
ಬೆಣ್ಣೆಹಳ್ಳ, ತುಪ್ಪರಿ ಹಳ್ಳದ ಪ್ರವಾಹ ನಿಯಂತ್ರಣಕ್ಕೆ ಕ್ರಮ | 4 ಜಿಲ್ಲೆಗಳ ರೈತರಿಗೆ ಅನುಕೂಲ | ಟೆಂಡರ್ ಅಂತಿಮ, ಭೂಮಿ ಪೂಜೆ ಶೀಘ್ರ
ಹುಬ್ಬಳ್ಳಿ: ‘ಬೆಣ್ಣೆಹಳ್ಳ ಮತ್ತು ತುಪ್ಪರಿ ಹಳ್ಳದ ಪ್ರವಾಹ ನಿಯಂತ್ರಣ ಯೋಜನೆ ಕಾಮಗಾರಿಗೆ ಸಂಬಂಧಿಸಿದ ₹1,610 ಕೋಟಿ ಮೊತ್ತದ ಕ್ರಿಯಾಯೋಜನೆ ಅನುದಾನವನ್ನು ಪೂರ್ಣವಾಗಿ ಬಿಡುಗಡೆ ಮಾಡುವ ಮೂಲಕ ಯೋಜನೆಯ ಪ್ರಸ್ತಾಪಿತ ಕಾಮಗಾರಿಗಳನ್ನು ಬೇಗ ಮುಗಿಸಬೇಕು‘ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಆಗ್ರಹಿಸಿದರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ₹200 ಕೋಟಿ ಅನುದಾನ ಬಿಡುಗಡೆ ಮಾಡಿರುವುದು ಸ್ವಾಗತಾರ್ಹ. ಆದರೆ, ಇದು ಪ್ರವಾಹ ನಿಯಂತ್ರಣ, ಹೂಳೆತ್ತುವುದು ಮತ್ತು ತಡೆಗೋಡೆ ನಿರ್ಮಾಣ ಕಾರ್ಯಕ್ಕೆ ಸಾಲುವುದಿಲ್ಲ’ ಎಂದು ಟೀಕಿಸಿದರು.
‘ವಿಜಯಪುರ ಜಿಲ್ಲೆಯ ಡೋಣಿ ನದಿ ಪ್ರವಾಹ, ಬೆಣ್ಣೆಹಳ್ಳ ಮತ್ತು ತುಪ್ಪರಿ ಹಳ್ಳದ ಪ್ರವಾಹದಿಂದಾಗಿ ವಿಜಯಪುರ ಜಿಲ್ಲೆ ಸೇರಿದಂತೆ ಧಾರವಾಡ, ಹಾವೇರಿ, ಗದಗ 4 ಜಿಲ್ಲೆಗಳ ಹಳ್ಳ/ನದಿಪಾತ್ರದ ಜಮೀನುಗಳಲ್ಲಿ ಬೆಳೆಹಾನಿಯಾಗಿ, ರೈತರಿಗೆ ತೊಂದರೆಯಾಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕೈಗೊಳ್ಳುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು 2009ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ನಾನು ನೀರಾವರಿ ಇಲಾಖೆಯ ಗಮನಕ್ಕೆ ತಂದು ಯೋಜನೆ ಕಾಮಗಾರಿಗಾಗಿ ₹1,610 ಕೋಟಿ ಮೊತ್ತದ ಡಿಪಿಆರ್ ತಯಾರಿಗೆ ಕ್ರಮವಹಿಸಲಾಯಿತು. ಆದರೀಗ ಕಾಂಗ್ರೆಸ್‌ನವರು ತಮ್ಮ ಸರ್ಕಾರದ ಯೋಜನೆ ಎಂದು ಹೇಳುತ್ತಿರುವುದು ಸರಿಯಲ್ಲ’ ಎಂದರು.
’ಇದು ಬಿಜೆಪಿ ಸರ್ಕಾರದ ಯೋಜನೆಯಾಗಿದೆ. ಇದರ ಕಾಮಗಾರಿಗಳು ಅನುಷ್ಠಾನವಾದಲ್ಲಿ ಬೆಣ್ಣೆಹಳ್ಳ ಮತ್ತು ತುಪ್ಪರಿ ಹಳ್ಳ ಪಾತ್ರದ 141 ಕಿಮೀ., ವ್ಯಾಪ್ತಿಯ ನವಲಗುಂದ, ಅಣ್ಣಿಗೇರಿ ಭಾಗದ ರೈತರು ಸೇರಿದಂತೆ ಹಾವೇರಿ, ಗದಗ ಜಿಲ್ಲೆಗಳ ರೈತರಿಗೂ ಉಪಯೋಗವಾಗಲಿದೆ’ ಎಂದು ಹೇಳಿದರು.
‘ತುಪ್ಪರಿ ಹಳ್ಳ ಏತ ನೀರಾವರಿ ಯೋಜನೆ ಕಾಮಗಾರಿ ಸೇರಿದಂತೆ ಎಲ್ಲಾ ಕಾಮಗಾರಿಗಳು ಬೇಗನೆ ಮುಗಿದಲ್ಲಿ ಯೋಜನೆಯಡಿ 1.5 ಟಿಎಂಸಿ ನೀರನ್ನು ಬಳಸಿಕೊಂಡು ಸಾವಿರಾರು ಹೆಕ್ಟೇರ್ ಪ್ರದೇಶದ ಜಮೀನುಗಳಿಗೆ ಯೋಗೇಶ್ವರ ಏತ ನೀರಾವರಿ ಯೋಜನೆ ಮೂಲಕ ನೀರುಣಿಸಲು ಅನುಕೂಲವಾಗುತ್ತದೆ’ ಎಂದರು.
ಶಿರಗುಪ್ಪಿ: 8ರಂದು ಭೂಮಿ ಪೂಜೆ
‘ಹುಬ್ಬಳ್ಳಿ ತಾಲ್ಲೂಕಿನ ಶಿರಗುಪ್ಪಿ ಗ್ರಾಮದ ಬಳಿ ಫೆ.8ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಣ್ಣೆಹಳ್ಳ ಮತ್ತು ತುಪ್ಪರಿ ಹಳ್ಳದ ಪ್ರವಾಹ ನಿಯಂತ್ರಣ ಯೋಜನೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈಗಾಗಲೇ ಬಿಡುಗಡೆ ಮಾಡಿರುವ ₹200 ಕೋಟಿ ಅನುದಾನ ಕಾಮಗಾರಿಯ ಯಂತ್ರಗಳ ಮಾಲೀಕರಿಗೆ ಅನುಕೂಲವಾಗದೇ ರೈತರಿಗೆ ಅನುಕೂಲವಾಗಬೇಕು’ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.