
ಹುಬ್ಬಳ್ಳಿ: ತಲೆತಲಾಂತರಗಳಿಂದ ಪಾರಂಪರಿಕ ಕೃಷಿ ಮಾಡಿಕೊಂಡು ಬಂದಿರುವ ಕುಂದಗೋಳ ತಾಲ್ಲೂಕಿನ ತೀರ್ಥ ಗ್ರಾಮದ ಬಸವರಾಜ ಮುಂದಿನಮನಿ ಅವರ ಕುಟುಂಬ, ಈಚೆಗೆ 15 ಎಕರೆಯಲ್ಲಿ ಸಿರಿಧಾನ್ಯಗಳನ್ನು ಬೆಳೆದು ಲಾಭ ಕಂಡುಕೊಂಡಿದೆ.
70 ಸದಸ್ಯರಿರುವ ಇವರ ಕುಟುಂಬದವರೆಲ್ಲ ಒಟ್ಟು 65 ಎಕರೆ ಹೊಲದಲ್ಲಿ ಶ್ರದ್ಧೆಯಿಂದ ದುಡಿಯುತ್ತಾರೆ. ಕೃಷಿಯ ನೂತನ ಆವಿಷ್ಕಾರಗಳನ್ನು ತಮ್ಮ ಕಾಯಕದಲ್ಲಿ ಅಳವಡಿಸಿಕೊಳ್ಳುತ್ತ ಸಾಗಿರುವ ಬಸವರಾಜ ಮುಂದಿನಮನಿ ಸದ್ಯ 15 ಎಕರೆಯಲ್ಲಿ ಪೂರ್ಣ ಸಾವಯವ ಕೃಷಿ ಮಾಡುತ್ತಿದ್ದಾರೆ. ಅದರಲ್ಲಿ ರಾಗಿ, ಸಾಮೆ, ಭತ್ತ, ಜೋಳ, ಕೊರಲೆ, ಬರಗು ಬೆಳೆಯುತ್ತಾರೆ. 2 ಎಕರೆಯಲ್ಲಿ ಮನೆಗಾಗಿ ತರಕಾರಿ ಬೆಳೆಯುತ್ತಾರೆ. ಉಳಿದ ಭೂಮಿಯಲ್ಲಿ ಗೋವಿನ ಜೋಳವನ್ನು ಬೆಳೆಯುತ್ತಾರೆ.
ಎಮ್ಮೆ–ಆಕಳು–ಎತ್ತು–ಕುರಿ ಸೇರಿ ಒಟ್ಟು 60 ದನಕರುಗಳನ್ನು ಸಾಕಿದ್ದು, ಇದರಿಂದ ವರ್ಷಕ್ಕೆ 40 ಟ್ರ್ಯಾಕ್ಟರ್‌ಗಳಷ್ಟು ತಿಪ್ಪೆ ಗೊಬ್ಬರ ಸಿದ್ಧವಾಗುತ್ತದೆ. ಇದು ಇವರ ಹೊಲಕ್ಕೆ ಸಾಕಾಗುವಷ್ಟಾಗುತ್ತದೆ. ವರ್ಷವೂ ಕುರಿಗೊಬ್ಬರಕ್ಕಾಗಿ ಕುರಿಗಳನ್ನು ಹೊಲದಲ್ಲಿ ಹಾಯಿಸಲಾಗುತ್ತದೆ.
‘ಕೊರಲೆ ಹಾಗೂ ಬರಗು ಬೆಳೆಯನ್ನು ಕಳೆದ 3 ವರ್ಷಗಳಿಂದ ತಲಾ 5 ಎಕರೆಯಷ್ಟು ಬೆಳೆದಿದ್ದೇವೆ. ಎಕರೆಗೆ ₹ 80 ಸಾವಿರದಷ್ಟು ಲಾಭವಾಗಿದೆ. ಹಿಂಗಾರು ಬೆಳೆಯಾಗಿ ಬೆಳೆಯುತ್ತಿದ್ದು ರೋಗ ಬಾಧೆ, ನಷ್ಟ ಆಗಿಲ್ಲ. ಈ ವರ್ಷ ಅತಿವೃಷ್ಟಿಯಿಂದಾಗಿ ಗೋವಿನಜೋಳ ಬೆಳೆ ಅರ್ಧದಷ್ಟು ಹಾಳಾಗಿದೆ. 4 ಕೊಳವೆ ಬಾವಿಗಳಿವೆ. ಮಳೆಗಾಲದಲ್ಲಿ ಭತ್ತ, ರಾಗಿ, ಸಾಮೆ ಬೆಳೆಯುತ್ತಿದ್ದೇವೆ’ ಎಂದು ಅವರು ತಿಳಿಸಿದರು.
‘ಸಹಜ ಸಮೃದ್ಧಿ ಸಂಸ್ಥೆ ಹಾಗೂ ತೀರ್ಥ ಗ್ರಾಮದ ದೇವಧಾನ್ಯ ರೈತ ಉತ್ಪಾದಕರ ಕಂಪನಿ ಸಿರಿಧಾನ್ಯಗಳನ್ನು ಬೆಳೆಯುವ ಬಗ್ಗೆ ಮಾಹಿತಿ ಹಾಗೂ ತರಬೇತಿ ನೀಡಿವೆ. ಬೆಳೆದ ಸಿರಿಧಾನ್ಯಗಳನ್ನು ದೇವಧಾನ್ಯ ರೈತ ಉತ್ಪಾದಕರ ಕಂಪನಿಯೇ ಖರೀದಿಸುತ್ತಿದೆ ಹೀಗಾಗಿ ಮಾರುಕಟ್ಟೆಯ ಸಮಸ್ಯೆ ಇಲ್ಲ’ ಎಂದು ಬಸವರಾಜ ವಿವರಿಸಿದರು.
ರಾಗಿ ನಾಟಿ ವಿಶೇಷ: ಬಹುತೇಕ ರಾಗಿ ಬೆಳೆಯುವವರು ಬಿತ್ತನೆ ಮಾಡುವುದು ಸಾಮಾನ್ಯ. ಆದರೆ ಬಸವರಾಜ ಅವರು ರಾಗಿ ಸಸಿ ಮಡಿ ಸಿದ್ಧಪಡಿಸಿ ನಾಟಿ ಮಾಡುತ್ತಾರೆ. ಇದರಿಂದ ಎಕರೆಗೆ 4 ಕೆ.ಜಿ ರಾಗಿ ನಾಟಿ ಮಾಡಲು ಸಾಕಾಗುತ್ತದೆ. ಬಿತ್ತನೆ ಮಾಡಲು ಹೋದರೆ ಅಂದಾಜು ಎಕರೆಗೆ 15 ಕೆ.ಜಿಯಾದರೂ ರಾಗಿ ಬೇಕಾಗುತ್ತದೆ.
‘ರಾಗಿ ನಾಟಿ ಪದ್ಧತಿಯಿಂದ ಉತ್ತಮ ಇಳುವರಿ ಬರುತ್ತಿದೆ. ಒಂದು ಗಿಡದಲ್ಲಿ 80ರಿಂದ 100 ತೆನೆಗಳು ಬರುತ್ತವೆ. ಬಿತ್ತನೆ ಮಾಡಿದರೆ 8–10 ತೆನೆಗಳಷ್ಟೇ ಬರುತ್ತವೆ’ ಎನ್ನುವುದು ಬಸವರಾಜ ಅವರ ಅನುಭವದ ಮಾತು.
ಯಂತ್ರೋಪಕರಣಗಳಲ್ಲೂ ಸ್ವಾವಲಂಬನೆ: ಇವರ ಬಳಿ 2 ಟ್ರ್ಯಾಕ್ಟರ್, 10 ಎತ್ತುಗಳು, ಕೂರಿಗೆ, ರೂಟರ್, ರಂಟೆ, ಕುಂಟೆ, ಎಡೆಕುಂಟೆ, ಕೃಷಿಗೆ ಬೇಕಾಗುವಂಥ ಎಲ್ಲ ಸಲಕರಣೆಗಳೂ ಇವೆ. ಹೀಗಾಗಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲೂ ಇವರು ಹಿಂದೆ ಬಿದ್ದಿಲ್ಲ.
ಮೈಮುರಿದು ದುಡಿಯುವವರಿಗೆ ಜೀವನ ಆರೋಗ್ಯ ಎಲ್ಲವೂ ಚಂದಾಗಿರುತ್ತದೆ. ಮನೆಯ ಎಲ್ಲ ಸದಸ್ಯರೂ ಹೊಲದಲ್ಲಿ ದುಡಿಯುತ್ತಾರೆ. ಕೃಷಿ ಬಿಟ್ಟು ನಮಗೆ ಬೇರೆ ಕೆಲಸ ಗೊತ್ತಿಲ್ಲಬಸವರಾಜ ಮುಂದಿನಮನಿ ರೈತ
ಒಂದೇ ಬೆಳೆಯ ಮೇಲೆ ಅವಲಂಬಿತರಲ್ಲ
ಬಸವರಾಜ ಮುಂದಿನಮನಿ ಅವರು ಅಪ್ಪಟ ಕೃಷಿಕರು. ಬೆಳಗಿನಿಂದ ಸಂಜೆಯವರೆಗೂ ಹೊಲದಲ್ಲಿ ದುಡಿಯುವ ಇವರು ಒಂದೇ ಬೆಳೆಯ ಮೇಲೆ ಅವಲಂಬಿತರಾಗಿಲ್ಲ. ವೈವಿಧ್ಯಮಯ ಬೆಳೆಗಳು ಅವರ ಹೊಲದಲ್ಲಿವೆ. ಸಿರಿಧಾನ್ಯಗಳನ್ನು ಬೆಳೆಯುವುದಲ್ಲದೇ ಬೀಜಗಳನ್ನೂ ಬೆಳೆದುಕೊಡುತ್ತಿದ್ದಾರೆ. ಬಯಲುಸೀಮೆಯಲ್ಲಿ ಗೆಣಸು ಬೆಳೆಯುವುದು ಕಷ್ಟ. ಆದರೆ ಅವರು ಸಿಹಿಗೆಣಸು–ಮರಗೆಣಸುಗಳನ್ನೂ ಬೆಳೆದು ಯಶಸ್ವಿಯಾಗಿದ್ದಾರೆ. ತರಕಾರಿ ಹಾಗೂ ಕಲ್ಲಂಗಡಿಗಳನ್ನು ನೈಸರ್ಗಿಕವಾಗಿ ಬೆಳೆದಿದ್ದಾರೆ. ಈ ಕುಟುಂಬ ಮನೆಗೆ ಬೇಕಾದ ಭತ್ತ ಜೋಳ ದ್ವಿದಳ ಧಾನ್ಯ ತರಕಾರಿ ಹಣ್ಣು ಎಲ್ಲವನ್ನೂ ತಾವೇ ಬೆಳೆದುಕೊಳ್ಳುತ್ತಿದೆ ಎನ್ನುವುದೇ ವಿಶೇಷ ಎನ್ನುತ್ತಾರೆ ಸಹಜ ಸಮೃದ್ಧಿ ಸಂಸ್ಥೆಯ ಸಂಯೋಜಕರಾದ ಶಾಂತಕುಮಾರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.