬರ್ ಠಾಣೆ ಪೊಲೀಸರು ತಿಳಿಸಿದ್ದಾರೆ.

ಬೈಕ್ ಕಳವು:ನಗರದ ಗದಗ ರಸ್ತೆಯಲ್ಲಿರುವ ರೈಲು ನಿಲ್ದಾಣದ ಎರಡನೇ ದ್ವಾರದ ಬಳಿ ಗೋಪನಕೊಪ್ಪ ನಿವಾಸಿ ಬಸವರಾಜ ಪೂಜಾರಿ ಪಲ್ಸರ್ ಬೈಕ್ ಅನ್ನು ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ. ಫೆ. 18ರಂದು ಪೂಜಾರಿ ಅವರು ಬೈಕ್ ನಿಲ್ಲಿಸಿದ್ದರು. ಕೆಲ ಹೊತ್ತಿನ ಬಳಿಕ ಬಂದು ನೋಡಿದಾಗ ಬೈಕ್ ಸ್ಥಳದಲ್ಲಿರಲಿಲ್ಲ ಎಂದು ಕೇಶ್ವಾಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.

ದಂಡ ವಸೂಲಿ:ಅ ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕಾರ್ಯಾಚರಣೆ ನಡೆಸಿರುವ ಅವಳಿನಗರದ ಸಂಚಾರ ಪೊಲೀಸರು 454 ಪ್ರಕರಣ ದಾಖಲಿಸಿ, ₹2.75 ಲಕ್ಷ ದಂಡ ವಸೂಲಿ ಮಾಡಿದ್ದಾರೆ.

ಪತ್ನಿ ಹಂತಕನಿಗೆ ಜೀವಾವಧಿ ಶಿಕ್ಷೆ
ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ ಅಪರಾಧಿಗೆ, ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್‌ ಜೀವಾವಧಿ ಶಿಕ್ಷೆ ಹಾಗೂ ₹20 ಸಾವಿರ ದಂಡ ವಿಧಿಸಿದೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಮುದಕವಿಯ ಮುಸ್ತಾಫ ಮೌಲಾಸಾಬ ಗುಲ್ಲಾಶಿ ಶಿಕ್ಷೆಗೊಳಗಾದ ಅಪರಾಧಿ. ನ್ಯಾಯಾಧೀಶ ಬಿರಾದಾರ ದೇವೇಂದ್ರಪ್ಪ ಎನ್. ಅವರು ಶಿಕ್ಷೆ ಪ್ರಕಟಿಸಿದರು. ಪ್ರಾಸಿಕ್ಯೂಷನ್ ಪರವಾಗಿ ಸರೋಜಾ ಜಿ. ಹೊಸಮನಿ ವಾದ ಮಂಡಿಸಿದ್ದರು.

ಸವದತ್ತಿ ತಾಲ್ಲೂಕಿನ ಆಶಾ ಅವರನ್ನು ಮದುವೆಯಾಗಿದ್ದ ಮುಸ್ತಾಫಾ ಮತ್ತೊಂದು ಮದುವೆ ಮಾಡಿಕೊಳ್ಳುವ ಉದ್ದೇಶ ಹೊಂದಿದ್ದ. ಅದಕ್ಕಾಗಿ, 2017ರಲ್ಲಿ ಪತ್ನಿಯನ್ನು ಹುಬ್ಬಳ್ಳಿಯ ಬ್ಯಾಳಿ ಪ್ಲಾಟ್‌ನಲ್ಲಿರುವ ತನ್ನ ಸಂಬಂಧಿಕರ ಮನೆಗೆ ಕರೆದೊಯ್ದು ಕೊಲೆ ಮಾಡಿದ್ದ. ಬೆಂಡಿಗೇರಿ ಠಾಣೆಯ ಅಂದಿನ ಇನ್‌ಸ್ಪೆಕ್ಟರ್ ವಿನೋದ ಮುಕ್ತೇದಾರ್ ಪ್ರಕರಣದ ವಿಚಾರಣೆ ನಡೆಸಿ, ಆರೋಪಪಟ್ಟಿ ಸಲ್ಲಿಸಿದ್ದರು.

ಮನೆಗಳ್ಳತನ: ಇಬ್ಬರಿಗೆ 2 ವರ್ಷ ಜೈಲು
ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಲ್ಲಿನ ಜೆಎಂಎಫ್‌ಸಿ ಒಂದನೇ ನ್ಯಾಯಾಲಯ ಇಬ್ಬರಿಗೆ ತಲಾ 2 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹10 ಸಾವಿರ ದಂಡ ವಿಧಿಸಿದೆ. ಅಲ್ಲದೆ, ಫಿರ್ಯಾದಿಗೆ ತಲಾ ₹15 ಸಾವಿರ ನೀಡುವಂತೆ ಆದೇಶಿಸಿದೆ.

ದೇವಾಂಗಪೇಟೆಯ ಬಸವರಾಜ ಯಲ್ಲಪ್ಪ ಸೂರ್ಯವಂಶಿ ಮತ್ತು ಚಂದ್ರು ಮಹಾಬಲೇಶ್ವರ ನರಗುಂದ ಶಿಕ್ಷೆಗೊಳಗಾದವರು. ಇಬ್ಬರೂ, 2018ರಲ್ಲಿ ಯಲ್ಲಪ್ಪ ಶಿರುಗಪ್ಪಿ ಅವರ ಮನೆಯಲ್ಲಿ ಬಂಗಾರದ ಓಲೆ ಹಾಗೂ ₹85 ಸಾವಿರ ನಗದು ಕದ್ದಿದ್ದರು.

ನ್ಯಾಯಾಧೀಶ ಸುಶಾಂತ ಮಹಾವೀರ ಚೌಗಲೆ ಅವರು, ಅಪರಾಧಿಗಳಿಗೆ ಶಿಕ್ಷೆ ಪ್ರಕಟಿಸಿದರು. ದಂಡ ಪಾವತಿಸದಿದ್ದರೆ, ಹೆಚ್ಚುವರಿಯಾಗಿ ಒಂದು ತಿಂಗಳು ಸಾದಾ ಸೆರೆಮನೆ ವಾಸ ಅನುಭವಿಸುವಂತೆ ಆದೇಶಿಸಿದರು. ಪ್ರಾಸಿಕ್ಯೂಷನ್ ಪರವಾಗಿ, ಶ್ರೀಕಾಂತ ದಯಣ್ಣವರ್ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.